ರಾಜಕೀಯ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗುವ ಕೋರ್ಸ್ ಒಂದು ವರ್ಷದ ಅವಧಿಯದ್ದಾಗಿದ್ದು, ಆರು ತಿಂಗಳ ಕಾಲ ಥಿಯರಿ ತರಗತಿಗಳು ನಡೆಯಲಿವೆ. ಮುಂದಿನ ಆರು ತಿಂಗಳು ಪ್ರಾಯೋಗಿಕ ತರಬೇತಿ ನೀಡಲಾಗುವುದು. ಕೋರ್ಸ್ ಇಂಟರ್ನ್‌ಶಿಪ್ ಪ್ರೋಗ್ರಾಂ ಅನ್ನು ಸಹ ಒಳಗೊಂಡಿರುತ್ತದೆ ಎಂದು ಖಾದರ್ ಹೇಳಿದ್ದಾರೆ.

ಮಂಗಳೂರು: ರಾಜಕೀಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಬಯಸುವ, ಪದವಿ ಪಡೆದಿರುವವರಿಗಾಗಿ ಕರ್ನಾಟಕದಲ್ಲಿ ರಾಜಕೀಯ ತರಬೇತಿ ಸಂಸ್ಥೆಯನ್ನು (Political Training Institute) ಸ್ಥಾಪಿಸುವ ಬಗ್ಗೆ ವಿಧಾನಸಭೆ ಸ್ಪೀಕರ್ (UT Khader) ಪ್ರಸ್ತಾವಿಸಿದ್ದಾರೆ. ಈ ಪ್ರಸ್ತಾವನೆಯನ್ನು ಸದ್ಯದಲ್ಲಿಯೇ ಜಾರಿಗೆ ತರಲಾಗುವುದು ಮತ್ತು ಪಠ್ಯಕ್ರಮವನ್ನು ಸಿದ್ಧಪಡಿಸಲು ಪುಣೆ ಮೂಲದ ಸರ್ಕಾರಿ ಶಾಲೆಯೊಂದನ್ನು ವಿನಂತಿಸಲಾಗುವುದು ಎಂದು ಖಾದರ್ ಗುರುವಾರ ಮಂಗಳೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ರಾಜಕೀಯ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗುವ ಕೋರ್ಸ್ ಒಂದು ವರ್ಷದ ಅವಧಿಯದ್ದಾಗಿದ್ದು, ಆರು ತಿಂಗಳ ಕಾಲ ಥಿಯರಿ ತರಗತಿಗಳು ನಡೆಯಲಿವೆ. ಮುಂದಿನ ಆರು ತಿಂಗಳು ಪ್ರಾಯೋಗಿಕ ತರಬೇತಿ ನೀಡಲಾಗುವುದು. ಕೋರ್ಸ್ ಇಂಟರ್ನ್‌ಶಿಪ್ ಪ್ರೋಗ್ರಾಂ ಅನ್ನು ಸಹ ಒಳಗೊಂಡಿರುತ್ತದೆ ಎಂದು ಖಾದರ್ ಹೇಳಿರುವುದಾಗಿ ‘ಪಿಟಿಐ’ ಸುದ್ದಿಸಂಸ್ಥೆ ವರದಿ ಮಾಡಿದೆ.

ಸಂಸ್ಥೆಯು ಪೂರ್ಣಾವಧಿಗೆ ಬೋಧಕ ಸಿಬ್ಬಂದಿಯನ್ನು ಹೊಂದಿರಲಿದೆ ಮತ್ತು ಮಹತ್ವಾಕಾಂಕ್ಷಿ ಯುವಕರಿಗೆ ರಾಜಕೀಯ ಮತ್ತು ಆಡಳಿತದಲ್ಲಿ ತರಬೇತಿ ನೀಡಲಿದೆ. ಪದವೀಧರರು ಪರಿಣಾಮಕಾರಿ ನಾಯಕರಾಗಲು, ಶಾಸಕರು ಮತ್ತು ಮಂತ್ರಿಗಳ ಜೊತೆಗೆ ಕೆಲಸ ಮಾಡಲು ರಾಜಕೀಯ ನಾಯಕರು ಹಾಗೂ ತಜ್ಞರು ತರಬೇತಿಯನ್ನು ಸಹ ನೀಡಲಿದ್ದಾರೆ ಎಂದು ಖಾದರ್ ಹೇಳಿದ್ದಾರೆ.

ಪದವಿ ಪೂರ್ಣಗೊಳಿಸಿದ ಎಲ್ಲರೂ ಕೋರ್ಸ್‌ಗೆ ಸೇರಲು ಅರ್ಹರಾಗಿರುತ್ತಾರೆ. ವಿದ್ಯಾರ್ಥಿಗಳನ್ನು ರಾಜಕಾರಣಿಗಳು, ಸಹಾಯಕ ಸಿಬ್ಬಂದಿ, ಸಾಮಾಜಿಕ ಕಾರ್ಯಕರ್ತರು ಮತ್ತು ಸರ್ಕಾರಿ ನೌಕರರನ್ನಾಗಿ ರೂಪಿಸುವ ರೀತಿಯಲ್ಲಿ ಪಠ್ಯಕ್ರಮವನ್ನು ಸಿದ್ಧಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಸರಕಾರದ ಜತೆ ಚರ್ಚಿಸಿ ಸಂಸ್ಥೆಗೆ ಸೂಕ್ತ ಸ್ಥಳ ನಿಯೋಜನೆ ಮಾಡಲಾಗುವುದು ಎಂದೂ ಖಾದರ್ ತಿಳಿಸಿದ್ದಾರೆ.

ಹೊಸದಾಗಿ ಆಯ್ಕೆಯಾಗಿರುವ ಶಾಸಕರಿಗೆ ಮೂರು ದಿನಗಳ ತರಬೇತಿ ಶಿಬಿರವನ್ನು ಕೆಲವು ದಿನಗಳ ಹಿಂದಷ್ಟೇ ಖಾದರ್ ಹಮ್ಮಿಕೊಂಡಿದ್ದರು. ಈ ಶಿಬಿರಕ್ಕೆ ಕರೆಸಿದ್ದ ಸಂಪನ್ಮೂಲ ವ್ಯಕ್ತಿಗಳ ಬಗ್ಗೆ ಚರ್ಚೆಯಾಗಿತ್ತು. ಇದೀಗ ಖಾದರ್ ರಾಜಕೀಯ ತರಬೇತಿ ಸಂಸ್ಥೆಯ ಸ್ಥಾಪನೆ ಬಗ್ಗೆ ಪ್ರಸ್ತಾವಿಸಿದ್ದಾರೆ.

Leave a Reply

Your email address will not be published. Required fields are marked *