ವಿಧಾನಸಭೆ ಚುನಾವಣೆ ಗೆಲುವಿನ ಬಳಿಕ ಕಾಂಗ್ರೆಸ್ ಮತ್ತಷ್ಟು ಆ್ಯಕ್ಟೀವ್ ಆಗಿದ್ದು, ನೂತನ ಸಚಿವರನ್ನು ದೆಹಲಿಗೆ ಬರುವಂತೆ ಹೈಕಮಾಂಡ್ ಬುಲಾವ್ ನೀಡಿದೆ.

ವಿಧಾನಸಭೆ ಚುನಾವಣೆ ಗೆಲುವಿನ ಬಳಿಕ ಕಾಂಗ್ರೆಸ್ ಮತ್ತಷ್ಟು ಆ್ಯಕ್ಟೀವ್: ದೆಹಲಿಗೆ ಬರುವಂತೆ ನೂತನ ಸಚಿವರಿಗೆ ಹೈಕಮಾಂಡ್ ಬುಲಾವ್

ಸಿದ್ದರಾಮಯ್ಯ ಸಚಿವ ಸಂಪುಟ

ಬೆಂಗಳೂರು: ವಿಧಾನಸಭೆ ಚುನಾವಣೆ (Karnataka Assembly Elections 2023) ಗೆಲುವಿನ ಬಳಿಕ ಕಾಂಗ್ರೆಸ್ ಮತ್ತಷ್ಟು ಆ್ಯಕ್ಟೀವ್ ಆಗಿದ್ದು, ನೂತನ ಸಚಿವರಿಗೆ ಕಾಂಗ್ರೆಸ್ ಹೈಕಮಾಂಡ್ (Congress High command) ಬಿಗ್ ಟಾಸ್ಕ್ ಕೊಟ್ಟಿದೆ. ಲೋಕಸಭೆ ಚುನಾವಣೆಗೆಯಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲಲು ಕಾಂಗ್ರೆಸ್ ಗುರಿ ಹೊಂದಿದ್ದು, ಇದಕ್ಕೆ ನೂತನ ಸಚಿವರಿಗೆ ಹೈಕಮಾಂಡ್​ ಕೆಲ ಸಲಹೆ ಸೂಚನೆಗಳನ್ನು ನೀಡಿದೆ. ಕಾಂಗ್ರೆಸ್ ಸರ್ಕಾರ ಜಾರಿ ಮಾಡಿದ ಗ್ಯಾರಂಟಿಗಳು ಗ್ರಾಮಗಳವರೆಗೂ ತಲುಪಿಸಬೇಕು. ಕಾಂಗ್ರೆಸ್ ಆಡಳಿತದ ಬಗ್ಗೆ ಜನರಿಗೆ ಮನವರಿಕೆ ಮಾಡಬೇಕು ಎಂದು ಹೈಕಮಾಂಡ್​ ಸಚಿವರಿಗೆ ಸೂಚಿಸಿದೆ. ಈ ಬಗ್ಗೆ ಸಚಿವರಿಗೆ ಖಡಕ್​ ಆಗಿ ಮನದಟ್ಟು ಮಾಡಿಕೊಡಲು ಕಾಂಗ್ರೆಸ್ ಹೈಕಮಾಂಡ್​, ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದ ಎಲ್ಲ ಸಚಿವರಿಗೆ ದೆಹಲಿಗೆ ಬರುವಂತೆ ಬುಲಾವ್ ನೀಡಿದೆ.

ಹೌದು.. ರಾಜ್ಯದ ನೂತನ ಸಚಿವರಿಗೆ ದಿಲ್ಲಿಯಲ್ಲಿ “ನೀತಿ ಪಾಠ” ನಡೆಯಲಿದೆ. ಸರಕಾರ ಹಾಗೂ ಪಕ್ಷದ ನಡುವಿನ ಸಮನ್ವಯ ಮತ್ತು ಸಚಿವರ ಕಾರ್ಯವೈಖರಿ ಹೇಗಿರಬೇಕು ಎಂಬ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್‌ ಗಾಂಧಿ ಅವರು ಬೋಧಿಸಲಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರತುಪಡಿಸಿ ಎಲ್ಲ ಸಚಿವರು ಮುಂದಿನ ವಾರ ದೆಹಲಿಗೆ ತೆರಳುವ ಸಾಧ್ಯತೆ ಇದೆ.

ಸರಕಾರದ ಬಗ್ಗೆ ರಾಜ್ಯದ ಜನತೆ, ವಿಶೇಷವಾಗಿ ಕಾಂಗ್ರೆಸ್‌ ಹೈಕಮಾಂಡ್‌ ಬಹಳ ನಿರೀಕ್ಷೆ ಇರಿಸಿಕೊಂಡಿದೆ. ಜತೆಗೆ ರಾಜ್ಯ ಸರಕಾರದ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನವನ್ನು ವಿವಿಧ ರಾಜ್ಯಗಳು ಗಮನಿಸುತ್ತಿವೆ. ಇದೊಂದು ಯಶಸ್ವಿ ಸರಕಾರ ಆಗಬೇಕೆಂಬುದು ಹೈಕಮಾಂಡ್‌ ಸಂಕಲ್ಪವಾಗಿದೆ. ಅಲ್ಲದೇ ಇದರ ಲಾಭವನ್ನು ಮುಂದಿನ ಲೋಕಸಭೆ ಚುನಾವಣೆಗೆ ಬಳಸಿಕೊಳ್ಳಲು ಪ್ಲಾನ್​ ಕಾಂಗ್ರೆಸ್ ಹೈಕಮಾಂಡ್​ನದ್ದಾಗಿದೆ. ಈ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಕರ್ನಾಟಕದ ಮೇಲೆ ಹೆಚ್ಚಿನ ಕಾಳಜಿ ಇಟ್ಟುಕೊಂಡಿದ್ದು, ಇಲ್ಲಿಂದಲೇ ಹೊಸ ಸಂದೇಶ ರವಾನಿಸುವ ಚಿಂತನೆಯಲ್ಲಿದ್ದಾರೆ.

ಅಧಿಕಾರದಲ್ಲಿ ಇರುವವರು ಯಾವ ಕಾರಣಕ್ಕೂ ಪಕ್ಷವನ್ನು ಮರೆಯಬಾರದು ಹಾಗೂ ನಿರ್ಲಕ್ಷ ಮಾಡಬಾರದು, ಸರಕಾರ ಹಾಗೂ ಪಕ್ಷದ ನಡುವೆ ಸಮನ್ವಯ ಇರಬೇಕು, ತಿಂಗಳಿಗೊಮ್ಮೆ ಸಚಿವರು ಕಡ್ಡಾಯವಾಗಿ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರ ಅಹವಾಲುಗಳಿಗೆ ಸ್ಪಂದಿಸಬೇಕು, ಜಿಲ್ಲಾ ಕೇಂದ್ರಗಳಿಗೆ ತೆರಳಿದಾಗ ಜಿಲ್ಲಾ ಕಾಂಗ್ರೆಸ್‌ ಕಚೇರಿಗಳಿಗೆ ಭೇಟಿ ನೀಡಬೇಕು. ವಿಶೇಷವಾಗಿ ತಾವು ನಿರ್ವಹಿಸುತ್ತಿರುವ ಇಲಾಖೆಗಳಲ್ಲಿ ಯಾವುದೇ ವಿವಾದಕ್ಕೆ ಎಡೆ ಮಾಡಿಕೊಡದೆ ಉತ್ತಮ ರೀತಿಯಲ್ಲಿ ಆಡಳಿತ ಒದಗಿಸಬೇಕು, ಸಾರ್ವಜನಿಕರ ಜತೆ ಸಂಪರ್ಕ ಇರಿಸಿಕೊಂಡು ಕೆಲಸ ಮಾಡಬೇಕು ಎಂಬಿತ್ಯಾದಿಗಳ ಬಗ್ಗೆ ಹೈಕಮಾಂಡ್‌ ಸಚಿವರಿಗೆ ಪಾಠ ಮಾಡಲಿದೆ.

ಕೆಲವು ಸಚಿವರ ಬಗ್ಗೆ ದೂರುಗಳು ದಿಲ್ಲಿ ತಲುಪಿದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಹೈಕಮಾಂಡ್‌ ಈಗ ಎಲ್ಲ ಸಚಿವರಿಗೆ ಸರಕಾರದ ಕಾರ್ಯವೈಖರಿ, ಜನಸಂಪರ್ಕ ಹೇಗಿರಬೇಕು ಎಂಬ ಬಗ್ಗೆ ಮಾರ್ಗದರ್ಶನ ನೀಡಲು ಮುಂದಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *