ಕಾಂಗ್ರೆಸ್​ನ ಶಕ್ತಿ ಯೋಜನೆ ಉದ್ಘಾಟನಾ ಕಾರ್ಯಕ್ರಮಕ್ಕೆ ಕೇಂದ್ರ ಸಚಿವೆ ನಿರ್ಮಾಲಾ ಸೀತಾರಾಮನ್, ಕೇಂದ್ರ ಸಚಿವ ರಾಜೀವ್‌ ಚಂದ್ರ ಶೇಖರ್ ಸೇರಿದಂತೆ ಬೆಂಗಳೂರಿನ ಎಲ್ಲಾ ಸಂಸದರಿಗೂ ಆಹ್ವಾನ ನೀಡಲಾಗಿದೆ.

Shakti Scheme: 'ಶಕ್ತಿ' ಯೋಜನೆ ಉದ್ಘಾಟನೆಗೆ ನಿರ್ಮಲಾ ಸೀತಾರಾಮನ್‌ಗೆ ಆಹ್ವಾನ, ಮಧ್ಯಾಹ್ನ 1 ಗಂಟೆ ನಂತರ ಮಹಿಳೆಯರಿಗೆ ಫ್ರೀ ಬಸ್‌

ನಿರ್ಮಲಾ ಸೀತಾರಾಮನ್‌

ಬೆಂಗಳೂರು: ಹೊಸ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆ (Shakti Scheme) ಚಾಲನೆಗೆ ಕ್ಷಣಗಣನೆ ಶುರುವಾಗಿದೆ. ಕಾಂಗ್ರೆಸ್​ನ ಐದು ಗ್ಯಾರೆಂಟಿಗಳಲ್ಲಿ(Congress Guarantee) ಒಂದಾದ ಶಕ್ತಿ ಯೋಜನೆಗೆ ಭಾನುವಾರ ಬೆಳಗ್ಗೆ 11 ಗಂಟೆಗೆ ವಿಧಾನಸೌಧದ ಗ್ರ್ಯಾಂಡ್ ಸ್ಟೇಪ್ಸ್ ಮುಂಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಚಾಲನೆ ನೀಡಲಿದ್ದಾರೆ. ಈ ಯೋಜನೆ ಸರ್ಕಾರಿ ಬಸ್​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಡುತ್ತದೆ(Free Bus Travel For Women Scheme). ಇನ್ನು ಈ ಉದ್ಘಾಟನಾ ಕಾರ್ಯಕ್ರಮಕ್ಕೆ ಕೇಂದ್ರ ಸಚಿವರಿಗೂ ಆಹ್ವಾನ ನೀಡಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಜೊತೆಗೆ ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಅವರಿಗೆ ಆಹ್ವಾನಿಸಲಾಗಿದೆ.

ಭಾನುವಾರದ ಸರ್ಕಾರಿ ಕಾರ್ಯಕ್ರಮ ಹೇಗಿರುತ್ತೆ?

11 ಗಂಟೆಗೆ ಶಕ್ತಿ ಯೋಜನೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ನಾಡಗೀತೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತೆ. ಶಕ್ತಿ ಯೋಜನೆ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಸ್ವಾಗತಿಸಲಿದ್ದಾರೆ. ಸಿಎಂ ಸಿದ್ದರಾಮಯ್ಯನವರು “ಶಕ್ತಿ” ಯೋಜನೆ ಲೋಗೋ ಅನಾವರಣಗೊಳಿಸುತ್ತಾರೆ. ಬಳಿಕ ಸ್ಮಾರ್ಟ್ ಕಾರ್ಡ್ ಮಾಡೆಲ್ ಅನಾವರಣಗೊಳಿಸಲಾಗುತ್ತೆ. ನಂತರ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಶಕ್ತಿ ಯೋಜನೆ ಕುರಿತು ಭಾಷಣ ಮಾಡುತ್ತಾರೆ.

ಬಿಎಂಟಿಸಿ ಬಸ್​ನಲ್ಲಿ ಪ್ರಯಾಣ ಬೆಳೆಸಲಿರುವ ಸಿಎಂ

ವಿಧಾನ ಸೌಧದ ಮುಂಭಾಗ 4 ನಿಗಮದ(BMTC, KSRTC, NWKRTC,KKRTC) ಸಾಮಾನ್ಯ ಬಸ್ ನಿಲ್ಲಿಸಲು ಫ್ಲಾನ್ ಮಾಡಲಾಗಿದೆ. ಎಲ್ಲ ಬಸ್ ಗಳಲ್ಲೂ ‘0’ ಚಾರ್ಜ್ ಟಿಕೆಟ್ ನೀಡಲು ತಯಾರಿ ನಡೆದಿದೆ. ಎಲ್ಲ ಸಚಿವರು ಅಥವಾ ಶಾಸಕರು ಈ ನಾಲ್ಕು ನಿಗಮದ ಯಾವ ಬಸ್ಗಳಲ್ಲಿ ಬೇಕಿದ್ರು ಪ್ರಯಾಣಿಸಬಹುದು. ಕಾರ್ಯಕ್ರಮದ ಭಾಗವಾಗಿ BS- 6 ಬಿಎಂಟಿಸಿ ಬಸ್​ನಲ್ಲಿ ಸಿಎಂ ಸಿದ್ದರಾಮಯ್ಯ ಪ್ರಯಾಣ ಬೆಳೆಸಲಿದ್ದಾರೆ. ಹಾಗೂ ಕಂಡಕ್ಟರ್ ರಿಂದ 0 ಚಾರ್ಜ್ ಟಿಕೆಟ್ ಪಡೆದು ಬಸ್​ನಲ್ಲಿರುವ ಮಹಿಳೆಯರಿಗೆ ನೀಡಲಿದ್ದಾರೆ. ಬಿಎಂಟಿಸಿಯ BS- 6 ಬಸ್ ನಲ್ಲಿ ಸಿಎಂ ಸಿಟಿ ರೌಂಡ್ಸ್ ಹೋಗಲಿದ್ದಾರೆ. ವಿಧಾನ ಸೌಧ ಒಂದು ರೌಂಡ್, ಮೆಜೆಸ್ಟಿಕ್ ಅಥವಾ ಮೈಸೂರು ಬ್ಯಾಂಕ್ ಸರ್ಕಲ್ ವರೆಗೆ ಬಿಎಂಟಿಸಿಯಲ್ಲಿ ಒಂದು ರೌಂಡ್ ಹೋಗಲಿದ್ದಾರೆ. ಬಸ್​ನಲ್ಲಿರುವ ಅಧಿಕಾರಿಗಳು ಸೇರಿದಂತೆ ಎಲ್ಲ ಮಹಿಳೆಯರಿಗೆ 0 ಚಾರ್ಜ್ ಟಿಕೆಟ್ ನೀಡಲು ವ್ಯವಸ್ಥೆ ಮಾಡಲಾಗಿದೆ.

ವಿಧಾನಸೌಧದಲ್ಲಿ ಶಕ್ತಿ ಯೋಜನೆಗೆ ಚಾಲನೆ ದೊರೆಯುತ್ತಿದ್ದಂತೆ ಎಲ್ಲ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಶಕ್ತಿ ಯೋಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತೆ. ಅಲ್ಲಿನ ಸ್ಥಳೀಯ ಶಾಸಕರು ಅಥವಾ ಜನಪ್ರತಿನಿಧಿಗಳಿಂದ ಶಕ್ತಿ ಯೋಜನೆಗೆ ಚಾಲನೆ ನೀಡಲಾಗುತ್ತೆ. ಮಧ್ಯಾಹ್ನ 1 ಗಂಟೆಯ ನಂತ್ರ ಬಿಎಂಟಿಸಿ, ಕೆಎಸ್ಆರ್ಟಿಸಿ, ಎನ್ ಡಬ್ಲ್ಯೂಆರ್ಟಿಸಿ, ಕೆಕೆಆರ್ಟಿಸಿ ಬಸ್​ಗಳಲ್ಲಿ‌ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತೆ. ಅಡ್ರೆಸ್ ಪ್ರೂಫ್ (ಆಧಾರ್ ಕಾರ್ಡ್ ,ವೋಟರ್ ಐಡಿ, ರೇಷನ್ ಕಾರ್ಡ್) ತೋರಿಸಿ ಮಹಿಳೆಯರು ಪ್ರಯಾಣಿಸಬಹುದು. 0 ಟಿಕೆಟ್ ಪಡೆದು ನಾಲ್ಕು ನಿಗಮದ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು.

ಯಾರೆಲ್ಲಾ ಕಾರ್ಯಕ್ರಮದಲ್ಲಿ ಭಾಗಿಯಾಗ್ತಾರೆ?

ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಶಕ್ತಿ ಯೋಜನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗರೆಡ್ಡಿ ಸೇರಿದಂತೆ ಕಾಂಗ್ರೆಸ್​ನ ಶಾಸಕರು, ಸಚಿವರು ಭಾಗಿಯಾಗಲಿದ್ದಾರೆ. ಇನ್ನು ಬಿಜೆಪಿ ಶಾಸಕ ಎಸ್.ಮುನಿರಾಜು, ಸಿಕೆ ರಾಮಮೂರ್ತಿ, ಉದಯ್ ಗರುಡಾಚಾರ್, ರವಿಸುಬ್ರಮಣ್ಯ, ಎಸ್.ಮಂಜುಳಾಗೆ ಆಹ್ವಾನ ನೀಡಲಾಗಿದೆ. ಕೇಂದ್ರ ಸಚಿವೆ ನಿರ್ಮಾಲಾ ಸೀತಾರಾಮನ್, ಕೇಂದ್ರ ಸಚಿವ ರಾಜೀವ್‌ ಚಂದ್ರ ಶೇಖರ್ ಸೇರಿದಂತೆ ಬೆಂಗಳೂರಿನ ಎಲ್ಲಾ ಸಂಸದರಿಗೂ ಆಹ್ವಾನ ನೀಡಲಾಗಿದೆ.

Leave a Reply

Your email address will not be published. Required fields are marked *