CM Siddaramaiah As Bus Conductor : ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಶಕ್ತಿ ಭಾನುವಾರ ಉದ್ಘಾಟನೆಗೊಳ್ಳಲಿದೆ. ಸಿಎಂ ಸಿದ್ದರಾಮಯ್ಯ ಅವರು ಭಾನುವಾರ ಬಸ್‌ ಕಂಡಕ್ಟರ್‌ ಆಗುವ ಮೂಲಕ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ಯೋಜನೆಗೆ ಹಸಿರು ನಿಶಾನೆ ತೋರಲಿದ್ದಾರೆ. ಮೆಜೆಸ್ಟಿಕ್‌ನಿಂದ ವಿಧಾನಸೌಧಕ್ಕೆ ತೆರಳುವ ರೂಟ್‌ ನಂ 43 ಬಸ್‌ನಲ್ಲಿ ಸಿದ್ದರಾಮಯ್ಯ ಮಹಿಳೆಯರಿಗೆ ಉಚಿತ ಟಿಕೆಟ್‌ ವಿತರಿಸಲಿದ್ದಾರೆ.

CM Siddaramaiah
ಮುಖ್ಯಮಂತ್ರಿ ಸಿದ್ದರಾಮಯ್ಯ

ಹೈಲೈಟ್ಸ್‌:

  • ಭಾನುವಾರ ಬಸ್‌ ಕಂಡಕ್ಟರ್‌ ಆಗಲಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ
  • ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಯೋಜನೆಯ ವಿಭಿನ್ನ ಉದ್ಘಾಟನೆ
  • ಮೆಜೆಸ್ಟಿಕ್‌ನಿಂದ ವಿಧಾನಸೌಧಕ್ಕೆ ತೆರಳುವ ಬಸ್‌ನಲ್ಲಿ ಸಿಎಂ ಟಿಕೆಟ್‌ ವಿತರಣೆ

ಬೆಂಗಳೂರು : ಟಿಕೆಟ್‌.. ಟಿಕೆಟ್.. ಅಂತಾ ಮುಖ್ಯಮಂತ್ರಿ ಸಿದ್ದರಾಮಯ್ಯ ಬಸ್‌ನಲ್ಲಿ ಕಂಡಕ್ಟರ್‌ ಆದ್ರೆ ಹೇಗಿರುತ್ತೆ ಎಂಬ ಕುತೂಹಲ ನಿಮಗೆ ಇದ್ಯಾ? ಈ ಕುತೂಹಲಕ್ಕೆ ಭಾನುವಾರವೇ ಉತ್ತರ ಸಿಗಲಿದ್ದು, ಸಂಡೇ ಸಿದ್ದರಾಮಯ್ಯ ಪಾರ್ಟ್‌ ಟೈಂ ಕಂಡಕ್ಟರ್‌ ಆಗಿ ಬದಲಾಗಲಿದ್ದಾರೆ. ಜೂನ್‌ 11 ರಂದು ಶಕ್ತಿ ಯೋಜನೆಗೆ ವಿನೂತನವಾಗಿಯೇ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಮಹಿಳೆಯರಿಗೆ ಟಿಕೆಟ್‌ ನೀಡುವ ಮೂಲಕ ಮಹಿಳೆಯರ ಉಚಿತ ಬಸ್‌ ಪ್ರಯಾಣಕ್ಕೆ ಹಸಿರು ನಿಶಾನೆ ತೋರಲಿದ್ದಾರೆ.

ಬಿಎಂಟಿಸಿಯ ರೂಟ್‌ ನಂಬರ್‌ 43ರ ಬಸ್‌ನಲ್ಲಿ ಭಾನುವಾರ ಕಂಡಕ್ಟರ್‌ ಆಗುವ ಸಿದ್ದರಾಮಯ್ಯ ಮಹಿಳಾ ಪ್ರಯಾಣಿಕರ ಬಳಿ ತೆರಳಿ ಟಿಕೆಟ್ ಟಿಕೆಟ್ ಎನ್ನುತ್ತಾ ಉಚಿತ ಟಿಕೆಟ್‌ ವಿತರಿಸಲಿದ್ದಾರೆ! ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕಿ ಗ್ಯಾರಂಟಿ ಯೋಜನೆಗಳಲ್ಲಿ ಮೊಟ್ಟಮೊದಲ ಯೋಜನೆಯಾಗಿ ಶಕ್ತಿ ಯೋಜನೆ ಜೂನ್‌ 11ರಂದು ಜಾರಿಗೆ ಬರಲಿದೆ. ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ಅವಕಾಶ ನೀಡುವ ‘ಶಕ್ತಿ’ ಯೋಜನೆ ಈ ರೀತಿ ವಿಭಿನ್ನವಾಗಿ ಉದ್ಘಾಟನೆಗೊಳ್ಳಲಿದೆ.

ಉಚಿತ ವಿದ್ಯುತ್, ಉಚಿತ ಬಸ್ ಪ್ರಯಾಣದ ಲಾಭ ಪಡೆಯೋದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
ಸಿಎಂ ಸಿದ್ದರಾಮಯ್ಯ ಅವರು ಮೆಜೆಸ್ಟಿಕ್‌ನಿಂದ ವಿಧಾನಸೌಧಕ್ಕೆ ತೆರಳುವ ರೂಟ್‌ ನಂ. 43ರಲ್ಲಿ ಕಂಡಕ್ಟರ್‌ ಆಗಿ ಮಹಿಳೆಯರಿಗೆ ಟಿಕೆಟ್‌ ವಿತರಿಸಲಿದ್ದಾರೆ. ಬಳಿಕ ವಿಧಾನಸೌಧದಲ್ಲಿ ಜರುಗುವ ಅದ್ಧೂರಿ ಕಾರ್ಯಕ್ರಮದಲ್ಲಿ ಯೋಜನೆಗೆ ಅಧಿಕೃತ ಚಾಲನೆ ನೀಡಲಿದ್ದಾರೆ. ಈ ವೇಳೆ ಶಕ್ತಿ ಯೋಜನೆಯ ಲೋಗೋ ಹಾಗೂ ಸ್ಮಾರ್ಟ್‌ ಕಾರ್ಡ್‌ ಕೂಡ ಬಿಡುಗಡೆಯಾಗಲಿದೆ. ಸಿದ್ದರಾಮಯ್ಯ ಅವರಿಗೆ ಈ ಸಮಯದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಸಾಥ್‌ ಕೊಡಲಿದ್ದಾರೆ.

ಜಿಲ್ಲೆಗಳಲ್ಲಿ ಜಿಲ್ಲಾ ಮುಖ್ಯಸ್ಥರು, ಸಚಿವರು, ಶಾಸಕರು ಯೋಜನೆಗೆ ಏಕಕಾಲದಲ್ಲಿ ಚಾಲನೆ ನೀಡಲಿದ್ದಾರೆ. ಶದ ಗಮನ ಸೆಳೆದಿರುವ ಗ್ಯಾರಂಟಿ ಯೋಜನೆಗಳು ಉದ್ಘಾಟನೆ ಕೂಡ ವಿಭಿನ್ನವಾಗಿರಬೇಕು ಎಂಬ ಆಲೋಚನೆಯನ್ನು ಸಿದ್ದರಾಮಯ್ಯ ಹೊಂದಿದ್ದಾರೆ. ಈ ಹಿನ್ನೆಲೆ ಸಿಎಂ ಅವರ ಥಿಂಕ್‌ ಟ್ಯಾಂಕ್‌ ಈ ರೀತಿಯ ಕಾರ್ಯಕ್ರಮ ಮಾಡಲು ಮುಂದಾಗಿದೆ. ಈ ರೀತಿಯ ಉದ್ಘಾಟನೆ ಕೇವಲ ಶಕ್ತಿ ಯೋಜನೆಗೆ ಮಾತ್ರ ಸೀಮಿತವಾಗಿಲ್ಲ. ಉಳಿದ ನಾಲ್ಕು ಗ್ಯಾರಂಟಿ ಯೋಜನೆಗಳ ಉದ್ಘಾಟನೆ ವಿಶೇಷವಾಗಿರಬೇಕು. ಕೇವಲ ರಾಜಧಾನಿಯಲ್ಲಿ ಮಾತ್ರ ಕಾರ್ಯಕ್ರಮಗಳ ಉದ್ಘಾಟನೆಯಾಗದೇ ಐದು ವಿಭಾಗೀಯ ಕೇಂದ್ರಗಳಲ್ಲಿ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲು ಚಿಂತಿಸಲಾಗಿದೆ.

ಎಲ್ಲ ಯೋಜನೆಗಳು ಬೇರೆ ಬೇರೆ ಕಡೆ ಉದ್ಘಾಟನೆ!

ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ನೀಡುವ ಶಕ್ತಿ ಯೋಜನೆ ಬೆಂಗಳೂರಿನಲ್ಲಿ ಉದ್ಘಾಟನೆಯಾದರೆ, ಕುಟುಂಬದ ಪ್ರತಿ ಸದಸ್ಯರಿಗೆ 10 ಕೆಜಿ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆ ಮೈಸೂರಿನಲ್ಲಿ ಜಾರಿಗೆ ಬರಲಿದೆ. ಕುಟುಂಬದ ಯಜಮಾನಿಗೆ ಮಾಸಿಕ 2,000 ರೂ. ನೀಡುವ ಗೃಹಲಕ್ಷ್ಮೀ ಯೋಜನೆ ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಉದ್ಘಾಟನೆಯಾಗುವ ಸಾಧ್ಯತೆ ಇದೆ. ಇನ್ನು 200 ಯೂನಿಟ್‌ವರೆಗೂ ಉಚಿತವಾಗಿ ವಿದ್ಯುತ್‌ ನೀಡುವ ಗೃಹಜ್ಯೋತಿ ಯೋಜನೆಗೆ ಕಲಬುರಗಿಯಲ್ಲಿ ಹಸಿರು ನಿಶಾನೆ ತೋರುವ ಸಾಧ್ಯತೆಯಿದೆ. ನಿರುದ್ಯೋಗಿ ಪದವೀಧರರು ಹಾಗೂ ಡಿಪ್ಲೋಮಾ ಹೊಂದಿರುವವರಿಗೆ ಭತ್ಯೆ ನೀಡುವ ಯುವನಿಧಿ ಯೋಜನೆ ಮಂಗಳೂರಲ್ಲಿ ಉದ್ಘಾಟನೆಯಾಗುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *