ರಾಜ್ಯದ ರೈತರಿಗೆ ಪ್ರತಿದಿನ 7 ಗಂಟೆ ವಿದ್ಯುತ್ ಪೂರೈಸಲು ರಾಜ್ಯ ಸರಕಾರ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಇಂಧನ ಸಚಿವ ಕೆಜೆ ಜಾರ್ಜ್ ಹಾಗೂ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ನಂತರ ಅವರು ಮಾತನಾಡಿದರು.
ಇಂಧನ ಇಲಾಖೆಯ ಪ್ರಗತಿ ಪರಿಶೀಲನೆ ಬಗ್ಗೆ ಚರ್ಚೆ ಮಾಡಿದೆವು. ಮೂರು ವಾರಗಳ ಹಿಂದೆ ಇಂಧನ ಇಲಾಖೆ ಪರಿಶೀಲನಾ ಸಭೆ ಮಾಡಿದ್ದೆವು. ಆಗ ರೈತರಿಗೆ 5 ತಾಸು ಕರೆಂಟ್ ಕೊಡುತ್ತೇವೆ ಅಂತ ಹೇಳಿದ್ದೆವು ಎಂದು ಅವರು ಹೇಳಿದರು.
ರೈತರಿಗೆ ಪ್ರತಿ ದಿನ 5 ಗಂಟೆಗೆ ತ್ರಿ ಫೇಸ್ ಕರೆಂಟ್ ಕೊಡಲು ಸೂಚನೆ ನೀಡಿದ್ದೆ. ಕೆಲವು ರೈತರು ಭೇಟಿಯಾಗಿ 7 ಗಂಟೆ ಕೊಡಲು ಕೇಳಿದ್ದರು. ಈ ಹಿನ್ನೆಲೆಯಲ್ಲಿ ಯಾದಗಿರಿ, ಬಳ್ಳಾರಿ, ಕೊಪ್ಪಳ ಭಾಗದಲ್ಲಿ 7 ಗಂಟೆಗೆ ಕೊಡಿ ಅಂತ ಹೇಳಿದ್ದೆ ಎಂದು ಅವರು ವಿವರಿಸಿದರು.
ಇವತ್ತು ಪರಿಶೀಲನಾ ಸಭೆ ಮಾಡಿದ ನಂತರ ಉಳಿದ ಭಾಗದಲ್ಲೂ ಅಂದರೆ ರಾಜ್ಯದ ಎಲ್ಲಾ ರೈತರಿಗೂ 7 ಗಂಟೆ ಕರೆಂಟ್ ಕೊಡಲು ತೀರ್ಮಾನ ಮಾಡಿದ್ದೇವೆ. ಬಳ್ಳಾರಿ, ರಾಯಚೂರಿನಲ್ಲಿ ಥರ್ಮಲ್ ಪವರ್ ಉತ್ಪಾದನೆ ಆಗುತ್ತೆ. ಇದರಿಂದ ಸಮಸ್ಯೆ ಬರುವುದಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.