ತುಮಕೂರಿನಲ್ಲಿ ನಡೆದಿದ್ದ ಟೈಲ್ಸ್ ಅಂಗಡಿ ಮಾಲೀಕನ ಭೀಕರ ಕೊಲೆಯ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ವೈಯಕ್ತಿಕ ದ್ವೇಷಕ್ಕೆ ಸ್ನೇಹಿತರೊಟ್ಟಿಗೆ ಸೇರಿ ಅಮ್ಮ ಮಗಳೇ ಅಮಾನುಷವಾಗಿ ಕೊಲೆ ಮಾಡಿಸಿದ್ದು, ತನಿಖೆಯಲ್ಲಿ ಹೊರಬಿದ್ದಿದೆ

ತುಮಕೂರು: ಜಿಲ್ಲೆಯ ಯಲ್ಲಾಪುರದಲ್ಲಿ ಮೇ.20 ರಂದು ನಡೆದಿದ್ದ ಟೈಲ್ಸ್ ಅಂಗಡಿ ಮಾಲೀಕನ ಭೀಕರ ಕೊಲೆಯ ಆರೋಪಿಗಳನ್ನ ಇದೀಗ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಂದು ಸಂಜೆ 7.30 ರ ಸುಮಾರಿನಲ್ಲಿ ಯಲ್ಲಾಪುರದಲ್ಲಿರುವ ಅರಫಾ ಟೈಲ್ಸ್ ಅಂಗಡಿಯ ಮಾಲೀಕ ಇಸ್ಮಾಯಿಲ್ ಅಲಿಯಾಸ್ ಜಾಕೀರ್ ತನ್ನ ಅಂಗಡಿಯಲ್ಲಿರುವಾಗಲೇ ಇಬ್ಬರು ದುಶ್ಕರ್ಮಿಗಳು ಬೈಕ್​ನಲ್ಲಿ ಬಂದು, ಮಾರಕಾಸ್ತ್ರಗಳಿಂದ ಜಾಕೀರ್​ನನ್ನ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದರು. ಈ ಘಟನೆ ಬಳಿಕ ಸ್ಥಳಕ್ಕೆ ದೌಡಾಯಿಸಿದ್ದ ತುಮಕೂರು(Tumakuru) ಗ್ರಾಮಾಂತರ ಪೊಲೀಸರು ಕೇಸ್​ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದರು. ಇನ್ನು ಸ್ಥಳಕ್ಕೆ ಭೇಟಿ ನೀಡಿದ್ದ ಎಸ್ಪಿ ರಾಹುಲ್ ಕುಮಾರ್, ಪೊಲೀಸರ ವಿಶೇಷ ತಂಡ ರಚಿಸಿ ಹಂತಕರಿಗೆ ಬಲೆ ಬೀಸಿದ್ದರು. ತನಿಖೆ ಯಶಸ್ವಿಯಾಗಿ ಕೊಲೆಗೆ ಸಂಬಂಧಿಸಿದ 4 ಆರೋಪಿಗಳನ್ನ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ವಿದ್ಯಾಧರ್, ರಬಿಯಾ, ಖುಬ್ರಾ, ಜೋಯೆಲ್ ಬಂಧಿತ ಆರೋಪಿಗಳು.

ಕೊಲೆಗೆ ಕಾರಣವೇನು?

ಕೊಲೆಯಾದ ಜಾಕೀರ್ ಈ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತ್ಯಾಮಗೊಂಡ್ಲುವಿನಲ್ಲಿ ವಾಸವಿದ್ದು, ದೂರದ ಸಂಬಂಧಿಗಳಾದ ಖುಬ್ರಾ ಹಾಗೂ ಅಕೆಯ ಮಗಳಾದ ರಬಿಯಾ ಪರಿಚಯವಾಗಿತ್ತು. ಇವರ ಪರಿಚಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆ ಜಾಕೀರ್, ರಬಿಯಾಗೆ ಕೆಲ ಮಾಟಮಂತ್ರದ ವಿದ್ಯೆ ಕಲಿಸಿದ್ದನಂತೆ. ಈ ಜೊತೆಗೆ ರಬಿಯಾ ಮೇಲೆ ಜಾಕೀರ್ ಮೋಹಿಸಿದ್ದನಂತೆ. ಆದರೆ, ಈ ವಿದ್ಯೆ ಕಲಿತ ಬಳಿಕ ರಬಿಯಾ ಬೇರೊಬ್ಬ ಹುಡುಗನನ್ನ ಪ್ರೇಮಿಸುತ್ತಿದ್ದಳು ಎನ್ನಲಾಗಿದೆ.

ಈ ವಿಚಾರ ತಿಳಿದ ಬಳಿಕ ರಬಿಯಾ ಹಾಗೂ ಖುಬ್ರಾಳ ಜೊತೆ ಜಾಕೀರ್ ಗಲಾಟೆ ಮಾಡಿಕೊಂಡಿದ್ದನಂತೆ. ನಿಮ್ಮ ಮಾಟಮಂತ್ರ ಶಕ್ತಿ ಕುಗ್ಗಿಸುವಂತೆ ಮಾಡ್ತೀನಿ ಹಾಗೂ ಎಲ್ಲರಿಗಿಂತ ಚೆನ್ನಾಗಿ ಬದುಕುತ್ತೇನೆ ಎಂದು ಜಾಕೀರ್ ಕುಬ್ರಾ ಹಾಗೂ ರಬೀಯಾಗೆ ಚಾಲೆಂಜ್ ಹಾಕಿ, ಅಲ್ಲಿಂದ ಯಲ್ಲಾಪುರಕ್ಕೆ‌ ಬಂದು ಟೈಲ್ಸ್ ಅಂಗಡಿ ಶುರುಮಾಡಿದ್ದ ಎನ್ನಲಾಗಿದೆ. ಇನ್ನು ಇದರಿಂದ ಕುಪಿತಗೊಂಡ ಖುಬ್ರಾ ಹಾಗೂ ರಬಿಯಾ ಪರಿಚಯಸ್ಥನಾದ ವಿದ್ಯಾಧರ ಹಾಗೂ ಸಂಬಂಧಿಯಾದ ಜೋಯೆಲ್ ಸಹಾಯ ಪಡೆದು ಜಾಕೀರ್​ನನ್ನ ಕೊಲೆ ಮಾಡಿಸಿದ್ದಾರೆ. ಸದ್ಯ ತುಮಕೂರು ಗ್ರಾಮಾಂತರ ಪೊಲೀಸರು ತನಿಖೆ ನಡೆಸಿ ನಾಲ್ವರು ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಮಾಟಮಂತ್ರದ ಮೂಡನಂಬಿಕೆಗೆ ಬಿದ್ದ ತಾಯಿ, ಮಗಳು ಒಬ್ಬನ ಹೆಣ ಕೆಡವಿರೋದು ಮಾತ್ರ ಆತಂಕದ ವಿಚಾರವೇ ಸರಿ.

ವರದಿ: ಮಹೇಶ್ ಟಿವಿ9 ತುಮಕೂರು

Leave a Reply

Your email address will not be published. Required fields are marked *