Adipurush Movie: ‘ಆದಿಪುರುಷ್​’ ಸಿನಿಮಾದಲ್ಲಿನ ಎಲ್ಲ ತಪ್ಪುಗಳಿಗೆ ನೇರವಾಗಿ ನಿರ್ದೇಶಕ ಓಂ ರಾವತ್​ ಅವರನ್ನು ಹೊಣೆಯಾಗಿಸಲಾಗುತ್ತಿದೆ. ಹಲವು ರೀತಿಯಲ್ಲಿ ಟೀಕೆ ಮಾಡಲಾಗುತ್ತಿದೆ.

‘ಆದಿಪುರುಷ್​’ ಸಿನಿಮಾ (Adipurush) ವಿಚಾರದಲ್ಲಿ ಪ್ರೇಕ್ಷಕರು ಅಂದುಕೊಂಡಿದ್ದೇ ಬೇರೆ, ಆಗಿದ್ದೇ ಬೇರೆ. ರಾಮಾಯಣದ ಕಥೆಯನ್ನು ದೊಡ್ಡ ಪರದೆ ಮೇಲೆ ನೋಡಲು ಹೋದ ಪ್ರೇಕ್ಷಕರಿಗೆ ಬೇಸರ ಆಗಿದೆ. ನಿರ್ದೇಶಕ ಓಂ ರಾವತ್​ (Om Raut) ಅವರು ಈ ಸಿನಿಮಾವನ್ನು ಕಟ್ಟಿಕೊಟ್ಟ ರೀತಿಗೆ ಸಿನಿಪ್ರಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಹುತೇಕ ಜನರಿಗೆ ಈ ಸಿನಿಮಾ ಇಷ್ಟ ಆಗಿಲ್ಲ. ನೇರವಾಗಿ ಎಲ್ಲರೂ ಕೆಟ್ಟ ಪ್ರತಿಕ್ರಿಯೆ ನೀಡಿದ್ದಾರೆ. ಇದು ‘ಆದಿಪುರುಷ್​’ ಚಿತ್ರತಂಡಕ್ಕೆ ನಿಜಕ್ಕೂ ಮುಜುಗರ ತರುವ ವಿಚಾರ. ಪ್ರಭಾಸ್​ (Prabhas) ಅವರ ಅಭಿಮಾನಿಗಳಿಗೂ ಇದರಿಂದ ಬೇಸರ ಆಗಿದೆ. ಓಂ ರಾವತ್​ ಅವರನ್ನು ಎಲ್ಲರೂ ಟೀಕೆ ಮಾಡುತ್ತಿದ್ದಾರೆ. ಈ ನಡುವೆ ಟ್ವೀಟ್​ ಮಾಡಿರುವ ಅವರ ‘ಜೈ ಶ್ರೀರಾಮ್​’ ಎಂದು ರಾಮನ ಜಪ ಮಾಡಿದ್ದಾರೆ. ಅದಕ್ಕೆ ಕಾರಣವೂ ಇದೆ

ಆದಿಪುರುಷ್​’ ಸಿನಿಮಾ ಪ್ರದರ್ಶನ ಆಗುವ ಎಲ್ಲ ಚಿತ್ರಮಂದಿರಗಳಲ್ಲೂ ಹನುಮಂತನಿಗಾಗಿ ಒಂದು ಸೀಟು ಮೀಸಲಿಡುವಂತೆ ಚಿತ್ರತಂಡ ಮನವಿ ಮಾಡಿಕೊಂಡಿತ್ತು. ಅದಕ್ಕೆ ಬಹುತೇಕ ಚಿತ್ರಮಂದಿರಗಳಿಂದ ಸ್ಪಂದನೆ ವ್ಯಕ್ತವಾಗಿದೆ. ಸೀಟು ಖಾಲಿ ಬಿಡುವುದು ಮಾತ್ರವಲ್ಲದೇ ಅದರ ಮೇಲೆ ಆಂಜನೇಯನ ಫೋಟೋ ಇಟ್ಟು ಪೂಜೆ ಮಾಡಲಾಗಿದೆ. ಹಲವು ಥಿಯೇಟರ್​ಗಳ ಫೋಟೋ ಹಂಚಿಕೊಂಡಿರುವ ಓಂ ರಾವತ್​ ಅವರು ಅದಕ್ಕೆ ‘ಜೈ ಶ್ರೀರಾಮ್​’ ಎಂದು ಕ್ಯಾಪ್ಷನ್​ ನೀಡಿ ಟ್ವೀಟ್​ ಮಾಡಿದ್ದಾರೆ. ಇದನ್ನು ಹೊರತುಪಡಿಸಿ ಅವರು ಬೇರೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

‘ಆದಿಪುರುಷ್​’ ಸಿನಿಮಾದಲ್ಲಿನ ಎಲ್ಲ ತಪ್ಪುಗಳಿಗೆ ನೇರವಾಗಿ ನಿರ್ದೇಶಕ ಓಂ ರಾವತ್​ ಅವರನ್ನು ಹೊಣೆಯಾಗಿಸಲಾಗುತ್ತಿದೆ. ಹಳೇ ರಾಮಾಯಣ ಧಾರಾವಾಹಿಗೆ ಹೋಲಿಸಿ ಮಾತನಾಡಲಾಗುತ್ತಿದೆ. ರಾವಣನನ್ನು ತೋರಿಸಿದ ರೀತಿ ಸರಿಯಿಲ್ಲ. ಪ್ರಭಾಸ್​ಗೆ ರಾಮನ ಪಾತ್ರ ಹೊಂದಿಕೆ ಆಗಿಲ್ಲ. ಗ್ರಾಫಿಕ್ಸ್​ ಗುಣಮಟ್ಟ ಸರಿಯಿಲ್ಲ ಎಂಬಿತ್ಯಾದಿ ಟೀಕೆಗಳು ಕೇಳಿಬಂದಿವೆ. ಈ ಎಲ್ಲದಕ್ಕೂ ಓಂ ರಾವತ್​ ಅವರು ಯಾವ ರೀತಿ ಉತ್ತರ ನೀಡುತ್ತಾರೆ ಎಂಬುದನ್ನು ತಿಳಿಯಲು ಎಲ್ಲರೂ ಕಾದಿದ್ದಾರೆ.

ಓಂ ರಾವತ್​ ಅವರು ‘ತಾನಾಜಿ’ ಸಿನಿಮಾ ಮೂಲಕ ದೊಡ್ಡ ಯಶಸ್ಸು ಪಡೆದಿದ್ದರು. ಆ ಚಿತ್ರದ ಬಳಿಕ ಅವರಿಗೆ ‘ಆದಿಪುರುಷ್​’ ಸಿನಿಮಾವನ್ನು ನಿರ್ದೇಶಿಸುವ ಜವಾಬ್ದಾರಿ ನೀಡಲಾಯಿತು. ಆದರೆ ಅವರು ಆರಂಭದಲ್ಲೇ ಎಡವಿದರು. ಟೀಸರ್​ ಬಿಡುಗಡೆ ಆದಾಗಲೇ ಜನರಿಂದ ಕಟು ಟೀಕೆ ವ್ಯಕ್ತವಾಗಿತ್ತು. ಆ ಬಳಿಕ ಒಂದಷ್ಟು ಬದಲಾವಣೆ ಮಾಡಿಕೊಳ್ಳುತ್ತಾರೆ ಎಂದು ವರದಿ ಆಗಿತ್ತು. ಆದರೆ ಆ ಬದಲಾವಣೆಗಳು ಪ್ರೇಕ್ಷಕರಿಗೆ ಸಮಾಧಾನ ತಂದಿಲ್ಲ

ಸೈಫ್​ ಅಲಿ ಖಾನ್​ ಅವರು ‘ಆದಿಪುರುಷ್​’ ಚಿತ್ರದಲ್ಲಿ ರಾವಣನ ಪಾತ್ರ ಮಾಡಿದ್ದಾರೆ. ಕೃತಿ ಸನೋನ್​ ಅವರು ಸೀತೆಯಾಗಿ ಅಭಿನಯಿಸಿದ್ದಾರೆ. ಸನ್ನಿ ಸಿಂಗ್​ ಅವರು ಲಕ್ಷ್ಮಣನಾಗಿ ಕಾಣಿಸಿಕೊಂಡಿದ್ದಾರೆ. ದೇವದತ್ತ ನಾಗೆ ಮಾಡಿದ ಆಂಜನೇಯನ ಪಾತ್ರಕ್ಕೆ ಜನಮೆಚ್ಚುಗೆ ಸಿಕ್ಕಿದೆ. ಮೊದಲ ದಿನ ಈ ಸಿನಿಮಾಗೆ ವಿಶ್ವಾದ್ಯಂತ 150 ಕೋಟಿ ರೂಪಾಯಿ ಕಲೆಕ್ಷನ್​ ಆಗಿದೆ ಎಂದು ವರದಿ ಆಗಿದೆ

Leave a Reply

Your email address will not be published. Required fields are marked *