ಗೃಹಜ್ಯೋತಿ(Gruha jyothi) ಯೋಜನೆ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದ್ದು, ‘ನದಿ ದಾಟಿದ ಮೇಲೆ ಅಂಬಿಗ ಯಾಕೆಂಬ ಧೋರಣೆಯಲ್ಲೀಗ ಸಿದ್ದರಾಮಯ್ಯ(Siddaramaiah) ಸರ್ಕಾರವಿದೆ ಎಂದು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.
ಬೆಂಗಳೂರು: ಗೃಹಜ್ಯೋತಿ(Gruha jyothi) ಯೋಜನೆ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ(BJP) ವಾಗ್ದಾಳಿ ನಡೆಸಿದ್ದು, ‘ನದಿ ದಾಟಿದ ಮೇಲೆ ಅಂಬಿಗ ಯಾಕೆಂಬ ಧೋರಣೆಯಲ್ಲೀಗ ಸಿದ್ದರಾಮಯ್ಯ(Siddaramaiah) ಸರ್ಕಾರವಿದೆ. ಬದುಕು ಕಟ್ಟಿಕೊಂಡ ಹೆಚ್ಚಿನವರು ಬಾಡಿಗೆ ಮನೆಗಳಲ್ಲಿ ವಾಸವಾಗಿರುತ್ತಾರೆ. ಬಾಡಿಗೆ ಮನೆಯಲ್ಲಿರುವವರ ಪಾಲಿಗೆ ಉಚಿತ ವಿದ್ಯುತ್ ಗಗನ ಕುಸುಮವಾಗಿದೆ. ಅಷ್ಟೇ ಅಲ್ಲ ಹೊಸದಾಗಿ ಮನೆ ಕಟ್ಟಿದವರಿಗೆ ಈ ಯೋಜನೆ ಅಸ್ಪೃಶ್ಯ. ಉಚಿತ ಬಿಡಿ, ಮೊದಲು ವಿದ್ಯುತ್ ಪೂರೈಸಿ ಎಂದು ಜನ ಶಾಪ ಹಾಕುತ್ತಿದ್ದಾರೆ ಎಂದು ಟ್ವೀಟ್ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಫ್ರೀ ವಿದ್ಯುತ್ ಯೋಜನೆ ಬಗ್ಗೆ ವಿವರಣೆ ನೀಡಿದ್ದ ಸಚಿವ ಕೆಜೆ ಜಾರ್ಜ್
ರಾಜ್ಯದಲ್ಲಿ 200 ಯೂನಿಟ್ಗಿಂತ ಕಡಿಮೆ ವಿದ್ಯುತ್ ಬಳಕೆದಾರರು 2.16 ಕೋಟಿ ಜನರಿದ್ದಾರೆ. 2 ಲಕ್ಷ ಗ್ರಾಹಕರು ಮಾತ್ರ 200 ಯೂನಿಟ್ಗಿಂತ ಹೆಚ್ಚಾಗಿ ಬಳಕೆ ಮಾಡುತ್ತಾರೆ. ಗೃಹಜ್ಯೋತಿ ಯೋಜನೆ ಲಾಭ ಪಡೆಯಲು ಅರ್ಜಿ ಹಾಕಬೇಕು. ಸೇವಾ ಸಿಂಧು ಆ್ಯಪ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಹಾಗೇ ಒಂದು ಪ್ರತ್ಯೇಕ ಆ್ಯಪ್ ಬಿಡುಗಡೆ ಮಾಡುತ್ತೇವೆ. ಸ್ವಂತ ಮನೆ ಇರಲಿ, ಬಾಡಿಗೆ ಮನೆ ಇರಲಿ ಕರಾರುಪತ್ರ ಬೇಕು ಎಂದು ಇಂಧನ ಖಾತೆ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದರು.
ಇನ್ನು ಬೆಂಗಳೂರಿನ ಬೆಸ್ಕಾಂ ಮುಖ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಅವರು ಹೊಸ ಮನೆ ಕಟ್ಟಿದವರಿಗೆ, ಕಳೆದ ಮೂರ್ನಾಲ್ಕು ತಿಂಗಳಿನಿಂದ ಬಾಡಿಗೆ ಇರುವವರಿಗೆ ಸದ್ಯಕ್ಕೆ ಯೋಜನೆ ಸಿಗಲ್ಲ. ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ಇನ್ನು 2 ದಿನದಲ್ಲಿ ಸ್ಪಷ್ಟನೆ ಕೊಡುತ್ತೇವೆ ಎಂದಿದ್ದರು. ಜೊತೆಗೆ ಬೇರೆ ರಾಜ್ಯದಿಂದ ಬಂದು, ಇಲ್ಲಿ ವಾಸವಾದವರಿಗೂ ಈ ಸೌಲಭ್ಯ ನೀಡಲಾಗುತ್ತದೆ. ಆದರೆ ಆಧಾರ್ ವಿಳಾಸ ಇಲ್ಲಿ ಇರುವಂತೆ ಬದಲಾಯಿಸಿಕೊಳ್ಳಬೇಕು. ಇಲ್ಲವಾದಲ್ಲಿ ಬಾಡಿಗೆ ಕರಾರುಪತ್ರ ಕಡ್ಡಾಯವಾಗಿ ಇರಬೇಕು ಎಂದು ಹೇಳಿದ್ದರು.