ಮಂಡ್ಯದ ಮದ್ದೂರು ತಾಲೂಕಿನಲ್ಲಿ ಇರುವ ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ ಹೈವೇ ವೀಕ್ಷಣೆ ನಡೆಸಿದ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಅವರಿಗೆ ಎನ್​ಹೆಚ್​ಎಐ ಅಧಿಕಾರಿಗಳು ರಸ್ತೆ ಅಪಘಾತಕ್ಕೆ ಕುಡುಕರೇ ಕಾರಣ ಎಂದು ದೂರು ನೀಡಿದ್ದಾರೆ.

ಮಂಡ್ಯ: ಅಪಘಾತ ಹೆಚ್ಚಳವಾಗುತ್ತಿರುವ ಹಿನ್ನೆಲೆ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ (Alok Kumar) ಅವರು ಜಿಲ್ಲೆಯ ಮದ್ದೂರು ತಾಲೂಕಿನ ನಿಡಘಟ್ಟ ಬಳಿ  (Bengaluru-Mysuru Expressway) ವೀಕ್ಷಣೆ ಮಾಡಿದರು. ಈ ವೇಳೆ ಕುಡುಕರಿಂದಲೇ ಅಪಘಾತಗಳು ಹೆಚ್ಚುತ್ತಿವೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳ ಸಬೂಬಿನ ಉತ್ತರಕ್ಕೆ ಬೇಸರ ವ್ಯಕ್ತಪಡಿಸಿದ ಅಲೋಕ್ ಕುಮಾರ್, ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ಕುಡುಕ ಮುಕ್ತ ಹೈವೆಯನ್ನಾಗಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ ಹೈವೇ ಲೋಕಲ್ ಬಾರ್​ ಆಗಿದೆ. ಭಾನುವಾರ ಬಂದರೆ ಕಾರಿನಲ್ಲಿ ಮ್ಯೂಸಿಕ್​ ಆನ್ ಮಾಡಿ ಕುಡಿಯುತ್ತಾರೆ. ಏನಾದರು ಕೇಳಲು ಹೋದರೆ ಆವಾಜ್ ಹಾಕುತ್ತಾರೆ. ಎಕ್ಸ್​ಪ್ರೆಸ್​ ಹೈವೇನಲ್ಲಿ ಕುಡುಕರಿಂದಲೇ ಅಪಘಾತ ಹೆಚ್ಚುತ್ತಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಂತರ ಮಾತನಾಡಿದ ಅಲೋಕ್ ಕುಮಾರ್, ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ ಹೈವೇ ಪರಿಶೀಲನೆ ಮಾಡಿದ್ದೇವೆ. ಎಕ್ಸ್​ಪ್ರೆಸ್​ ಹೈವೇ ಸಂಬಂಧ ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಕೆಲವು ಕಡೆ ಸರ್ವಿಸ್​ ರಸ್ತೆಗಳಲ್ಲಿ ಫುಟ್​ಪಾತ್ ಮಾಡಿಲ್ಲ ಎಂದು ದೂರು ನೀಡಿದ್ದಾರೆ. ಹಲವೆಡೆ ಅಂಡರ್​ಪಾಸ್ ನಿರ್ಮಿಸದಿದ್ದರಿಂದ ಮಳೆ ನೀರು ನುಗ್ಗುತ್ತಿದೆ. ಇದರಿಂದಾಗಿ ಎಕ್ಸ್​ಪ್ರೆಸ್​ ಹೈವೇಯಲ್ಲಿ ಅಪಘಾತ ಸಂಭವಿಸುತ್ತಿದೆ ಎಂದರು.

ವಾಹನ ಸವಾರರಿಗೆ ಖಡನ್ ಸೂಚನೆ ನೀಡಿದ ಅಲೋಕ್ ಕುಮಾರ್

ಹೆದ್ದಾರಿಯಲ್ಲಿನ ಸರ್ವಿಸ್​ ರಸ್ತೆಗಳಲ್ಲಿ ಫೆನ್ಸ್, ಕ್ಯಾಮರಾಗಳನ್ನು ಸರಿಯಾಗಿ ಅಳವಡಿಸಿಲ್ಲ. ಈ ಅವ್ಯವಸ್ಥೆ ಸರಿಪಡಿಸುವಂತೆ ಎನ್​ಹೆಚ್​ಎಐ ಅಧಿಕಾರಿಗಳಿಗೆ ಹೇಳಿದ್ದೇವೆ. ಆದಷ್ಟು ಬೇಗ ಎಲ್ಲಾ ಕೆಲಸಗಳು ನಡೆದರೆ ಅಪಘಾತ ತಡೆಯಲು ಸಾಧ್ಯ. ಜನರು ಪ್ರತಿ ದಿನ ಸಾಯುತ್ತಾ ಇದ್ದಾರೆ. ಪ್ರಯಾಣದ ವೇಳೆ ವಾಹನ ಸವಾರರು ಕೂಡ ಎಚ್ಚರಿಕೆ ವಹಿಸಬೇಕು ಖಡನ್ ಸೂಚನೆ ನೀಡಿದರು.

ಅಪರಾಧ ತಡೆಗೆ ಹೈವೇ ಪೆಟ್ರೋಲ್ ನಿಯೋಜನೆ

ಹೆದ್ದಾರಿಯಲ್ಲಿ ಆಗುತ್ತಿರುವ ಅಪರಾಧಗಳನ್ನು ತಡೆಯಲು ಹೈವೇ ಪೆಟ್ರೋಲ್ ಹಾಕಿದ್ದೇವೆ ಎಂದು ಹೇಳಿದ ಅಲೋಕ್ ಕುಮಾರ್, ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿ 4 ಹೈವೇ ಪೆಟ್ರೋಲ್ ಹಾಕಿದ್ದೇವೆ. ಹೈವೇ ಪೆಟ್ರೋಲ್ ಸಿಬ್ಬಂದಿ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಕೆಟ್ಟು ನಿಂತ ಗಾಡಿಗಳ ಕಡೆ ಹೆಚ್ಚು ಗಮನ ಕೊಡಬೇಕು. ಬಹಳಷ್ಟು ಜನ ಸುಮ್ಮನೆ ಜೀವ ಕಳೆದು ಕೊಳ್ಳುತ್ತಾ ಇದ್ದಾರೆ. ಅಪಘಾತ ತಡೆಯಲು ಹೇಗೆ ಕ್ರಮ ತೆಗೆದುಕೊಳ್ಳಬೇಕೆಂದು ಗಮನ ಕೊಡುತ್ತಿದ್ದೇವೆ. ಟೋಲ್ ಬಳಿ ವಾಹನಗಳ ತಪಾಸಣೆ ಮಾಡುತ್ತೇವೆ. ಸರಿಯಾದ ಸ್ಟಿಕರ್ ಇಲ್ಲದ ವಾಹನ ಸವಾರರ ವಿರುದ್ಧ‌ ಕ್ರಮ ತೆಗೆದುಕೊಳ್ಳುತ್ತೇವೆ. ವೇಗದ ಚಾಲನೆ ಮಾಡಿದವರಿಗೆ ದಂಡ ಹಾಕುವ ಜೊತೆಗೆ ಲೈಸೆನ್ಸ್ ರದ್ದು ಮಾಡುತ್ತೇವೆ. ಸದ್ಯ ಹೈವೇಯಲ್ಲಿ ದ್ವಿಚಕ್ರ ವಾಹನಗಳು ಓಡಾಡುತ್ತಿವೆ. ಇವುಗಳ ರದ್ದಿಗೆ ಗೆಜೆಟ್ ನೋಟಿಫಿಕೇಶ್‌ನ್ ಮಾಡಿಸುತ್ತಿದ್ದಾರೆ ಎಂದರು.

ವೇಗ ಚಾಲನೆ ಅಪಘಾತಗಳಿಗೆ ಕಾರಣ

ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿ 64 ಜನರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. 58 ಜನರು ರಾಮನಗರ ವ್ಯಾಪ್ತಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ ಎಡಿಜಿಪಿ, ಟೋಲ್ ಗೇಟ್ ಬಳಿ ಇನ್ನೂ ಮುಂದೆ ಡ್ರಿಂಕ್ ಅಂಡ್ ಡ್ರೈವ್ ಟೆಸ್ಟ್ ಮಾಡುತ್ತೇವೆ. ಜನರು ಅವರ ಸಮಸ್ಯೆಗಳನ್ನು ಹೇಳಿದ್ದಾರೆ. ಅಪಘಾತಗಳಿಗೆ ಅತಿಯಾದ ವೇಗ ಕಾರಣವೆಂದಿದ್ದಾರೆ ಎಂದು ತಿಳಿಸಿದ್ದಾರೆ.

ಜನರಲ್ಲಿ ವಾಹನ ಚಲಿಸುವ ನೈಪುಣ್ಯತೆ ಕಡಿಮೆ ಇದೆ. ಕಾರು ಬೈಕ್ ಚಾಲಕರು ಅತಿಯಾದ ಆತ್ಮವಿಶ್ವಾಸದಿಂದ ಓಡಿಸುತ್ತಾರೆ. ಬೈಕ್‌ನವರು 140ರ ವೇಗದಲ್ಲಿ ವಾಹನ ಚಲಿಸುತ್ತಾರೆ. ಬಹಳಷ್ಟು ಜನರಿಗೆ ವಾಹನಗಳ‌ ಮೇಲೆ ಕಂಟ್ರೋಲ್‌ ಇರಲ್ಲ. ಮಧ್ಯಲ್ಲಿ‌ ಬ್ರೇಕ್‌ ಹಾಕಿದಾಗ ಅಪಘಾತಗಳು ಆಗುತ್ತವೆ. ಕಡಿಮೆ ವೇಗದಲ್ಲಿ ಹೋದರೆ ಏನು ಆಗಲ್ಲ. ಆರ್‌ಟಿಓ ಅವರು ನೈಪುಣ್ಯತೆ ಇರುವವರಿಗೆ ಲೈಸೆನ್ಸ್ ಕೊಡಬೇಕು. ನೈಪುಣ್ಯತೆ ಇಲ್ಲದರಿಗೆ ಲೈಸೆನ್ಸ್ ಕೊಡಬಾರದು ಎಂದರು.

Leave a Reply

Your email address will not be published. Required fields are marked *