BBMP Elections: ಸದ್ಯ ಸಿದ್ದರಾಮಯ್ಯ ನೇತೃತ್ವದ ಹೊಸ ಸರ್ಕಾರ ಬಿಬಿಎಂಪಿ ಚುನಾವಣೆಯತ್ತ ಗಮನಹರಿಸಿದೆ. ಈ ಸಂಬಂಧ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೀವಾಲಾ ನೇತೃತ್ವದಲ್ಲಿ ಸಭೆ ನಡೆದಿದೆ. ಸಭೆಯಲ್ಲಿ, ಬೆಂಗಳೂರು ಉಸ್ತುವಾರಿ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಬೆಂಗಳೂರು ಭಾಗದ ಸಚಿವರು ಹಾಗೂ ಕಾಂಗ್ರೆಸ್ ಶಾಸಕರು ಭಾಗಿಯಾಗಿದ್ದರು. ಬಿಜೆಪಿ ಅವಧಿಯಲ್ಲಿ ಮಾಡಿದ್ದ ವಾರ್ಡ್ ವಿಂಗಡಣೆ ಸರಿಯಿಲ್ಲ. ಅವರಿಗೆ ಅನುಕೂಲ ಆಗುವ ಹಾಗೆ ಮಾಡಿಕೊಂಡಿದ್ದಾರೆ ಎಂಬ ಆಕ್ಷೇಪ ಕೂಡ ವ್ಯಕ್ತವಾಗಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

ಹೈಲೈಟ್ಸ್‌:

  • ಬಿಬಿಎಂಪಿ ಚುನಾವಣೆ ಕುರಿತು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೀವಾಲಾ ನೇತೃತ್ವದಲ್ಲಿ ಸಭೆ.
  • ಬಿಜೆಪಿ ಅವಧಿಯಲ್ಲಿ ಮಾಡಿದ್ದ ವಾರ್ಡ್ ವಿಂಗಡಣೆ ಸರಿಯಿಲ್ಲ ಎಂದು ಆಕ್ಷೇಪ.
  • ಕಾನೂನು ತೊಡಕುಗಳ ವಿಚಾರವಾಗಿಯೂ ಸಭೆಯಲ್ಲಿ ಚರ್ಚೆ.

ಬೆಂಗಳೂರು:ಬಿಬಿಎಂಪಿ ಚುನಾವಣೆಗೆ ಕಾಂಗ್ರೆಸ್ ತಯಾರಿಗಳನ್ನು ಶುರುಮಾಡಿದ್ದು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೀವಾಲಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚುನಾವಣಾ ಪೂರ್ವ ಸಿದ್ದತೆಗಳ ಕುರಿತಾಗಿ ಚರ್ಚೆ ನಡೆಯಿತು.

ನಗರದ ಖಾಸಗಿ ಹೋಟೆಲ್‌ನಲ್ಲಿ ಜೂನ್‌ 12 ರಂದು ಸೋಮವಾರ ನಡೆದ ಮಹತ್ವದ ಸಭೆಯಲ್ಲಿ, ಬೆಂಗಳೂರು ಉಸ್ತುವಾರಿ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಬೆಂಗಳೂರು ಭಾಗದ ಸಚಿವರು ಹಾಗೂ ಕಾಂಗ್ರೆಸ್ ಶಾಸಕರು ಭಾಗಿಯಾಗಿದ್ದಾರೆ.

ಚುನಾವಣೆ ಪೂರ್ವ ಸಿದ್ದತೆ ಕುರಿತು ಚರ್ಚೆ
ಸಭೆಯಲ್ಲಿ ಚುನಾವಣೆ ಪೂರ್ವ ಸಿದ್ದತೆ ಕುರಿತು ಚರ್ಚೆ ನಡೆಸಲಾಗಿದೆ. ವಾರ್ಡ್ ಮರುವಿಂಗಡನೆ ಹಾಗೂ ಮೀಸಲಾತಿ ಬಗ್ಗೆ ಚರ್ಚೆ ನಡೆದಿದೆ. ಶೀಘ್ರ ಚುನಾವಣೆ ನಡೆಸಲು ಕಾನೂನು ತೊಡಕುಗಳ ವಿಚಾರವಾಗಿಯೂ ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ.

ಸಭೆಯ ಬಳಿಕ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಮಾತನಾಡಿ, ಬಿಬಿಎಂಪಿ ಚುನಾವಣೆ ಹಾಗೂ ವಿಧಾನಪರಿಷತ್ ಚುನಾವಣೆ ಬಗ್ಗೆ ಸಭೆಯಲ್ಲಿ ಚರ್ಚೆ ಆಗಿದೆ. ಹೇಗೆ ಚುನಾವಣೆ ಮಾಡಬೇಕು ಎಂಬ ಚರ್ಚೆ ಆಯ್ತು ಎಂದರು.

ವಾರ್ಡ್ ವಿಂಗಡಣೆ ಸರಿಯಿಲ್ಲ
ಎಲ್ಲರೂ ಬೇಗ ಚುನಾವಣೆ ‌ಮಾಡಬೇಕು ಸಲಹೆ ಕೊಟ್ಟಿದ್ದಾರೆ. ವಾರ್ಡ್ ವಿಂಗಡಣೆ ಆಗಬೇಕಿದೆ‌. 198 ವಾರ್ಡ್ ಮೇಲೆ ಚುನಾವಣೆ ಮಾಡಲು ಆಗಲ್ಲ. ನವೆಂಬರ್ ವೇಳೆಗೆ ಚುನಾವಣೆ ಆಗಬೇಕು ಎಂದರು. ಬಿಜೆಪಿ ಅವಧಿಯಲ್ಲಿ ಮಾಡಿದ್ದ ವಾರ್ಡ್ ವಿಂಗಡಣೆ ಸರಿಯಿಲ್ಲ. ಅವರಿಗೆ ಅನುಕೂಲ ಆಗುವ ಹಾಗೆ ಮಾಡಿಕೊಂಡಿದ್ದಾರೆ. ನಾವು ಕೂಡ ಆಕ್ಷೇಪ ವ್ಯಕ್ತಪಡಿಸಿದ್ದೆವು ಎಂದರು.

ಮೀಸಲಾತಿ ಮರು ಹಂಚಿಕೆ ಮಾಡಬೇಕಿದೆ.‌ ಗಾಂಧಿನಗರದಲ್ಲಿ ಆರಕ್ಕೆ ಆರು ಮಹಿಳೆಯರಿಗೆ ಮೀಸಲಿಟ್ಟಿದ್ರು ಎಂದ ಅವರು, ಬಿಬಿಎಂಪಿ ಮೂರು ಭಾಗ ಮಾಡಬೇಕು ಎಂಬ ನಿಟ್ಟಿನಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಆಡಳಿತಾತ್ಮಕವಾಗಿ ಅಭಿವೃದ್ಧಿ ಆಗಬೇಕು ಎಂದರು. ಇದೇ ವಿಚಾರವಾಗಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಬೆಂಗಳೂರು ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿದ್ದೇವೆ. ಬಿಬಿಎಂಪಿ ಚುನಾವಣೆ ಬಗ್ಗೆ ಸಲಹೆ ನೀಡಿದ್ದೇವೆ. ಬಿಬಿಎಂಪಿ ಆಡಳಿತಾತ್ಮಕವಾಗಿ ವಿಭಜನೆ ಆಗಬೇಕು ಜೊತೆಗೆ ಬೆಂಗಳೂರು ಅಭಿವೃದ್ಧಿ ಆಗಬೇಕು.‌ ಈ ನಿಟ್ಟಿನಲ್ಲಿ ಸುರ್ಜೇವಾಲ ಜೊತೆ ಚರ್ಚೆ ಮಾಡಿದ್ದೇವೆ ಎಂದರು.

ಪಾಲಿಕೆ ವಿಭಜನೆ: ತಜ್ಞರ ಸಮಿತಿ ಪುನಾರಚನೆ
ಆಡಳಿತಾತ್ಮಕ ಹಿತದೃಷ್ಟಿಯಿಂದ ಬಿಬಿಎಂಪಿ ವಿಭಜನೆಗಾಗಿ ರಚಿಸಲಾಗಿದ್ದ ತಜ್ಞರ ಸಮಿತಿಯನ್ನು ಪುನರ್‌ ರಚಿಸಿ ಸರಕಾರ ಸೋಮವಾರ ಆದೇಶ ಹೊರಡಿಸಿದೆ.

ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಪಾಲಿಕೆ ವಿಭಜನೆಗಾಗಿ 2014ರಲ್ಲಿ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್‌.ಪಾಟೀಲ್‌ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ರಚಿಸಿದ್ದರು. ಇದೀಗ ಈ ಸಮಿತಿಯನ್ನು ಪುನರ್‌ ರಚನೆ ಮಾಡಿರುವ ಸರಕಾರ, ಪಾಟೀಲ್‌ ಅವರನ್ನೇ ಸಮಿತಿಯ ಅಧ್ಯಕ್ಷರಾಗಿ ಮುಂದುವರಿಸಿದೆ. ಜತೆಗೆ, ಪಾಲಿಕೆ ನಿವೃತ್ತ ಆಯುಕ್ತ ಸಿದ್ದಯ್ಯ ಮತ್ತು ಹಿಂದಿನ ಬೆಂಗಳೂರು ಅಜೆಂಡಾ ಟಾಸ್ಕ್‌ ಫೋರ್ಸ್‌ನ ರವಿಚಂದರ್‌ ಅವರನ್ನು ಸಮಿತಿ ಸದಸ್ಯರಾಗಿ ನೇಮಿಸಿದೆ.

ಆಡಳಿತದ ಹಿತದೃಷ್ಟಿ ಮತ್ತು ಸಾರ್ವಜನಿಕರಿಗೆ ಮೂಲಸೌಕರ್ಯ ಒದಗಿಸುವ ದೃಷ್ಟಿಯಿಂದ ಪಾಲಿಕೆಯನ್ನು ವಿಭಜನೆ ಮಾಡುವ ಬಗ್ಗೆ ಅಧ್ಯಯನ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಬೇಕು. ಈ ಸಮಿತಿಗೆ ಅಗತ್ಯ ಮಾಹಿತಿ ಒದಗಿಸಬೇಕು ಮತ್ತು ಸಮಿತಿ ಸಭೆಗಳ ಬಗ್ಗೆ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ಸಮಿತಿ ಅಧ್ಯಕ್ಷರು ಮತ್ತು ಸದಸ್ಯರಿಗೆ ಕಚೇರಿ, ಸಿಬ್ಬಂದಿ, ಪೀಠೋಪಕರಣ ಹಾಗೂ ವಾಹನ ಸೌಲಭ್ಯ ವ್ಯವಸ್ಥೆ ಮಾಡಬೇಕೆಂದು ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿಯು ಪಾಲಿಕೆ ವಿಶೇಷ (ಆಡಳಿತ) ಆಯುಕ್ತರಿಗೆ ಆದೇಶಿಸಿದ್ದಾರೆ.

ಬಿ.ಎಸ್‌.ಪಾಟೀಲ್‌ ನೇತೃತ್ವದ ತಜ್ಞರ ಸಮಿತಿಯು ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರಕ್ಕೆ ಹಿಂದೆಯೇ ವರದಿ ಸಲ್ಲಿಸಿತ್ತು. ಆಗ ಬಿಬಿಎಂಪಿ ವಿಭಜನೆಗೆ ಪ್ರತಿಪಕ್ಷಗಳು, ಸಂಘ-ಸಂಸ್ಥೆಗಳು, ಕನ್ನಡಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಆ ನಂತರ ಆ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿರಲಿಲ್ಲ.

ಬಿಬಿಎಂಪಿ ಚುನಾವಣೆ ಸಂಬಂಧ ಕಾಂಗ್ರೆಸ್‌ ಪಕ್ಷದ ಮಾಜಿ ಮೇಯರ್‌ಗಳು, ಆಡಳಿತ ಪಕ್ಷದ ನಾಯಕರು, ಕಾರ್ಪೊರೇಟರ್‌ಗಳ ನಿಯೋಗವು ಇತ್ತೀಚೆಗೆ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿತ್ತು. ನಿಯೋಗದ ಭೇಟಿ ವೇಳೆ ಸಿಎಂ, ‘‘ಒಬ್ಬರು ಮೇಯರ್‌, ಮುಖ್ಯ ಆಯುಕ್ತರಿಂದ 1.30 ಕೋಟಿ ಜನರಿರುವ ನಗರದ ಮೇಲ್ವಿಚಾರಣೆ ಅಸಾಧ್ಯ. ಹಾಗಾಗಿ, ಬಿಬಿಎಂಪಿಯನ್ನು ಮೂರು ಪಾಲಿಕೆಗಳನ್ನಾಗಿ ವಿಭಜಿಸುವುದು ಒಳಿತು,’’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೀಗ ಸಮಿತಿಯನ್ನು ಪುನರ್‌ ರಚನೆ ಮಾಡಿರುವುದರಿಂದ ಪಾಲಿಕೆ ಚುನಾವಣೆ ವಿಳಂಬವಾಗುವ ಅನುಮಾನ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *