ಮತಾಂತರ ನಿಷೇಧ ಕಾಯ್ದೆಗೆ ತಿದ್ದುಪಡಿ ಹಾಗೂ ಪಠ್ಯ ಪರಿಷ್ಕರಣೆ ಸೇರಿದಂತೆ ಬಿಜೆಪಿ ಅವಧಿಯ ಮಹತ್ವದ ಕಾಯ್ದೆಗಳಿಗೆ ಕೊಕ್‌ ನೀಡಲು ಸಿದ್ದರಾಮಯ್ಯ ಸಂಪುಟ ತೀರ್ಮಾನಿಸಿದೆ. ಹಾಗಾದರೆ ಸಂಪುಟ ಸಭೆಯಲ್ಲಾದ ತೀರ್ಮಾನಗಳೇನು ಎನ್ನುವ ವಿವರ ಇಲ್ಲಿದೆ ನೋಡಿ.

Cabinet Meeting: ಮತಾಂತರ ನಿಷೇಧ ಕಾಯ್ದೆ ತಿದ್ದುಪಡಿಗೆ ತೀರ್ಮಾನ, ಪಠ್ಯ ಪರಿಷ್ಕರಣೆಗೆ ಅಸ್ತು ಎಂದ ಸಿದ್ದರಾಮಯ್ಯ ಸಂಪುಟ!

ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಇಂದು(ಜೂನ್ 15) ನಡೆದ ಸಚಿವ ಸಂಪುಟದಲ್ಲಿ ಕೆಲ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಮತಾಂತರ ನಿಷೇಧ ಕಾಯ್ದೆಗೆ (amend anti-conversion law) ತಿದ್ದುಪಡಿ ತರಲು ಮತ್ತು ಪಠ್ಯ ಪುಸ್ತಕ ಪರಿಷ್ಕರಣೆಗೆ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಬಿಜೆಪಿ ಸರ್ಕಾರ ಮತಾಂತರ ನಿಷೇಧ ಕಾಯ್ದೆಯಲ್ಲಿ ಸೇರಿಸಿದ್ದ ಅಂಶಗಳನ್ನು ಕೈಬಿಟ್ಟು ತಿದ್ದುಪಡಿ ಮಾಡಲು ನಿರ್ಧಾರ ಮಾಡಲಾಗಿದೆ. ಜುಲೈ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆ ಮಂಡನೆ ಆಗಲಿದೆ. ಸಚಿವ ಸಂಪುಟ ಮುಗಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಎಚ್​ಕೆ ಪಾಟೀಲ್​, ಸಭೆಯಲ್ಲಿ ಕೈಗೊಳ್ಳಲಾದ ಪ್ರಮುಖ ತೀರ್ಮಾನಗಳ ಬಗ್ಗೆ ಮಾಹಿತಿ ನೀಡಿದರು.

ರಾಷ್ಟ್ರಗೀತೆ ಹಾಡುವ ಸ್ಥಳಗಳಲ್ಲಿ ಸಂವಿಧಾನದ ಪೀಠಿಕೆ ಓದುವುದುನ್ನು ಕಡ್ಡಾಯಗೊಳಿಸಲಾಗುವುದು. ಪಠ್ಯ ಪುಸ್ತಕ ಪರಿಷ್ಕರಣೆಗೆ ಸಚಿವ ಸಂಪುಟ ಸಭೆ ಅನುಮೋದಿಸಿದೆ. ಎಪಿಎಂಸಿ ಕಾನೂನು ಹಿಂಪಡೆಯಲು ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ. ಸಣ್ಣ ನೀರಾವರಿ ಇಲಾಖೆ ಪ್ರಸ್ತಾವನೆಗೆ ಸಂಪುಟ ಅನುಮೋದಿಸಿದೆ. ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಯ 83 ಕೆರೆಗಳ ಭರ್ತಿ ಮಾಡುವುದು. 1081 ಕೋಟಿ ವೆಚ್ಚದಲ್ಲಿ ವೃಷಭಾವತಿ ನಾಲೆ ನೀರು ಶುದ್ಧೀಕರಿಸಿದ ನೀರನ್ನು ಕೆರೆಗಳಿಗೆ ಹರಿಸಲು ಸಂಪುಟ ಸಮ್ಮತಿಸಿದೆ.

ವಿಪತ್ತು ನಿರ್ವಹಣೆ ಪರಿಶೀಲನೆಗೆ ಸಂಪುಟ ಉಪ ಸಮಿತಿ ರಚನೆ ಮಾಡಿದ್ದು, ಸಾರಿಗೆ ನಿಗಮಗಳ 79 ಕೋಟಿ ರೂ. ಮೋಟಾರ್​ ವೆಹಿಕಲ್ ಟ್ಯಾಕ್ಸ್​ ವಿನಾಯಿತಿಗೆ ತಿರ್ಮಾನಿಸಲಾಗಿದೆ.

ಪಠ್ಯ ಪುಸ್ತಕ ಪರಿಷ್ಕರಣೆ: ಹೆಡ್ಗೇವಾರ್, ಸೂಲಿಬೆಲೆ ಬರೆದ ಅಂಶ ಕೈಬಿಟ್ಟ ಸರ್ಕಾರ

ವಿಧಾನಸೌಧದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಠ್ಯ ಪುಸ್ತಕ ಪರಿಷ್ಕರಣೆಗೆ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಆರ್​ಎಸ್​ಎಸ್ ಸಂಸ್ಥಾಪಕ ಕೇಶವ ಹೆಡ್ಗೇವಾರ್​ ಭಾಷಣ ತೆಗೆದಿದ್ದೇವೆ. ಸಾವರ್ಕರ್, ಚಕ್ರವರ್ತಿ ಸೂಲಿಬೆಲೆ ಬರೆದ ಅಂಶಗಳನ್ನು ಸಹ ತೆಗೆದಿದ್ದೇವೆ. ಮಕ್ಕಳು ಸರಿಯಾದ ವಿಚಾರ ಕಲಿಯಬೇಕೆಂದು ಕೆಲ ಬದಲಾವಣೆ ಮಾಡಿದ್ದೇವೆ. ನಾವು ತುಂಬಾ ಆಳವಾಗಿ ಹೋಗಬೇಕಾಗಿತ್ತು, ಹಾಗೆ ಮಾಡಿಲ್ಲ. ಸರ್ಕಾರಕ್ಕೆ ಹೊರೆಯಾಗದಂತೆ ಸರಳವಾಗಿ ಪಠ್ಯ ಪರಿಷ್ಕರಿಸಿದ್ದೇವೆ ಎಂದರು.

ನೀ ಬರೆದ ಪತ್ರ ಮರುಸೇರ್ಪಡೆ

ಪಠ್ಯ ಪುಸ್ತಕ ಪರಿಷ್ಕರಣೆಗೆ ರಾಜಪ್ಪ ದಳವಾಯಿ ನೇತೃತ್ವದಲ್ಲಿ ಐವರ ಸಮಿತಿ ರಚಿಸಲಾಗಿದೆ. ಕನ್ನಡದಲ್ಲಿ ಸಮಾಜ ವಿಜ್ಞಾನದಲ್ಲಿ 6ರಿಂದ 10ನೇ ತರಗತಿಯವರೆಗೆ ಕೆಲವು ಬದಲಾವಣೆ ಮಾಡಲಾಗಿದೆ. ಸಪ್ಲಿಮೆಂಟರಿ ವಿಚಾರ ನೀಡಿ ಮಕ್ಕಳಿಗೆ ಹೊರೆಯಾಗದಂತೆ ಬದಲಾವಣೆ ಮಾಡಿದ್ದು, ಸಾವಿತ್ರಿ ಫುಲೆ ಅವರ ನೀ ಹೋದ ಮರು ದಿನ ವಿಚಾರ ಮತ್ತು ಇಂದಿರಾ ಗಾಂಧಿಗೆ ನೆಹರು ಬರೆದಿದ್ದ ‘ನೀ ಬರೆದ ಪತ್ರ’ ಮರುಸೇರ್ಪಡೆ ಮಾಡಲಾಗಿದೆ ಎಂದು ತಿಳಿಸಿದರು.

ಹಗರಣಗಳ ತನಿಖೆಗೆ ಎಸ್​​ಐಟಿ ರಚಿಸುವ ಬಗ್ಗೆ ಸಂಪುಟದಲ್ಲಿ ಚರ್ಚೆ

ಬಿಜೆಪಿ ಸರ್ಕಾರದ ಅವಧಿಯ ಹಗರಣಗಳ ತನಿಖೆ ವಿಚಾರ ಪ್ರಸ್ತಾಪವಾಗಿದ್ದು, ಹಗರಣಗಳ ತನಿಖೆಗೆ ಎಸ್​​ಐಟಿ ರಚಿಸುವ ಬಗ್ಗೆ ಸಂಪುಟದಲ್ಲಿ ಚರ್ಚೆ ಮಾಡಲಾಗಿದೆ. ಈ ಹಿಂದೆ ಬಿಜೆಪಿ ಅವಧಿಯಲ್ಲಿನ ಹಗರಣಗಳ ಬಗ್ಗೆ ಧ್ವನಿ ಎತ್ತಿದ್ದೇವೆ. ಈಗ ತನಿಖೆ ಮಾಡದಿದ್ದರೆ ಹೊಂದಾಣಿಕೆ ರಾಜಕಾರಣ ಎನ್ನುತ್ತಾರೆ. ಹೀಗಾಗಿ ಕೂಡಲೇ ವಿಶೇಷ ತನಿಖಾ ತಂಡ ರಚಿಸಿ ತನಿಖೆಗೆ ಸೂಚಿಸಿ ಎಂದು ಸಂಪುಟ ಸಭೆಯಲ್ಲಿ ಸಚಿವರಾದ ಪ್ರಿಯಾಂಕ್, ಕೃಷ್ಣ ಭೈರೇಗೌಡ ಮನವಿ ಮಾಡಿದ್ದಾರೆ. ಸಚಿವರಿಬ್ಬರ ಮಾತಿಗೆ ಧ್ವನಿಗೂಡಿಸಿದ ಸಚಿವ ದಿನೇಶ್ ಗುಂಡೂರಾವ್, ಮುಂದಿನ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸೋಣ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದರು.

Leave a Reply

Your email address will not be published. Required fields are marked *