ವಿಪಕ್ಷ ನಾಯಕರ ನೇಮಕ, ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ವಿಚಾರದಲ್ಲಿ ಹೇಳಿಕೆ ನೀಡಿ ಪಕ್ಷದ ಘನತೆಗೆ ಧಕ್ಕೆ ತರಬಾರದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಂಗಳವಾರ ಮುಖಂಡರಿಗೆ ಸೂಚನೆ ನೀಡಿದ್ದಾರೆ.

ಬೆಂಗಳೂರು: ಪಕ್ಷದ ರಾಜ್ಯ ಘಟಕದ ಅಧ್ಯಕ್ಷರ ನೇಮಕ, ವಿಧಾನಸಭೆ ಪ್ರತಿಪಕ್ಷ ನಾಯಕರ ನೇಮಕ ವಿಚಾರವಾಗಿ ಪಕ್ಷದ ಘನತೆಗೆ ಧಕ್ಕೆ ತರುವಂಥ ಹೇಳಿಕೆಗಳನ್ನು ನೀಡಬಾರದು ಎಂದು ಬಿಜೆಪಿ (BJP) ರಾಜ್ಯ ಘಟಕದ ಅಧ್ಯಕ್ಷ (Nalin Kumar Kateel) ಮಂಗಳವಾರ ಮುಖಂಡರಿಗೆ ಸೂಚನೆ ನೀಡಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ವಿವಿಧ ನಾಯಕರು ಹಲವು ಹೇಳಿಕೆಗಳನ್ನು ನೀಡಿದ್ದರಿಂದ ಪಕ್ಷವು ಮುಗುರಕ್ಕೀಡಾಗುವಂಥ ಸನ್ನಿವೇಶ ನಿರ್ಮಾಣವಾಗಿತ್ತು. ಹೀಗಾಗಿ ಪಕ್ಷದ ನಾಯಕರಿಗೆ ಎಚ್ಚರಿಕೆ ನೀಡಲಾಗಿದೆ ಎನ್ನಲಾಗಿದೆ.

ವಿಪಕ್ಷ ನಾಯಕರ ನೇಮಕ, ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ವಿಚಾರದಲ್ಲಿ ಹೇಳಿಕೆ ನೀಡಿ ಪಕ್ಷದ ಘನತೆಗೆ ಧಕ್ಕೆ ತರಬಾರದು. ವಿಪಕ್ಷ ನಾಯಕ, ಮತ್ತಿತರ ಹುದ್ದೆಗಳ ಬಗ್ಗೆ ಪಕ್ಷ ನಿರ್ಧಾರ ಮಾಡಲಿದೆ. ಸೂಕ್ತ ಸಮಯದಲ್ಲಿ ಸಂಸದೀಯ ಮಂಡಳಿ ನಿರ್ಧಾರ ಪ್ರಕಟಿಸಲಿದೆ. ಕೆಲವರು ಹುದ್ದೆ ಬಗ್ಗೆ ಆಕಾಂಕ್ಷೆ ವ್ಯಕ್ತಪಡಿಸುವುದು ಗಮನಕ್ಕೆ ಬಂದಿದೆ. ವಿವಿಧ ಹುದ್ದೆ ಕುರಿತು ಆಕಾಂಕ್ಷೆ ವ್ಯಕ್ತಪಡಿಸುವುದು ಗಮನಕ್ಕೆ ಬಂದಿದೆ. ಪಕ್ಷದ ಸಭೆಗಳಲ್ಲಿ ಈ ವಿಷಯ ಬಗ್ಗೆ ಚರ್ಚೆ ಮಾಡೋದು ಸರಿಯಲ್ಲ. ಪಕ್ಷದ ಘನತೆಗೆ ಧಕ್ಕೆ ಉಂಟಾಗದಂತೆ ನಾಯಕರು ನೋಡಿಕೊಳ್ಳಬೇಕು. ಪಕ್ಷದ ಆಂತರಿಕ ವಿಚಾರವನ್ನು ಬಹಿರಂಗವಾಗಿ ಚರ್ಚಿಸುವುದು ಸೂಕ್ತವಲ್ಲ ಎಂದು ರಾಜ್ಯ ಬಿಜೆಪಿ ಮುಖಂಡರಿಗೆ ನಳಿನ್ ಕುಮಾರ್ ಕಟೀಲು ಸೂಚನೆ ನೀಡಿದ್ದಾರೆ.

ಇತ್ತೀಚೆಗಷ್ಟೇ ಮಾಜಿ ಸಚಿವ ವಿ ಸೋಮಣ್ಣ ಅವರು ತಾವು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಹೇಳಿದ್ದರು. ಚುನಾವಣೆಯಲ್ಲಿ ಹೆಚ್ಚು ರಿಸ್ಕ್ ತೆಗೆದುಕೊಂಡಿದ್ದೇನೆ. ನನಗೆ ಅಧ್ಯಕ್ಷ ಸ್ಥಾನ ಕೊಟ್ಟರೆ ಅಧ್ಯಕ್ಷ ಹೇಗಿರಬೇಕು ಎಂಬುದನ್ನು 100 ದಿನಗಳಲ್ಲಿ ತೋರಿಸಿಕೊಡುತ್ತೇನೆ ಎಂದು ಹೇಳಿದ್ದರು. ಈ ಮಧ್ಯೆ, ಆರಗ ಜ್ಞಾನೇಂದ್ರ ಸೇರಿ ಹಲವು ನಾಯಕರ ಹೆಸರು ಅಧ್ಯಕ್ಷ ಸ್ಥಾನಕ್ಕೆ ಕೇಳಿಬಂದಿದೆ. ವಿಧಾನಸಭೆ ಪ್ರತಿಪಕ್ಷ ನಾಯಕನ ಸ್ಥಾನಕ್ಕೂ ಹಲವರ ಹೆಸರು ಕೇಳಿಬಂದಿದೆ.

ರಾಜ್ಯದ ವಿವಿಧೆಡೆಗಳಲ್ಲಿ ನಡೆಯುತ್ತಿರುವ ಬಿಜೆಪಿಯ ಕಾರ್ಯಕರ್ತರ ಸಭೆಗಳಲ್ಲಿಯೂ ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಳ್ಳುತ್ತಿರುವುದು ಪಕ್ಷಕ್ಕೆ ಮುಜುಗರ ಉಂಟುಮಾಡಿದೆ. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಕಟೀಲ್ ಅವರು ನಾಯಕರಿಗೆ ಸೂಚನೆ ನೀಡಿದ್ದಾರೆ.

Leave a Reply

Your email address will not be published. Required fields are marked *