ಟೆಸ್ಟ್‌ ವಿಶ್ವಕಪ್‌ ಫೈನಲ್‌ ಮೇಲೆ ಆಸ್ಪ್ರೇಲಿಯಾ ಬಿಗಿ ಹಿಡಿತ
ಹೆಡ್‌ 163, ಸ್ಮಿತ್‌ 121, ಆಸೀಸ್‌ 469/10
ಭಾರತಕ್ಕೆ ಕೈಕೊಟ್ಟಅಗ್ರ ಕ್ರಮಾಂಕ, ರಹಾನೆ, ಜಡೇಜಾ 71 ರನ್‌ ಜೊತೆಯಾಟ
2ನೇ ದಿನದಾಟದಂತ್ಯಕ್ಕೆ ಭಾರತ 151ಕ್ಕೆ 5
 

WTC Final 2023 How many runs does India need to avoid follow on kvn

ಲಂಡನ್‌(ಜೂ.09): ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಭಾರತ ಫಾಲೋ ಆನ್‌ ಭೀತಿಗೆ ಸಿಲುಕಿದೆ. ಆಸ್ಪ್ರೇಲಿಯಾ ಮೊದಲ ಇನ್ನಿಂಗ್‌್ಸನಲ್ಲಿ 469 ರನ್‌ ಬೃಹತ್‌ ಮೊತ್ತ ಕಲೆಹಾಕಿದ ಬಳಿಕ ಭಾರತ ಮೊದಲ ಇನ್ನಿಂಗ್ಸಲ್ಲಿ 2ನೇ ದಿನದಂತ್ಯಕ್ಕೆ 5 ವಿಕೆಟ್‌ಗೆ 151 ರನ್‌ ಗಳಿಸಿದ್ದು, ಇನ್ನೂ 318 ರನ್‌ ಹಿನ್ನಡೆಯಲ್ಲಿದೆ. ಫಾಲೋ ಆನ್‌ ತಪ್ಪಿಸಿಕೊಳ್ಳಲು ಇನ್ನೂ 118 ರನ್‌ ಗಳಿಸಬೇಕಿದ್ದು, ಪಂದ್ಯ ಸಂಪೂರ್ಣವಾಗಿ ಆಸ್ಪ್ರೇಲಿಯಾ ಹಿಡಿತದಲ್ಲಿದೆ.

ಮೊದಲ ದಿನ 3 ವಿಕೆಟ್‌ ನಷ್ಟಕ್ಕೆ 327 ರನ್‌ ಗಳಿಸಿದ್ದ ಆಸೀಸ್‌, 2ನೇ ದಿನ ಆ ಮೊತ್ತಕ್ಕೆ 142 ರನ್‌ ಸೇರಿಸಿತು. ದಿನದಾಟದ 2ನೇ ಅವಧಿಯಲ್ಲಿ ಬ್ಯಾಟಿಂಗ್‌ಗಿಳಿದ ಭಾರತಕ್ಕೆ ಆರಂಭಿಕ ಆಘಾತ ಎದುರಾಯಿತು. ಆಸೀಸ್‌ ವೇಗಿಗಳ ಶಿಸ್ತುಬದ್ಧ ದಾಳಿಯ ಎದುರು ಆರಂಭಿಕರು ಮಂಕಾದರು. ರೋಹಿತ್‌ 15 ರನ್‌ ಗಳಿಸಿದ್ದಾಗ ಕಮಿನ್ಸ್‌ರ ಎಸೆತದಲ್ಲಿ ಎಲ್‌ಬಿ ಬಲೆಗೆ ಬಿದ್ದರೆ, ಗಿಲ್‌(13)ರನ್ನು ಬೋಲೆಂಡ್‌ ಬೌಲ್ಡ್‌ ಮಾಡಿದರು.

ಚೇತೇಶ್ವರ್‌ ಪೂಜಾರ ಹಾಗೂ ವಿರಾಟ್‌ ಕೊಹ್ಲಿ ಕೆಲ ಹೊತ್ತು ಕ್ರೀಸ್‌ನಲ್ಲಿ ನೆಲೆಯೂರಿದರು. ಇವರಿಬ್ಬರ ನಡುವೆ ಮೂಡಿಬಂದಿದ್ದು ಕೇವಲ 20 ರನ್‌ ಜೊತೆಯಾಟ. ಪೂಜಾರ(14) ಗ್ರೀನ್‌ ರ ಆಕರ್ಷಕ ಬೌಲಿಂಗ್‌ಗೆ ವಿಕೆಟ್‌ ಕಳೆದುಕೊಂಡರೆ, ಸ್ಟಾಕ್‌ರ ಮಾರಕ ಬೌನ್ಸರ್‌ ಕೊಹ್ಲಿ(14)ಯನ್ನು ಬಲಿ ಪಡೆಯಿತು. 71 ರನ್‌ಗೆ 4 ವಿಕೆಟ್‌ ಕಳೆದುಕೊಂಡ ಭಾರತ ಸಂಕಷ್ಟಕ್ಕೆ ಸಿಲುಕಿತು.

ರಹಾನೆ-ಜಡ್ಡು ಹೋರಾಟ: ಆಸೀಸ್‌ ವೇಗಿಗಳು ಬೆಂಕಿ ಉಗುಳುತ್ತಿದ್ದಾಗ ಅವರ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಅಜಿಂಕ್ಯ ರಹಾನೆ ಹಾಗೂ ರವೀಂದ್ರ ಜಡೇಜಾ ತಂಡಕ್ಕೆ ಆಸರೆಯಾದರು. ಇವರಿಬ್ಬರ ಜೊತೆಯಾಟ ಭಾರತ ಮತ್ತೊಂದು ವಿಕೆಟ್‌ ಕಳೆದುಕೊಳ್ಳದೆ ದಿನದಾಟ ಮುಕ್ತಾಯಗೊಳಿಸಲಿದೆ ಎನ್ನುವ ನಂಬಿಕೆ ಮೂಡಿಸಿತ್ತು. ಆದರೆ ಸ್ಪಿನ್ನರ್‌ ನೇಥನ್‌ ಲಯನ್‌ ದಾಳಿಗಿಳಿಯುತ್ತಿದ್ದಂತೆ ಜಡೇಜಾ(48)ರನ್ನು ಔಟ್‌ ಮಾಡಿದರು. ಇದರೊಂದಿಗೆ 71 ರನ್‌ಗಳ ಜೊತೆಯಾಟಕ್ಕೆ ತೆರೆ ಬಿತ್ತು.

29 ರನ್‌ ಗಳಿಸಿರುವ ರಹಾನೆ, 5 ರನ್‌ ಗಳಿಸಿರುವ ಕೆ.ಎಸ್‌.ಭರತ್‌ 3ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದು, ಶುಕ್ರವಾರ ಭಾರತದ ಮೊದಲ ಗುರಿ 270 ರನ್‌ ದಾಟಿ ಫಾಲೋ ಆನ್‌ ತಪ್ಪಿಸಿಕೊಳ್ಳುವುದಾಗಿರಲಿದೆ.

ಟೆಸ್ಟ್‌ನಲ್ಲಿ ಸ್ಮಿತ್‌ 31ನೇ ಶತಕ

ಆಸ್ಪ್ರೇಲಿಯಾದ ರನ್‌ ಮಷಿನ್‌ ಸ್ಟೀವ್‌ ಸ್ಮಿತ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ 31ನೇ ಶತಕ ದಾಖಲಿಸಿದ್ದು, ಗರಿಷ್ಠ ಶತಕ ಬಾರಿಸಿದವರ ಪಟ್ಟಿಯಲ್ಲಿ ಮ್ಯಾಥ್ಯೂ ಹೇಡನ್‌, ಶಿವನಾರಾಯಣ ಚಂದ್ರಪಾಲ್‌ರನ್ನು ಹಿಂದಿಕ್ಕಿ 12ನೇ ಸ್ಥಾನಕ್ಕೇರಿದ್ದಾರೆ. ಭಾರತ ವಿರುದ್ಧ ಇದು ಅವರ 9ನೇ ಶತಕ. ಇಂಗ್ಲೆಂಡ್‌ನ ಜೋ ರೂಟ್‌ ಸಹ 9 ಶತಕ ಬಾರಿಸಿದ್ದು, ಸ್ಮಿತ್‌ ಆ ದಾಖಲೆ ಸರಿಗಟ್ಟಿದ್ದಾರೆ.

ಐಸಿಸಿ ನಾಕೌಟ್‌ ಪಂದ್ಯದಲ್ಲಿ ರೋಹಿತ್‌ ಮತ್ತೆ ಫೇಲ್‌!

ರೋಹಿತ್‌ ಶರ್ಮಾ ಐಸಿಸಿ ನಾಕೌಟ್‌ ಪಂದ್ಯಗಳಲ್ಲಿ ತಮ್ಮ ಕಳಪೆ ಆಟ ಮುಂದುವರಿಸಿದ್ದಾರೆ. ಮೊದಲ ಇನ್ನಿಂಗ್ಸಲ್ಲಿ ರೋಹಿತ್‌ 15 ರನ್‌ಗೆ ಔಟಾದರು. ನಾಕೌಟ್‌ ಪಂದ್ಯಗಳ 16 ಇನ್ನಿಂಗ್ಸಲ್ಲಿ ರೋಹಿತ್‌ ಕೇವಲ 2 ಬಾರಿಯಷ್ಟೇ 50ಕ್ಕಿಂತ ಹೆಚ್ಚು ರನ್‌ ಕಲೆಹಾಕಿದ್ದಾರೆ. 2015ರ ಏಕದಿನ ವಿಶ್ವಕಪ್‌ನ ಕ್ವಾರ್ಟರ್‌ ಫೈನಲ್‌ನಲ್ಲಿ ಬಾಂಗ್ಲಾ ವಿರುದ್ಧ 137, 2017ರ ಚಾಂಪಿಯನ್ಸ್‌ ಟ್ರೋಫಿಯ ಸೆಮೀಸ್‌ನಲ್ಲಿ ಬಾಂಗ್ಲಾ ವಿರುದ್ಧ 123 ರನ್‌ ಗಳಿಸಿದ್ದನ್ನು ಹೊರತುಪಡಿಸಿದರೆ ಇನ್ಯಾವ ಪಂದ್ಯದಲ್ಲೂ ಅವರಿಂದ ತಂಡಕ್ಕೆ ದೊಡ್ಡ ಕೊಡುಗೆ ಸಿಕ್ಕಿಲ್ಲ.

Leave a Reply

Your email address will not be published. Required fields are marked *