Bagalkot accident: ಬೈಕ್​​ಗೆ ಲಾರಿ ಡಿಕ್ಕಿ..ಮೂವರ ಸಾವು

Bagalkot accident: ಬೈಕ್​​ಗೆ ಲಾರಿ ಡಿಕ್ಕಿ..ಮೂವರ ಸಾವು

ಬೈಕ್​​ಗೆ ಲಾರಿ ಡಿಕ್ಕಿ – ಮೂವರು ಸಾವು – ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ರಕ್ಕಸಗಿ ಗ್ರಾಮದಲ್ಲಿ ಘಟನೆ.

ಬಾಗಲಕೋಟೆ: ಬೈಕ್​​ಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟಿದ್ದಾರೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ರಕ್ಕಸಗಿ ಗ್ರಾಮದಲ್ಲಿ ಇಂದು ಈ ಘಟನೆ ನಡೆದಿದೆ.

ಮೃತರನ್ನು ರಕ್ಕಸಗಿ ಗ್ರಾಮದ ಬೈಕ್​ ಸವಾರ ಶ್ರೀಕಾಂತ ಮಾದರ (39), ಶಾಂತವ್ವ ಕಟ್ಟಿಮನಿ (43) ಹಾಗೂ ಮಾಂತವ್ವ ಮುರಡಿ (75) ಎಂದು ಗುರುತಿಸಲಾಗಿದೆ.

ಶ್ರೀಕಾಂತ ಅವರು ಇಬ್ಬರು ಮಹಿಳೆಯರನ್ನು ಬೈಕ್​ನಲ್ಲಿ ಕರೆದುಕೊಂಡು ಹೋಗುವಾಗ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಬಳಿಕ ಲಾರಿ ಪಲ್ಟಿಯಾಗಿದೆ. ಬೈಕ್ ಸವಾರ ಶ್ರೀಕಾಂತ ಸ್ಥಳದಲ್ಲಿಯೇ ಮೃತ ಪಟ್ಟಿದ್ದರೆ, ಇಬ್ಬರು ಮಹಿಳೆಯರು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಅಮೀನಗಡ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೈಕ್ ಸವಾರಿಬ್ಬರು ಸ್ಥಳದಲ್ಲಿಯೇ ಸಾವು: ಬೈಕ್​​ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ರಾಯಚೂರು – ಲಿಂಗಸೂಗೂರು ರಾಜ್ಯ ಹೆದ್ದಾರಿಯಲ್ಲಿ ಬರುವ ಸಾಥ್ ಮೈಲ್ ಬಳಿ ಇತ್ತೀಚೆಗೆ ನಡೆದಿತ್ತು. ಮೃತರನ್ನು ಹುಣಶ್ಯಾಳ ಹುಡಾ ಗ್ರಾಮದ ನಿವಾಸಿಗಳಾದ ಹನುಮೇಶ್ (30) ಹಾಗೂ ಆಂಜನೇಯ (35) ಎಂದು ಗುರುತಿಸಲಾಗಿತ್ತು. ಇವರು ರಾಯಚೂರು ಕಡೆಯಿಂದ ಹುಣಿಶ್ಯಾಳ ಹುಡಾಕ್ಕೆ ಹೊರಟಿದ್ದರು. ಆದರೆ, ಮಾರ್ಗ ಮಧ್ಯೆ ಲಾರಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಲಾರಿ ಚಕ್ರಕ್ಕೆ ಸಿಲುಕಿ ಇಬ್ಬರು ಸವಾರರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ರಾಯಚೂರು ಗ್ರಾಮೀಣ ಪೊಲೀಸರು, ಲಾರಿ ಚಾಲಕನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದರು. ಮೃತದೇಹಗಳನ್ನು ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ರಾಯಚೂರು ಗ್ರಾಮೀಣ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು.

ನಿಂತಿದ್ದ ಲಾರಿಗೆ ಕ್ರೂಸರ್​ ಡಿಕ್ಕಿ: ನಿಂತಿದ್ದ ವಾಹನಕ್ಕೆ ಕ್ರೂಸರ್​ ವಾಹನ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, 13 ಜನ ಗಾಯಗೊಂಡಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ಜೂ. 6ತಂದು ಸಂಭವಿಸಿತ್ತು. ಮುನೀರ್​ (40), ನಯಮ್ತ್ ಉಲ್ಲಾ​ (40), ಮೀಜಾ (50), ಮುದ್ದಸಿರ್ (12) ಮತ್ತು ಸುಮ್ಮಿ (13) ಸೇರಿದಂತೆ ಐವರು ಸಾವನ್ನಪ್ಪಿದ್ದರು. ಇವರು ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯ ವೇಲಗೋಡು ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದ್ದು, ಕಲಬುರುಗಿಯಲ್ಲಿ ನಡೆಯುತ್ತಿರುವ ದರ್ಗಾ ಉರುಸ್​ ಜಾತ್ರೆಗೆ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಈ ವೇಳೆ, ನಿಂತಿದ್ದ ಲಾರಿಗೆ ಇವರು ಪ್ರಯಾಣಿಸುತ್ತಿದ್ದ ಕ್ರೂಸರ್​ ವಾಹನ ಡಿಕ್ಕಿ ಹೊಡೆದಿದೆ. ವಾಹನದಲ್ಲಿ ಸುಮಾರು 18 ಜನರು ಪ್ರಯಾಣಿಸುತ್ತಿದ್ದು, ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದರು.

Leave a Reply

Your email address will not be published. Required fields are marked *