ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸಂಸದೆ ಶೋಭಾ ಕರಂದ್ಲಾಜೆ ನೇಮಕಗೊಳ್ಳುವುದು ಬಹುತೇಕ ಖಚಿತವಾಗಿದೆ. ಈ ಮೂಲಕ ಒಂದು ಕಡೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪಕ್ಷದ ಮೇಲಿನ ಹಿಡಿತ ಉಳಿಸಿಕೊಳ್ಳಲಿದ್ದರೆ, ಮತ್ತೊಂದೆಡೆ ಕರಾವಳಿ ಭಾಗಕ್ಕೆ ರಾಜ್ಯಾಧ್ಯಕ್ಷ ಸ್ಥಾನ ಎರಡನೇ ಬಾರಿ ಒಲಿಯಲಿದೆ.

ಅಕ್ಟೋಬರ್ 17ರ ಮಂಗಳವಾರ ರಾತ್ರಿ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ದೂರವಾಣಿ ಕರೆ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಈ ವಿಷಯ ತಿಳಿಸಿದ್ದು, ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ.

ಕಳೆದ ವಾರ ದಿಲ್ಲಿಗೆ ಭೇಟಿ ನೀಡಿದ್ದ ಯಡಿಯೂರಪ್ಪ ಅವರಿಗೆ ಬಿ.ವೈ.ರಾಘವೇಂದ್ರ ಅಧ್ಯಕ್ಷರಾಗಲಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಸೂಚಿಸಿದ್ದರು. ಆದರೆ ರಾಘವೇಂದ್ರ ಬದಲು ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಂದರೆ ಅನುಕೂಲ ಎಂದು ಯಡಿಯೂರಪ್ಪ ಸಲಹೆ ನೀಡಿದ್ದರು. ಆದರೆ ಯಡಿಯೂರಪ್ಪ ಮಾತಿಗೆ ಜೆ.ಪಿ.ನಡ್ಡಾ ಸಹಮತ ವ್ಯಕ್ತಪಡಿಸಿರಲಿಲ್ಲ ಎನ್ನಲಾಗಿದೆ.

ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ತರಲು ಯಡಿಯೂರಪ್ಪ ವಿರೋಧಿ ಬಣದಲ್ಲೇ ಅಪಸ್ವರ ವ್ಯಕ್ತವಾಗಿದೆ. ಈ ಅಪಸ್ವರಕ್ಕೆ ಮನ್ನಣೆ ನೀಡಬೇಕು. ಯಡಿಯೂರಪ್ಪ ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂಬ ಕಾರಣಕ್ಕಾಗಿ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಪಟ್ಟ ಕಟ್ಟುವ ಬಗ್ಗೆ ನಡ್ಡಾ ಮಾತನಾಡಿದ್ದರು ಎನ್ನಲಾಗಿದೆ.
ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಘವೇಂದ್ರ ಬೇಡ ಅಂತ ಯಡಿಯೂರಪ್ಪ ಹೇಳಿದ್ದರು.

ಈ ಹಿನ್ನೆಲೆಯಲ್ಲಿ ಪುನಃ: ಕಸರತ್ತು ನಡೆಸಿದ ಬಿಜೆಪಿ ವರಿಷ್ಠರು ಯಡಿಯೂರಪ್ಪ ಮತ್ತು ಅವರ ವಿರೋಧಿ ಬಣಕ್ಕೆ ಒಮ್ಮತದ ಅಭ್ಯರ್ಥಿಯ ಬಗ್ಗೆ ಚರ್ಚೆ ನಡೆಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಳಿ ಬಂದ ಒಮ್ಮತದ ಅಭ್ಯರ್ಥಿ ಶೋಭಾ ಕರಂದ್ಲಾಜೆ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಯಡಿಯೂರಪ್ಪ ಅವರೊಂದಿಗೆ ಮಂಗಳವಾರ ಮಾತನಾಡಿದ ಕೇಂದ್ರ ಸಚಿವ ಅಮಿತ್ ಶಾ, ಮಾತುಕತೆಯ ಸಂದರ್ಭದಲ್ಲಿ ಶೋಭಾ ಕರಂದ್ಲಾಜೆ ಓಕೆನಾ? ಅಂತ ಪ್ರಶ್ನಿಸಿದ್ದಾರೆ. ಮುಂದಿನ ಸೋಮವಾರ ಇಲ್ಲವೇ ಮಂಗಳವಾರದ ವೇಳೆಗೆ ಶೋಭಾ ಕರಂದ್ಲಾಜೆ ಹೆಸರು ಅಧಿಕೃತವಾಗಿ ಘೋಷಣೆಯಾಗುವ ಸಾಧ್ಯತೆ ಇದೆ.

ಪಕ್ಷದ ರಾಜ್ಯಾಧ್ಯಕ್ಷರ ಆಯ್ಕೆ ನಡೆದರೂ ಶಾಸಕಾಂಗ ನಾಯಕನ ಆಯ್ಕೆ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಮಂಡಿ ನೋವು ಅಂತ ಆಸ್ಪತ್ರೆಗೆ ಹೋದ ಬಸವರಾಜ ಬೊಮ್ಮಾಯಿ ಹೃದಯದ ಶಸ್ತ್ರ ಚಿಕಿತ್ಸೆಗೆ ಒಳಗಾದ ಹಿನ್ನೆಲೆಯಲ್ಲಿ ಅವರು ಗುಣಮುಖರಾದ ಮೇಲೆ ಶಾಸಕಾಂಗ ನಾಯಕನ ಹೆಸರು ಪ್ರಕಟಿಸುವ ಸಾಧ್ಯತೆ ಇದೆ.

ಬಸವರಾಜ ಬೊಮ್ಮಾಯಿ ಅವರೇ ಶಾಸಕಾಂಗ ನಾಯಕರಾಗಬೇಕು ಎಂದು ಯಡಿಯೂರಪ್ಪ ಪಟ್ಟು ಹಿಡಿದಿದ್ದಾರೆ. ಆದರೆ ಶಾಸಕಾಂಗ ನಾಯಕನ ಸ್ಥಾನಕ್ಕೆ ಬಸವನಗೌಡ ಪಾಟೀಲ್ ಯತ್ನಾಳ್ ಬರಲಿ ಅಂತ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದ್ದು, ಇದರಿಂದ ವಿಪಕ್ಷ ನಾಯಕದ ಆಯ್ಕೆ ಕಗ್ಗಂಟಾಗಿದೆ.

Leave a Reply

Your email address will not be published. Required fields are marked *