Ramesh Jarakiholi ಲೋಕಸಭೆ ಚುನಾವಣೆಯವರೆಗೆ ಮಾತ್ರ ಕಾಂಗ್ರೆಸ್ ಗ್ಯಾರಂಟಿ, ಆಮೇಲೆ ಕೈ ಕೊಡ್ತಾರೆ : ರಮೇಶ್ ಜಾರಕಿಹೊಳಿ

ಅಥಣಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ: ಮಹೇಶ ಕುಮಠಳ್ಳಿ ಸೋಲಿನ ಬಗ್ಗೆ ರಮೇಶ್ ಜಾರಕಿಹೊಳಿ ಪರಾಮರ್ಶೆ ನಡೆಸಿದರು. ಈ ವೇಳೆ ಮಾತನಾಡಿ, ಅಥಣಿ ಶಾಸಕ ಲಕ್ಷ್ಮಣ್ ಸವದಿ ಅಭಿವೃದ್ಧಿಗೋಸ್ಕರ ಕಾಂಗ್ರೆಸ್ ಪಕ್ಷ ಸೇರಿದ್ದು, ಕ್ಷೇತ್ರದ ಅಭಿವೃದ್ಧಿ ಮಾಡಲಿ ಎಂದು ಹಾರೈಸಿದರು.

ಚಿಕ್ಕೋಡಿ (ಬೆಳಗಾವಿ): ಅಥಣಿ ಶಾಸಕ ಲಕ್ಷ್ಮಣ್ ಸವದಿ ಅಭಿವೃದ್ಧಿಗೋಸ್ಕರ ಕಾಂಗ್ರೆಸ್ ಪಕ್ಷ ಸೇರಿದ್ದು, ಕ್ಷೇತ್ರದ ಅಭಿವೃದ್ಧಿ ಮಾಡಲಿ. ನಾವು ಅವರಿಗೆ ಸಹಕಾರ ಕೊಡುತ್ತೇವೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.

ಅಥಣಿ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ಸೋಲಿನ ಬಗ್ಗೆ ಕಾರ್ಯಕರ್ತರೊಂದಿಗೆ ಪರಾಮರ್ಶೆಯ ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಅಥಣಿ ಕಾಗವಾಡ ವಿಧಾನಸಭೆ ಸೋಲು ಜನರ ಕೊಟ್ಟ ತೀರ್ಪನ್ನು ನಾವು ಸ್ವಾಗತ ಮಾಡುತ್ತೇವೆ.

ಬರುವ ತಾ ಪಂ ಹಾಗೂ ಜಿ ಪಂ ಚುನಾವಣೆಯಲ್ಲಿ ಪಕ್ಷ ಸಂಘಟನೆ ಬಲಗೊಳಿಸುವ ನಿಟ್ಟಿನಲ್ಲಿ ನಾವು ಇವತ್ತು ಅಥಣಿ ಪಟ್ಟಣದಲ್ಲಿ ಕಾರ್ಯಕರ್ತರ ಸಭೆ ನಡೆಸಿದ್ದೇನೆ. ಮತ್ತೆ ಬಿಜೆಪಿ ಪಕ್ಷವನ್ನು ಬಲವರ್ಧನೆ ಮಾಡುತ್ತೇವೆ. ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ನಾವು ಪಕ್ಷ ಸಂಘಟನೆ ಮಾಡುತ್ತೇವೆ ಎಂದು ತಿಳಿಸಿದರು.

ಅಥಣಿಯಲ್ಲಿ ನಾವು ದೊಡ್ಡ ಪ್ರಮಾಣದಲ್ಲಿ ಸೋತಿದ್ದೇವೆ ನಾವು ಸೋಲನ್ನು ಸ್ವೀಕಾರ ಮಾಡುತ್ತೇವೆ. ನೂತನ ಶಾಸಕ ಸವದಿಗೆ ಅಭಿನಂದನೆ ಸಲ್ಲಿಸುತ್ತೇನೆ, ಸವದಿ ಅಭಿವೃದ್ಧಿಗೋಸ್ಕರ ಕಾಂಗ್ರೆಸ್ ಸೇರುತ್ತೇನೆ ಎಂದು ಹೇಳಿದ್ದು, ಅವರು ಅಭಿವೃದ್ಧಿ ಮಾಡಲಿ ಅವರಿಗೆ ಸಹಕಾರ ನೀಡಿ ಬೆಂಬಲಿಸುತ್ತೇವೆ ಎಂದು ಪ್ರತಿಕ್ರಿಯಿಸಿದರು.

ಗ್ಯಾರಂಟಿ ನಂಬಿ ಜನರು ಕಾಂಗ್ರೆಸ್​ಗೆ ಮತ: ಗ್ಯಾರಂಟಿ ಕಾರ್ಡ್ ಬಗ್ಗೆ ಪಕ್ಷದ ವರಿಷ್ಠರು ಮಾತನಾಡಬೇಡಿ ಎಂದು ಸೂಚನೆ ನೀಡಿದ್ದಾರೆ. ನಾವು ಮಾತನಾಡುವದಿಲ್ಲ. ಗ್ಯಾರಂಟಿ ನಂಬಿ ಜನರು ಕಾಂಗ್ರೆಸ್​ಗೆ ಮತ ನೀಡಿದ್ದಾರೆ. ಕಾಂಗ್ರೆಸ್​ನವರು ಭರವಸೆ ವಿಚಾರದಲ್ಲಿ ತಪ್ಪು ಮಾಡಲಿ, ನಾವು ಅವರಿಗೆ ಸರಿಯಾಗಿ ಉತ್ತರ ನೀಡುತ್ತೇವೆ. ಕಾಂಗ್ರೆಸ್​​ ಪಕ್ಷದವರು ಪಕ್ಕಾ ಮೋಸ ಮಾಡುತ್ತಾರೆ. ಲೋಕಸಭೆ ಚುನಾವಣೆಯವರೆಗೆ ಮಾತ್ರ ಕಾಂಗ್ರೆಸ್ ಗ್ಯಾರಂಟಿ, ಆಮೇಲೆ ಕೈ ಕೊಡ್ತಾರೆ ಎಂದು ಹೇಳಿದರು.

ಗ್ಯಾರಂಟಿ ನೆಪದಲ್ಲಿ ಅಭಿವೃದ್ಧಿಗಳೆಲ್ಲ ಬಂದ್​: ಗ್ಯಾರಂಟಿ ವಿಚಾರದಲ್ಲಿ ಕಾಂಗ್ರೆಸ್​​ನವರು ಷರತ್ತುಗಳನ್ನು ಅಳವಡಿಸಿ ಜನಕ್ಕೆ ಮೋಸ ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆ ನೀಡುವ ನೆಪದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳೆಲ್ಲ ಬಂದ್​ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಆರೋಪಿಸಿದ ಅವರು, ಮುಂದಿನ ದಿನಗಳಲ್ಲಿ ಬರುವ ಲೋಕಸಭೆ ಚುನಾವಣೆಯಲ್ಲಿ ಜನರು ನಮ್ಮ ಕೈ ಹಿಡಿಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಪ್ಪು ನಿರ್ಧಾರ ಕೈಗೊಂಡು ಕಂಟಕ ತಂದುಕೊಂಡರಾ ಸವದಿ? : ಈ ಬಾರಿಯ ಚುನಾವಣೆಯಲ್ಲಿ ಲಕ್ಷ್ಮಣ ಸವದಿ ಅವರ ವೈಯಕ್ತಿಕ ವರ್ಚಸ್ಸು ಕೆಲಸ ಮಾಡಿರುವುದನ್ನು ಯಾರೂ ಮರೆಯುವಂತಿಲ್ಲ. ಆದರೆ, ಬದಲಾಗಿರುವ ಈಗಿನ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿಯೊಂದಿಗೆ ಗಳಸ್ಯ – ಕಂಠಸ್ಯ ಎಂಬಂತಿದ್ದ ಸವದಿ, ಈಗ ದೂರಾಗಿರುವುದನ್ನು ನೋಡಿದರೆ ಅವರ ತೀರ್ಮಾನ ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

ಗಮನಿಸಬೇಕಾದ ಅಂಶವೆಂದರೆ, ಬಿಜೆಪಿಯಲ್ಲಿ ಹಿರಿಯ ರಾಜಕಾರಣಿಯಾಗಿ ಅದರಲ್ಲೂ ರಾಜ್ಯಮಟ್ಟದ ನಾಯಕರಾಗಿ ಹಾಗೂ ಚುರುಕು ಮುಟ್ಟಿಸುವ ತಮ್ಮ ಮಾತಿನ ಶೈಲಿಯಿಂದ ಎಲ್ಲೆಡೆ ಹೆಸರುವಾಸಿಯಾಗಿರುವ ಸವದಿಯವರು ಬಿಜೆಪಿ ತೊರೆಯುವ ವಿಚಾರದಲ್ಲಿ ದುಡುಕಿನ ನಿರ್ಧಾರ ತೆಗೆದುಕೊಂಡರಾ ಎಂಬ ಪ್ರಶ್ನೆ ಸದ್ಯಕ್ಕೆ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ತಾವು ಆಡಳಿತದಲ್ಲಿದ್ದಾಗಲೂ ವಿಪಕ್ಷಗಳನ್ನು ಕುಂದಿಸುವ ಸಾಮರ್ಥ್ಯ ಹೊಂದಿದ್ದ ಅವರಿಗೆ ಈ ಬಾರಿ‌ ಬಿಜೆಪಿ ಪಕ್ಷದಲ್ಲಿ ವಿಪಕ್ಷ ನಾಯಕನ ಪಟ್ಟ ದೊರೆಯುವುದು ಪಕ್ಕಾ ಆಗಿತ್ತು.

Leave a Reply

Your email address will not be published. Required fields are marked *