ಮೊದಲ ವಿಮಾನವು ಶಿವಮೊಗ್ಗ ಮತ್ತು ಬೆಂಗಳೂರು ನಡುವೆ ಸಂಚಾರ ಮಾಡಲಿದೆ. ಇಂಡಿಗೋ ಏರ್‌ಲೈನ್ಸ್ ಅಧಿಕಾರಿಗಳು ಕಳೆದ ವಾರ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಬಸ್ ಸೇವೆಗಳು ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪರಿಶೀಲಿಸಿದ್ದಾರೆ

Shivamogga Airport: ಶಿವಮೊಗ್ಗ ವಿಮಾನ ನಿಲ್ದಾಣದಿಂದ ಆಗಸ್ಟ್​ 11ರಿಂದ ವಿಮಾನ ಸಂಚಾರ; ಸಂಸದ ರಾಘವೇಂದ್ರ ಮಾಹಿತಿ

ಶಿವಮೊಗ್ಗ ವಿಮಾನ ನಿಲ್ದಾಣ

ಶಿವಮೊಗ್ಗ: ಶಿವಮೊಗ್ಗದಲ್ಲಿ ನೂತನವಾಗಿ ನಿರ್ಮಾಣಗೊಂಡು ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೋಕಾರ್ಪಣೆಗೊಂಡಿರುವ ವಿಮಾನ ನಿಲ್ದಾಣದಿಂದ (Shivamogga Airport) ಆಗಸ್ಟ್ 11 ರಂದು ವಿಮಾನ ಕಾರ್ಯಾಚರಣೆ ಆರಂಭವಾಗಲಿದೆ. ಮೊದಲ ವಿಮಾನವು ಶಿವಮೊಗ್ಗ ಮತ್ತು ಬೆಂಗಳೂರು ನಡುವೆ ಸಂಚಾರ ಮಾಡಲಿದೆ. ಇಂಡಿಗೋ ಏರ್‌ಲೈನ್ಸ್ (Indigo Airlines) ಅಧಿಕಾರಿಗಳು ಕಳೆದ ವಾರ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಬಸ್ ಸೇವೆಗಳು ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪರಿಶೀಲಿಸಿದ್ದಾರೆ ಎಂದು ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ (BY Raghavendra) ತಿಳಿಸಿರುವುದಾಗಿ ವರದಿಯಾಗಿದೆ.

ಫೆಬ್ರವರಿ 27 ರಂದು ದೆಹಲಿಯಿಂದ ಶಿವಮೊಗ್ಗಕ್ಕೆ ಬಂದಿಳಿಯುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ್ದರು. ಮೊದಲ ಬಾರಿಗೆ ಪ್ರಧಾನಿಯವರ ವಿಮಾನವೇ ಶಿವಮೊಗ್ಗ ನಿಲ್ದಾಣಕ್ಕೆ ಬಂದಿತ್ತು. ಇದು ನಮಗೆ ಐತಿಹಾಸಿಕ ಕ್ಷಣವಾಗಿತ್ತು. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಜನ್ಮದಿನದಂದು ವಿಮಾನ ನಿಲ್ದಾಣ ಉದ್ಘಾಟನೆಯಾಗಿರುವುದೂ ನಮಗೆ ಸಂತಸದ ವಿಚಾರ ಎಂದು ರಾಘವೇಂದ್ರ ಹೇಳಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್​​ಪ್ರೆಸ್’ ವರದಿ ಮಾಡಿದೆ.

ಮೂಲಗಳ ಪ್ರಕಾರ, ಇಂಡಿಗೋ ಏರ್‌ಲೈನ್ಸ್ ಶೀಘ್ರದಲ್ಲೇ ಶಿವಮೊಗ್ಗದಿಂದ ದೆಹಲಿ ಮತ್ತು ಮುಂಬೈಗೆ ವಿಮಾನ ಸಂಚಾರ ಆರಂಭಿಸಲಿದೆ. ಶಿವಮೊಗ್ಗ-ಬೆಂಗಳೂರು ನಡುವಿನ ಪ್ರಯಾಣ ದರದ ಬಗ್ಗೆ ಕೇಳಿದ ಪ್ರಶ್ನೆಗೆ ಸಂಸದರು ಪ್ರತಿ ವ್ಯಕ್ತಿಗೆ 2,500 ರಿಂದ 3,000 ರೂ. ಇರಲಿದೆ ಎಂದು ಹೇಳಿದ್ದಾರೆ. ಜಿಲ್ಲೆಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ವಿಮಾನ ನಿಲ್ದಾಣವು ಸಹಾಯ ಮಾಡಲಿದೆ. ಪ್ರಸಿದ್ಧ ಜೋಗ ಜಲಪಾತ ಮತ್ತು ಅನೇಕ ಧಾರ್ಮಿಕ ಸ್ಥಳಗಳು ಜಿಲ್ಲೆಯಲ್ಲಿದ್ದು, ಇವುಗಳಿಗೆ ಭೇಟಿ ನೀಡಲು ಪ್ರವಾಸಿಗರಿಗೆ ನೆರವಾಗಲಿದೆ ಎಂದು ಅವರು ಹೇಳಿರುವುದನ್ನು ವರದಿ ಉಲ್ಲೇಖಿಸಿದೆ.

ನೆರೆಯ ಜಿಲ್ಲೆಗಳಾದ ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗಳ ಅಭಿವೃದ್ಧಿಯಲ್ಲಿ ವಿಮಾನ ನಿಲ್ದಾಣ ದೊಡ್ಡ ಪಾತ್ರ ವಹಿಸಲಿದೆ. ಶಿವಮೊಗ್ಗದಿಂದ ವಿಮಾನ ಸೇವೆ ಆರಂಭವಾಗುವುದರಿಂದ ಜಿಲ್ಲೆಯ ಕೈಗಾರಿಕಾ ಕ್ಷೇತ್ರಕ್ಕೆ ದೊಡ್ಡ ಉತ್ತೇಜನ ದೊರೆಯಲಿದೆ ಎಂದು ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *