ಡಿ. ಕೆ ಶಿವಕುಮಾರ್‌ನ ಏನಂತ ಕರೀತಿದ್ರು ಡಾನ್ ಕೊತ್ವಾಲ್ ರಾಮಚಂದ್ರ? ಅಸಲಿ ಕಥೆಯೇನು?

ಡಿ. ಕೆ ಶಿವಕುಮಾರ್‌ನ ಏನಂತ ಕರೀತಿದ್ರು ಡಾನ್ ಕೊತ್ವಾಲ್ ರಾಮಚಂದ್ರ? ಅಸಲಿ ಕಥೆಯೇನು?

ಡಿ ಕೆ ಶಿವಕುಮಾರ್ ಹಾಗೂ ಡಾನ್ ಕೊತ್ವಾಲ್ ರಾಮಚಂದ್ರ ನಡುವೆ ಒಟನಾಟ ಇತ್ತು. ಕೆಲವರಂತೂ ಡಿಕೆಶಿ, ಕೊತ್ವಾಲನ ಶಿಷ್ಯ ಎನ್ನುವ ರೀತಿಯಲ್ಲಿ ಮಾತನಾಡುತ್ತಾರೆ. ವೀಕೆಂಡ್ ಶೋಗೆ ಡಿಸಿಎಂ ಡಿ.ಕೆ ಶಿವಕುಮಾರ್ ಬರ್ತಾರೆ ಎನ್ನುತ್ತಿದ್ದಂತೆ ಕೊತ್ವಾಲನ ಬಗ್ಗೆ ಪ್ರಸ್ತಾಪ ಆಗುತ್ತದೆ ಎಂದು ಕೆಲವರು ಅಂದುಕೊಂಡಿದ್ದರು.

ಶನಿವಾರದ ಎಪಿಸೋಡ್‌ನಲ್ಲಿ ಒಮ್ಮೆ ಮಾತ್ರ ಕೊತ್ವಾಲನ ಹೆಸರು ಬಂತು.

ಡಿ. ಕೆ ಶಿವಕುಮಾರ್‌ ಸ್ನೇಹಿತರು ಬಂದು ಮಾತನಾಡುವಾಗ ಆ ದಿನಗಳಲ್ಲಿ ಏನಾಯಿತು ಎನ್ನುವ ವಿಚಾರ ಪ್ರಸ್ತಾಪ ಆಯಿತು. ಆದರೆ ಭಾನುವಾರದ ಎಪಿಸೋಡ್‌ನಲ್ಲಿ ಪ್ರಸ್ತಾಪ ಆಗಲಿಲ್ಲ. ವೇದಿಕೆಗೆ ಬಂದಂತಹ ಡಿ. ಕೆ ಶಿವಕುಮಾರ್ ಸ್ನೇಹಿತರಾದ ಪರಮೇಶ್‌ರವರು ಕಾಲೇಜಿನಲ್ಲಿ ಡಿಕೆಶಿ ಅವರು ಯಾವ ರೀತಿ ಇದ್ದರೂ ಅವರು ಯಾವ ರೀತಿ ಚುನಾವಣೆಗಳನ್ನೆಲ್ಲ ಎದುರಿಸಿದರು ಎನ್ನುವುದನ್ನು ವಿವರಿಸಿದ್ದರು.

ಶಿವಕುಮಾರ್ ಅವರು ಯಾರ ಸಹಾಯ ಪಡೆಯದೇ ಮೇಲೆ ಬಂದವರು. ಅವರಿಗೆ ಅಂತಹ ಶಕ್ತಿ ಇತ್ತು. ಅವರ ಕ್ಯಾಲಿಬರ್ ಅಂತಹದ್ದು ಎಂದು ಅವರ ಸ್ನೇಹಿತ ಪರಮೇಶ್ ತಿಳಿಸಿದ್ದಾರೆ. ಇನ್ನು ಸಿಹಿ ಕಹಿ ಚಂದ್ರು ಸಹ ಒಂದು ಹೆಜ್ಜೆ ಮುಂದೆ ಹೋಗಿ ನಾನು ಹಾಗೂ ಡಿ. ಕೆ ಶಿವಕುಮಾರ್ ಇಬ್ಬರು ಪ್ರೈಮರಿ ಸ್ಕೂಲ್‌ನಿಂದ ಫ್ರೆಂಡ್ಸ್‌ ಆಗಿದ್ದೇವೆ. ಇವನಿಂದ ನಾನು ಡಿಸಿಪ್ಲೀನ್, ಡಿಗ್ನಿಟಿ, ಡಿಟರ್ಮಿನೇಷನ್ 3 ‘ಡಿ’ಗಳನ್ನು ಕದಿಯುತ್ತೇನೆ ಎಂದು ವೇದಿಕೆಯ ಮೇಲೆ ಹಂಚಿಕೊಂಡಿದ್ದಾರೆ.

ಕ್ರೀಡೆಯಲ್ಲೂ ಅಪಾರ ಆಸಕ್ತಿ

ಮತ್ತೊಬ್ಬ ಗೆಳೆಯ ಜನಾರ್ದನ್, ಡಿ. ಕೆ ಶಿವಕುಮಾರ್ ಬಗ್ಗೆ ಮಾತನಾಡಿ ಕಾಲೇಜಿನಲ್ಲಿ ಪ್ರತಿ ಹಂತದಲ್ಲೂ ಡಿಕೆಶಿ ಚಾಂಪಿಯನ್ ಆಗಿ ಹೊರಹೊಮ್ಮುತ್ತಿದ್ದರು. ಆದರೂ ಸಹ ನನಗೂ ಸಹಾಯವನ್ನ ಮಾಡಿ ನಾನು ಚಾಂಪಿಯನ್ ಎಂದು ಹೇಳುತ್ತಿದ್ದರು. ಇದಕ್ಕೆ ಅವರ ಉದಾರವಾದ ಮನಸ್ಸೇ ಕಾರಣವಾಗಿದೆ ಎಂದು ತಿಳಿಸಿದ್ದಾರೆ. ಶಿವಕುಮಾರ್ ಅವರು ರಾಜಕಾರಣದಲ್ಲಷ್ಟೇ ಅಲ್ಲದೇ ಕ್ರೀಡೆಯಲು ಸಹ ಅಪಾರ ಆಸಕ್ತಿ ಬೆಳೆಸಿಕೊಂಡು ಹಲವಾರು ಬಹುಮಾನಗಳನ್ನ ಪಡೆದುಕೊಂಡಿದ್ದಾರೆ.

ಡಿಕೆಶಿ ನೋಡಿ ಕೊತ್ವಾಲ್ ಹೇಳಿದ್ದೇನು?

ಡಿ.ಕೆ ಶಿವಕುಮಾರ್ ಎಲೆಕ್ಷನ್‌ನಲ್ಲಿ ನಿಂತಿದ್ದಾಗ ಕೊತ್ವಾಲ್ ರಾಮಚಂದ್ರ ಅನೇಕ ಬಾರಿ ಮುಖಾಮುಖಿಯಾಗಿದ್ದಾರೆ. ಇದೇ ವೇಳೆ ಡಿ. ಕೆ ಶಿವಕುಮಾರ್‌ಗೆ “ನೀನು ಸ್ಟೂಡೆಂಟ್ ರಾಜ್ ಕುಮಾರ್ ನಮ್ಮ ಎದುರಿಗೆ ಬರಬೇಡ ನಮ್ಮ ಜೊತೆ ಕಾಣಿಸಿಕೊಳ್ಳಬೇಡ” ಎಂದು ಹೇಳುತ್ತಿದ್ದರಂತೆ. ಮುಂದೆ ದೊಡ್ಡ ವ್ಯಕ್ತಿಯಾಗಿ ಬೆಳೆಯಬೇಕು ಎಂದು ಡಿ. ಕೆ.ಶಿವಕುಮಾರ್ ಅವರಿಗೆ ಕೊತ್ವಾಲ್ ರಾಮಚಂದ್ರ ಹೇಳಿದ್ದರಂತೆ. ಇದನ್ನು ಡಿಕೆಶಿ ಗೆಳೆಯ ಪರಮೇಶ್ ವೇದಿಕೆಯ ಮೇಲೆ ತಿಳಿಸಿದ್ದಾರೆ.

ಶಿವಕುಮಾರ್ ಹೆಸರು ಹೇಗೆ ಬಂತು?

ಡಿ. ಕೆ ಶಿವಕುಮಾರ್ ಅವರಿಗೆ ಆ ಹೆಸರು ಏಕೆ ಬಂತು ಎಂದು ಎಷ್ಟೋ ಜನರಿಗೆ ಗೊತ್ತಿಲ್ಲ. ಇದರ ಬಗ್ಗೆ ಅವರ ತಾಯಿ ಗೌರಮ್ಮನವರು ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಹೇಳಿಕೊಂಡಿದ್ದಾರೆ. ಡಿ. ಕೆ ಶಿವಕುಮಾರ್ ಅವರ ತಾಯಿಗೆ ಎರಡರಿಂದ ಮೂರು ವರ್ಷ ಮಕ್ಕಳಿರಲಿಲ್ಲ. ಇದರಿಂದಾಗಿ ಶಿವಾಲ್ದಪ್ಪನ ಬೆಟ್ಟಕ್ಕೆ ಹರಕೆ ಕಟ್ಟಿಕೊಂಡ ಮೇಲೆ ಡಿ. ಕೆ ಶಿವಕುಮಾರ್ ಜನಿಸಿದ್ದರಿಂದ ಅವರಿಗೆ ಶಿವಕುಮಾರ್ ಎಂಬ ಹೆಸರನ್ನು ಇಟ್ಟಿರುವುದಾಗಿ ಗೌರಮ್ಮ ಅವರು ಹೇಳಿದ್ದಾರೆ.

ತಂಗಿ ಭವಿಷ್ಯ ರೂಪಿಸಿದ ಅಣ್ಣ

ಡಿ. ಕೆ ಶಿವಕುಮಾರ್ ತಂದೆ ತಾಯಿಗೆ 3 ಜನ ಮಕ್ಕಳು. ಅದರಲ್ಲಿ ತಂಗಿ ಮಂಜುಳಾ ಅಂದರೆ ಡಿ. ಕೆ ಶಿವಕುಮಾರ್ ಅವರಿಗೆ ಬಹಳ ಅಚ್ಚುಮೆಚ್ಚು. ಮನೆಗೆ ಬಂದಿದ್ದ ಜ್ಯೋತಿಷಿಗಳ ಬಳಿ ಮಂಜುಳಾ ಅವರು ಕೈ ತೋರಿಸಲು ಹೋದಾಗ ನಿನ್ನ ಭವಿಷ್ಯವನ್ನು ನಾನೇ ರೂಪಿಸುತ್ತೇನೆ ನಿನಗೆ ನಾನು ಇದ್ದೇನೆ ಎಂದು ಹೇಳಿದಂತೆ ಅಣ್ಣ ಭವಿಷ್ಯವನ್ನು ರೂಪಿಸಿದ್ದಾನೆ ಎಂದು ಮಂಜುಳಾ ಅವರು ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಹೇಳಿಕೊಂಡಿದ್ದಾರೆ.

ಮೂವರು ಒಟ್ಟಿಗೆ ಆಡಿ ಬೆಳೆದಿದ್ದು ಕಡಿಮೆ. ಬೇಸಿಗೆ ರಜಾದಲ್ಲಿ ಮಾತ್ರ ಊರಿನಲ್ಲಿ ಒಟ್ಟಿಗೆ ಆಟವಾಡುತ್ತಾ ಕಾಲವನ್ನು ಕಳೆಯುತ್ತಿದ್ದವು ಎಂದು ಬಾಲ್ಯದ ನೆನಪನ್ನ ಮಂಜುಳಾ ಹಂಚಿಕೊಂಡಿದ್ದಾರೆ. ಭಾನುವಾರ ಎಪಿಸೋಡ್‌ನಲ್ಲಿ ಡಿ. ಕೆ ಶಿವಕುಮಾರ್‌ ಜೀವನದಲ್ಲಿ ಮುಂದೆ ಏನೆಲ್ಲಾ ಆಯ್ತು ಎನ್ನುವುದನ್ನು ಹೇಳಲಾಯಿತು.

Leave a Reply

Your email address will not be published. Required fields are marked *