ಇಡೀ ಬಿಜೆಪಿ ಒಂದು ಪಂಚೆಯೊಳಗೆ ಬಂಧಿಯಾಗಿ ವಿಲವಿಲ ಒದ್ದಾಡುತ್ತಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿತ್ತು. ಇದಕ್ಕೆ ತಿರುಗೇಟು ನೀಡಿದ ಸಿಟಿ ರವಿ, ಇದನ್ನು ಸಿದ್ದರಾಮಯ್ಯ ಅವರಿಗೆ ತಳುಕು ಹಾಕಿದ್ದಾರೆ.

ಬೆಂಗಳೂರು: ಚುನಾವಣೆಯಲ್ಲಿ ಹೀನಾಯ ಸೋಲಿನಿಂದ ಕಂಗೆಟ್ಟ ಕೆಲವು ಬಿಜೆಪಿ ನಾಯಕರು ಪಕ್ಷದ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ (BL Santhosh), ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಇದನ್ನೇ ಮುಂದಿಟ್ಟುಕೊಂಡು ವ್ಯಂಗ್ಯವಾಡಿದ ರಾಜ್ಯ ಇಡೀ ಬಿಜೆಪಿ (BJP) ಒಂದು ಪಂಚೆಯೊಳಗೆ (ಬಿಎಲ್ ಸಂತೋಷ್) ಬಂಧಿಯಾಗಿ ವಿಲವಿಲ ಒದ್ದಾಡುತ್ತಿದೆ ಎಂದು ಹೇಳಿದೆ.

“ಇಡೀ ಬಿಜೆಪಿ ಒಂದು ಪಂಚೆಯೊಳಗೆ ಬಂಧಿಯಾಗಿ ವಿಲವಿಲ ಒದ್ದಾಡುತ್ತಿದೆ. ಬಂಧನದಿಂದ ಹೊರಬರಬೇಕು ಎಂದರೆ ಆ “ಪಂಚೆ”ಯನ್ನು ಹರಿಯಲೇಬೇಕು. ದುಡಿಯದೆ, ಬೆವರು ಹರಿಸದೆ, ತಿರುಗದೆ, ನಾಲ್ಕು ಮತವನ್ನು ಗಳಿಸುವ ಶಕ್ತಿಯೂ ಇಲ್ಲದ ಆ ‘ಸಂಘ’ಟನಾ ಕಾರ್ಯದರ್ಶಿಯ ವಿರುದ್ಧ ಮಾತನಾಡಿದ ಒಬ್ಬೇ ಒಬ್ಬ ವ್ಯಕ್ತಿ ಅಂದರೆ ರೇಣುಕಾಚಾರ್ಯ. ಬಿಜೆಪಿಯಲ್ಲಿ ಅವರು ಬದುಕುಳಿಯಲು ಸಾಧ್ಯವೇ ಎಂದು ಕಾದು ನೋಡಬೇಕು” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಕಾಂಗ್ರೆಸ್ ಟೀಕೆಗೆ ತಿರುಗೇಟು ನೀಡಿದ ಸಿಟಿ ರವಿ

ಪಂಚೆಯೊಳಗೆ ಬಿಜೆಪಿ ಸಿಲುಕಿ ವಿಲವಿಲ ಎಂದು ಒದ್ದಾಡುತ್ತಿದೆ ಎಂಬ ಕಾಂಗ್ರೆಸ್ ಟ್ವೀಟ್​ಗೆ ತಿರುಗೇಟು ನೀಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಅದನ್ನು ಸಿದ್ದರಾಮಯ್ಯ (ಸಿದ್ದರಾಮಯ್ಯ ಪಂಚೆಯನ್ನೇ ಧರಿಸುವುದು) ಅವರಿಗೆ ಹೇಳಿರಬೇಕು ಎಂದು ಹೇಳಿದ್ದಾರೆ. ಡಿ.ಕೆ. ಶಿವಕುಮಾರ್ ಕಡೆಯವರು ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಿದ್ದಾರೆ ಅನ್ನಿಸುತ್ತದೆ. ಅದಕ್ಕೆ ಸಿದ್ದರಾಮಯ್ಯಗೆ ಸ್ವಲ್ಪ ಹುಷಾರಾಗಿ ಇರಲು ಹೇಳಿ. ಅವರಲ್ಲೇ ಒಳಬೇಗುದಿ ಜಾಸ್ತಿಯಾಗಿದೆ, ಅವರ ಬಗ್ಗೆ ಹೇಳಿಕೊಂಡಿರಬೇಕು ಎಂದರು.

ಬಿಜೆಪಿ 20 ಬಣವಾಗಿದೆ, ಫೆವಿಕಾಲ್ ಹಾಕಿದರೂ ಅಂಟಲ್ಲ ಎಂಬ ಎಂ.ಬಿ. ಪಾಟೀಲ್ ಹೇಳಿಕೆಗೆ ತಿರುಗೇಟು ನೀಡಿದ ಸಿಟಿ ರವಿ, ಯಾರು ಯಾರು ಎಲ್ಲೆಲ್ಲಿ ಹರಿದುಕೊಂಡು ಹೋಗುತ್ತದೆ ಎಂದು ಸ್ವಲ್ಪ ದಿನ ಕಾಯಿರಿ. ಈ ಸರ್ಕಾರ ಬಂದು ಬರೀ 1.5 ತಿಂಗಳು ಮಾತ್ರ ಆಗಿದೆ. ಆಗಲೇ ಸ್ವಲ್ಪ ಸ್ವಲ್ಪ ಹರಿಯಲು ಶುರುವಾಗಿದೆ. ಮುಂದೆ ಯಾರು ಯಾರದ್ದು ಎಲ್ಲೆಲ್ಲಿ ಹರಿದುಕೊಂಡು ಹೋಗುತ್ತದೆ ಸ್ವಲ್ಪ ದಿನ ಕಾಯಿರಿ ಎಂದರು.

Leave a Reply

Your email address will not be published. Required fields are marked *