Officer suspend: ಡೀಮ್ಡ್ ಅರಣ್ಯದಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಿದ ಡಿಸಿಎಫ್​ ಕೆ. ಹರೀಶ್​ ಅಮಾನತು

Officer suspend: ಡೀಮ್ಡ್ ಅರಣ್ಯದಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಿದ ಡಿಸಿಎಫ್​ ಕೆ. ಹರೀಶ್​ ಅಮಾನತು

ಡೀಮ್ಡ್ ಅರಣ್ಯ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಅನುಮತಿ ನೀಡಿದ್ದಕ್ಕಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ ಹರೀಶ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಬೆಂಗಳೂರು: ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಬಳಿಯ ಡೀಮ್ಡ್ ಅರಣ್ಯ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಅನುಮತಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿರುವ ಕೆ ಹರೀಶ್ ಅವರನ್ನು ಸೇವೆಯಿಂದ ಅಮಾನತು ಮಾಡಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.

ಐತಿಹಾಸಿಕ ಪ್ರಸಿದ್ಧ ಶ್ರವಣಬೆಳಗೊಳ ಸಮೀಪದ ದಡಿಘಟ್ಟ ಗ್ರಾಮದ ಸರ್ವೆ ನಂಬರ್ 24 ರಲ್ಲಿನ ಅರಣ್ಯ ಪ್ರದೇಶದ ಒಟ್ಟು 21 ಎಕರೆ ಜಾಗದಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಉಪ ಸಂರಕ್ಷಣಾಧಿಕಾರಿ ಹರೀಶ್ ಅವರು ನಿರಾಕ್ಷೇಪಣಾ ಪತ್ರ ನೀಡಿದ್ದರು. ಇದು ಅರಣ್ಯ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸಿದಂತಾಗಿದೆ ಎಂದು ಅಭಿಪ್ರಾಯಪಟ್ಟಿರುವ ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾಧಿಕಾರಿಯವರನ್ನು ಅವರನ್ನು ಸೇವೆಯಿಂದ ಅಮಾನತು ಮಾಡಿದೆ.

ಈ ಪ್ರಕರಣದ ಬಗ್ಗೆ ಅರಣ್ಯ ಮತ್ತು ಜೀವ ಪರಿಸರ ಇಲಾಖೆಯ ಸಚಿವ ಈಶ್ವರ್ ಖಂಡ್ರೆ ಅವರು ಹಿರಿಯ ಅಧಿಕಾರಿಗಳಿಂದ ವರದಿ ಪಡೆದು ಹಾಸನದ ಉಪ ಸಂರಕ್ಷಣಾಧಿಕಾರಿ ಹರೀಶ್ ಅವರನ್ನು ಸೇವೆಯಿಂದ ಸಸ್ಪೆಂಡ್ ಮಾಡಲು ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದರು. ಸಚಿವರ ನಿರ್ದೇಶನದಂತೆ ಅರಣ್ಯ ಪಡೆಯ ಮುಖ್ಯಸ್ಥ ರಾಜೀವ್ ರಂಜನ್ ಅವರು ಮೇ ತಿಂಗಳ ಅಂತ್ಯದಲ್ಲಿ ಅರಣ್ಯಾಧಿಕಾರಿ ಹರೀಶ್ ಅವರ ಪಾತ್ರ ಕುರಿತು ವರದಿ ಸಲ್ಲಿಸಿದ್ದರು.

ಈ ಬಗ್ಗೆ ಸಚಿವರು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಜಾವೇದ್ ಅಖ್ತರ್ ಅವರಿಂದ ಮಾಹಿತಿ ತರಿಸಿಕೊಂಡಿದ್ದಾರೆ. ಅರಣ್ಯ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಅವಕಾಶ ನೀಡಿರುವ ಪ್ರಕರಣದಲ್ಲಿ ಅರಣ್ಯಾಧಿಕಾರಿ ಹರೀಶ್ ಅವರ ಪಾತ್ರವಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಅಭಿಪ್ರಾಯಿಸಿ ಅಧಿಕಾರಿಯ ಅಮಾನತಿಗೆ ಸೂಚಿಸಿದ್ದರು.

ಶ್ರವಣಬೆಳಗೊಳ ಹೋಬಳಿಯ ದಡಿಘಟ್ಟದ ಗ್ರಾಮದಲ್ಲಿ 50 ಎಕರೆ 30 ಗುಂಟೆ ಜಮೀನನ್ನು ಅರಣ್ಯ ಪ್ರದೇಶ ಎಂದು 2014 ರಲ್ಲಿ ಘೋಷಣೆ ಮಾಡಲಾಗಿತ್ತು. ಈ ಪ್ರದೇಶದ 21 ಎಕರೆ ಜಮೀನಿನಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಹಾಸನ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಹರೀಶ್​ ಅವರು ಎನ್​ಒಸಿ ನೀಡಿದ್ದರು.

ಇದು ವಿವಾದಕ್ಕೆ ಕಾರಣವಾಗಿ ಅರಣ್ಯ ಇಲಾಖೆಯು ಈ ಬಗ್ಗೆ ತನಿಖೆ ನಡೆಸಿ ಅಧಿಕಾರಿ ವಿರುದ್ಧ ಶಿಸ್ತು ಕ್ರಮವನ್ನು ಜರುಗಿಸಿ ಸೇವೆಯಿಂದ ಸಸ್ಪೆಂಡ್ ಮಾಡುವ ನಿರ್ಧಾರ ತಗೆದುಕೊಂಡಿದೆ. ಅಮಾನತಿನ ಶಿಕ್ಷೆಗೆ ಒಳಗಾದ ಅಧಿಕಾರಿಯು ಕರ್ತವ್ಯ ಲೋಪವೇಸಗಿಸಿದ್ದಾರೆ. ಅರಣ್ಯ ಸಂರಕ್ಷಣಾ ಕಾಯ್ದೆ 1980 ಹಾಗೂ ಸುಪ್ರೀಂಕೋರ್ಟ್ ಆದೇಶಗಳನ್ನು ಉಲ್ಲಂಘಿಸಿ ಅರಣ್ಯ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಿರುವುದು ಕಂಡುಬಂದಿದೆ ಎಂದು ಅಮಾನತು ಪಡಿಸಿದ ಆದೇಶದಲ್ಲಿ ಅರಣ್ಯ ಇಲಾಖೆ ತಿಳಿಸಿದೆ.

Leave a Reply

Your email address will not be published. Required fields are marked *