Cloud seeding: ಮಳೆ ಬಾರದಿದ್ದರೆ ಮೋಡ ಬಿತ್ತನೆಗೆ ಚಿಂತನೆ: ಸಚಿವ ಮಧು ಬಂಗಾರಪ್ಪ

Cloud seeding: ಮಳೆ ಬಾರದಿದ್ದರೆ ಮೋಡ ಬಿತ್ತನೆಗೆ ಚಿಂತನೆ: ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ ಜಿಲ್ಲೆಯಲ್ಲಿ ನೀರಿನ ಅಭಾವ ಸೃಷ್ಟಿಯಾಗಿಲ್ಲ. ಈಗ ಇರುವ ನೀರು 20 ದಿನಗಳವರೆಗೆ ಸಾಕು. ಮಳೆ ಬಾರದೇ ಹೋದರೆ ಮೋಡ ಬಿತ್ತನೆ ಬಗ್ಗೆ ಯೋಚಿಸಲಾಗುತ್ತದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.ಸಚಿವ ಮಧು ಬಂಗಾರಪ್ಪ ಹೇಳಿಕೆ

ಶಿವಮೊಗ್ಗ : ರಾಜ್ಯದಲ್ಲಿ ಮಳೆ ಬಾರದೆ ಹೋದರೆ ಮೋಡ ಬಿತ್ತನೆ ಮಾಡುವ ಕುರಿತು ಚಿಂತಿಸಲಾಗುವುದು ಎಂದು‌ ಜಿಲ್ಲಾ ಉಸ್ತುವಾರಿ ಹಾಗೂ ಶಿಕ್ಷಣ ಸಚಿವ‌ ಮಧು ಬಂಗಾರಪ್ಪ ತಿಳಿಸಿದರು.

ಶಿವಮೊಗ್ಗ ಜಿಲ್ಲಾ ಪಂಚಾಯತ್​ನ ನಜೀರ್ ಸಾಬ್ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲೆಯ ಕುಡಿಯುವ ನೀರು ಟಾಸ್ಕ್ ಫೋರ್ಸ್​ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನೀರಿಲ್ಲದಂತಹ ಸಂದರ್ಭ ಸೃಷ್ಟಿ ಆಗಿಲ್ಲ. ಅಧಿಕಾರಿಗಳ ಮಾಹಿತಿ ಪ್ರಕಾರ ಈಗ ಇರುವ ನೀರು ಇನ್ನೂ 20 ದಿನಗಳವರೆಗೆ ಸಾಕಾಗುತ್ತದೆ. 20 ದಿನಗಳಲ್ಲಿ ಮಳೆಯಾದರೆ ನೀರಿನ ಅಭಾವ ಕಡಿಮೆಯಾಗಲಿದೆ ಎಂದರು.

ಬೇಗ ಮಳೆ ಬರುವ ವಾತಾವರಣ ಕಾಣಿಸುತ್ತಿದೆ. ಪ್ರತಿ ವರ್ಷ ಅತಿವೃಷ್ಟಿ, ಅನಾವೃಷ್ಟಿ ಎರಡೂ ಆಗುತ್ತದೆ. ಕುಡಿಯುವ ನೀರಿಗೆ ಆದ್ಯತೆ ಕೊಡಬೇಕು. ಶಿವಮೊಗ್ಗ ಜಿಲ್ಲೆಯಲ್ಲಿ 84 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಮೋಡ ಬಿತ್ತುವ ಯೋಜನೆಯ ಪ್ರಸ್ತಾಪ ಇದೆ. ಮಳೆ ಬರದಿದ್ದರೆ ಮೋಡ ಬಿತ್ತನೆ ಮಾಡುವ ಬಗ್ಗೆ ಚಿಂತನೆ ನಡೆಯುತ್ತದೆ ಎಂದು ಹೇಳಿದರು.

ಸಂಸದ ಬಿ.ವೈ.ರಾಘವೇಂದ್ರ ವಿರುದ್ಧ ವಾಗ್ದಾಳಿ: ಕಾಂಗ್ರೆಸ್ ಸರ್ಕಾರ ಬಂದಾಗ ಬರ ಬರುತ್ತದೆ ಎಂಬ ಸಂಸದ ರಾಘವೇಂದ್ರ ಅವರ ಹೇಳಿಕೆ ಪ್ರತಿಕ್ರಿಯಿಸಿ, ರಾಜ್ಯದ ಜನರು ಅದಕ್ಕೆ ಅವರಿಗೆ ಬರೆ ಹಾಕಿದ್ದಾರೆ. ಇದರಿಂದ ಅವರು‌ ಕೇವಲ 67 ಸ್ಥಾನಗಳನ್ನು ಮಾತ್ರ ಪಡೆದಿದ್ದಾರೆ. ಕಳೆದ 10-12 ವರ್ಷಗಳಿಂದ ಬರೀ ವಿಮಾನ ನಿಲ್ದಾಣ ಅಂತಿದ್ದಾರೆ. ಮೊದಲು ವಿಮಾನ ತಂದು ನಿಲ್ಲಿಸಲು ಹೇಳಿ ಎಂದು ವಾಗ್ದಾಳಿ ನಡೆಸಿದರು.

ಶಕ್ತಿ ಯೋಜನೆ ಜಾರಿ ವಿಚಾರವಾಗಿ ಮಾತನಾಡಿ, ನಿಯಮ ಇರುವುದು 50 ಪರ್ಸೆಂಟ್ ಮಹಿಳೆಯರಿಗೆ ಅವಕಾಶ ಎಂದು. 50 ಪರ್ಸೆಂಟ್ ಮೇಲೆ ಪುರುಷರಿಗೆ ಕೊಡಬೇಕು.‌ ಆದರೆ ಉಚಿತ ಎನ್ನುವ ಕಾರಣಕ್ಕೆ ಮಹಿಳೆಯರು ಸರ್ಕಾರಿ ಬಸ್​ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಉಚಿತ ಸಿಕ್ಕಿದಾಗ ಉಪಯೋಗ ಆಗುವ ರೀತಿಯಲ್ಲಿ ಬಳಕೆ ಮಾಡಬೇಕು. ಬಡವರಿಗೆ ಸಹಕಾರ ಆಗಲಿ ಎಂದು ಈ ಯೋಜನೆ ಮಾಡಿದ್ದಾರೆ.

ಖಾಸಗಿ ಬಸ್​ನಲ್ಲಿ ಉಚಿತ ಪ್ರಯಾಣ ಮಾಡಿ ಎಂಬ ಬಿಜೆಪಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಕೆಲವರಿಗೆ ಮನೆ ಇಲ್ಲ. ಬಿಜೆಪಿಯವರ ಮನೆಯನ್ನು ಮನೆ ಇಲ್ಲದವರಿಗೆ ಬಿಟ್ಟು ಕೊಡುವುದಕ್ಕೆ ಹೇಳಿ ಎಂದು ತಿರುಗೇಟು ನೀಡಿದರು. ಖಾಸಗಿ ಬಸ್ ಮತ್ತು ಟ್ಯಾಕ್ಸಿಯವರಿಗೆ ಸರ್ಕಾರದ ಮಟ್ಟದಲ್ಲಿ ಸ್ಪಂದನೆ ಮಾಡಬೇಕಿದೆ ಎಂದರು.

ಶಿಕ್ಷಕರ ನೇಮಕಾತಿ ವಿಚಾರವಾಗಿ ಮಾತನಾಡಿ, ಶಿಕ್ಷಕರ ನೇಮಕಾತಿ ವಿಚಾರ ನ್ಯಾಯಾಲಯದಲ್ಲಿದೆ. ಈ ಬಗ್ಗೆ ಅಡ್ವೋಕೇಟ್ ಜನರಲ್ ಅವರ ಜೊತೆ ಚರ್ಚೆ ಮಾಡಿದ್ದೇನೆ. ಶೀಘ್ರದಲ್ಲೇ ಎಲ್ಲವೂ ಬಗೆ ಹರಿಯುವ ನಿರೀಕ್ಷೆ ಇದೆ‌. ಈ ಸಮಸ್ಯೆ ಬಗೆಹರಿದು ನೇಮಕಾತಿ ಆದೇಶ ಕೊಟ್ಟರೆ ಸ್ವಲ್ಪಮಟ್ಟಿಗೆ ಶಿಕ್ಷಕರ ಕೊರತೆ ಕಡಿಮೆ ಆಗುತ್ತಿದೆ ಎಂದು ಹೇಳಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಸೆಲ್ವಮಣಿ, ಎಸ್ಪಿ ಮಿಥುನ್ ಕುಮಾರ್, ಜಿಲ್ಲಾ ಪಂಚಾಯತ್ ಸಿಇಓ ಸ್ನೇಹಲ್ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು‌ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *