ಆಕ್ಸಿಜನ್ ಸಿಲಿಂಡರ್ ಸ್ಫೋಟವಾಗಿ ಓರ್ವ ಸಾವನ್ನಪ್ಪಿರುವಂತಹ ಘಟನೆ ನಗರದ ನಗರ್ತರಪೇಟೆಯಲ್ಲಿ ನಡೆದಿದೆ. ಜ್ಯುವೆಲ್ಲರಿ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದ ವಿಷ್ಣು ಮೃತ ವ್ಯಕ್ತಿ.
ಬೆಂಗಳೂರು: ಆಕ್ಸಿಜನ್ ಸಿಲಿಂಡರ್ ಸ್ಫೋಟವಾಗಿ ಓರ್ವ ಸಾವನ್ನಪ್ಪಿರುವಂತಹ ಘಟನೆ ನಗರದ ನಗರ್ತರಪೇಟೆಯಲ್ಲಿ ನಡೆದಿದೆ. ಜ್ಯುವೆಲ್ಲರಿ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದ ವಿಷ್ಣು ಮೃತ ವ್ಯಕ್ತಿ. ಚಿನ್ನ ಮೆಲ್ಟ್ ಮಾಡಲು ಆಕ್ಸಿಜನ್, ಎಲ್ಪಿಜಿ ಬಳಕೆ ವೇಳೆ ಸ್ಫೋಟಗೊಂಡಿದೆ. ಮಾಲೀಕರು ಹೊರಗಿದ್ದು ಕೆಲಸದವರು ಮಾತ್ರ ಅಂಗಡಿಯಲ್ಲಿದ್ದರು. ಆಕ್ಸಿಜನ್ ಸಿಲಿಂಡರ್ ಆಫ್ ಮಾಡದೆ ವಿಷ್ಣು ಊಟಕ್ಕೆ ತೆರಳಿದ್ದ. ಪ್ರೆಸರ್ ಹೆಚ್ಚಾದ ಹಿನ್ನೆಲೆ ಏಕಾಏಕಿ ಸ್ಫೋಟವಾಗಿದೆ.
ತಲೆಗೆ ಬಲವಾದ ಪೆಟ್ಟು ಬಿದ್ದು ರಕ್ತಸ್ರಾವವಾಗಿ ವಿಷ್ಣು ಮೃತಪಟ್ಟಿದ್ದಾನೆ. ಘಟನೆ ಬಳಿಕ ಜ್ಯುವೆಲ್ಲರಿ ಶಾಪ್ ಮಾಲೀಕನಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಭೀಮಾ ನದಿಯಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾವು
ವಿಜಯಪುರ: ಭೀಮಾ ನದಿಯಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಖೇಡಗಿ ಗ್ರಾಮದ ಬಳಿ ಭೀಮಾ ನದಿಯಲ್ಲಿ ನಡೆದಿದೆ. ಗೀತಾ ಹೊನ್ನೂರ(38), ಶೋಭಿತಾ(12), ವಾಸುದೇವ(10) ಮೃತರು. ನಿನ್ನೆ ಸಂಜೆ ಬಟ್ಟೆ ತೊಳೆಯಲು ಹೋಗಿದ್ದ ವೇಳೆ ನಡೆದ ದುರಂತ ಸಂಭವಿಸಿದೆ.
ಭೀಮಾ ನದಿಯ ಗುಂಡಿಯಲ್ಲಿ ಬಟ್ಟೆ ತೊಳೆಯುತ್ತಿದ್ದ ತಾಯಿ ಗೀತಾ, ಈ ವೇಳೆ ನೀರಿನ ಗುಂಡಿಗೆ ವಾಸುದೇವ, ಶೋಭಿತಾ ಬಿದಿದ್ದಾರೆ. ಇಬ್ಬರು ಮಕ್ಕಳನ್ನು ರಕ್ಷಿಸಲು ಹೋಗಿ ತಾಯಿ ಕೂಡ ಮೃತಪಟ್ಟಿದ್ದಾರೆ. ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ನೆಲಮಂಗಲದಲ್ಲಿ ಎರಡು ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಸಾವು
ಬೆಂಗಳೂರು: ನೆಲಮಂಗಲದಲ್ಲಿ ಎರಡು ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಮೃತಪಟ್ಟಿರುವಂತಹ ಘಟನೆ ನಡೆದಿದೆ. ಆಟೋ, ಬೈಕ್ ನಡುವೆ ಡಿಕ್ಕಿ ಹೊಡೆದ ಪರಿಣಾಮ ಬಿಹಾರ ಮೂಲದ ರಣಧೀರ್ ಕುಮಾರ್(27) ದುರ್ಮರಣ ಹೊಂದಿದ್ದಾರೆ.
ಮಾದಾವರ ಬಳಿ ಹೆದ್ದಾರಿ 48ರಲ್ಲಿ ಕ್ಯಾಂಟರ್, ಬೈಕ್ ನಡುವೆ ಡಿಕ್ಕಿಯಾಗಿದ್ದು, ಕೇರಳ ಮೂಲದ ವಿದ್ಯಾರ್ಥಿ ಶಾಂತಲು(23) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆಚಾರ್ಯ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ. ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.