1ರಿಂದ 5ನೇ ತರಗತಿ ವರೆಗೆ ಒಬ್ಬರೇ  ಶಿಕ್ಷಕ: ಶಾಲೆಗೆ ಬರಲು ವಿದ್ಯಾರ್ಥಿಗಳ ಹಿಂದೇಟು

1ರಿಂದ 5ನೇ ತರಗತಿ ವರೆಗೆ ಒಬ್ಬರೇ ಶಿಕ್ಷಕ: ಶಾಲೆಗೆ ಬರಲು ವಿದ್ಯಾರ್ಥಿಗಳ ಹಿಂದೇಟು

ಚಿಕ್ಕಮಗಳೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬೋಧಕ ಸಿಬ್ಬಂದಿ ಕೊರತೆಯಿಂದಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ.

ಚಿಕ್ಕಮಗಳೂರು: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಯೊಂದರಲ್ಲಿ ಶಿಕ್ಷರ ಕೊರತೆ ಇದ್ದು, 1 ರಿಂದ 5ನೇ ತರಗತಿ ವರೆಗೆ ಕೇವಲ ಒಬ್ಬ ಮಾತ್ರ ಶಿಕ್ಷಕ ಇರುವುದರಿಂದ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.

ಹೌದು. ಚಿಕ್ಕಮಗಳೂರು ತಾಲೂಕಿನ ಬಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಡಿ ಹೊಂಬಳದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೇವಲ ಒಬ್ಬ ಮೇಷ್ಟ್ರು ಇದ್ದು, ಎಲ್ಲಾ ವಿಷಯಗಳಿಗೂ ಅವರೆ ಪಾಠ ಮಾಡಬೇಕಾಗಿದೆ. ಅಲ್ಲದೇ ಇರುವ ಒಬ್ಬ ಮೇಷ್ಟ್ರು ಸರಿಯಾದ ಸಮಯಕ್ಕೆ ಶಾಲೆಗೆ ಬರದಿರುವುದಿರಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ ಎಂದು ಫೊಷಕರು ಆರೋಪಿಸಿದ್ದಾರೆ. ಅದಕ್ಕಾಗಿ ತಮ್ಮ ಮಕ್ಕಳಿಗೆ ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.

ಶಾಲೆಯಲ್ಲಿ 1 ರಿಂದ 5 ನೇ ತರಗತಿ ವರೆಗೆ ಕೇವಲ 9 ಮಕ್ಕಳು ಮಾತ್ರ ಇದ್ದಾರೆ. ಹಾಗಾಗಿ ಶಾಲಾ ಮೇಷ್ಟ್ರು ಒಂದೇ ಕೊಠಡಿಯಲ್ಲಿ ಐದೂ ತರಗತಿಗಳ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾರೆ. ಕನ್ನಡ, ಹಿಂದಿ, ಇಂಗ್ಲಿಷ್​, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಎಲ್ಲದಕ್ಕೂ ಒಬ್ಬರು ಮಾತ್ರ ಮೇಷ್ಟ್ರು ಇದ್ದಾರೆ. ಶಾಲೆ ಆರಂಭವಾಗಿ 15 ದಿನಗಳು ಕಳೆದರೂ ಯಾವೊಬ್ಬ ವಿದ್ಯಾರ್ಥಿ ಶಾಲೆಗೆ ಬಂದಿಲ್ಲ. ಕಾರಣ ಆ ಮೇಷ್ಟ್ರು ಇರೋವರೆಗೂ ಮಕ್ಕಳನ್ನ ಶಾಲೆಗೆ ಕಳಿಸಲ್ಲ ಎಂದು ಪೋಷಕರು ಹೇಳುತ್ತಿದ್ದಾರೆ.

ಈ ಬಗ್ಗೆ ಸುರೇಶ್ ಎಂಬುವವರು ಮಾತನಾಡಿ, ”ಈ ಶಾಲೆಯಲ್ಲಿ ಸಮಸ್ಯೆ ಇಲ್ಲ. ಶಾಲೆಯೇ ಸಮಸ್ಯೆಯಲ್ಲಿ ಇದೆ. ಈ ಶಾಲೆಯ ಪರಿಸ್ಥಿತಿ ಹೀಗಿರುವಾಗ ಇಲ್ಲಿನ ಶಿಕ್ಷಕರದ್ದು ಮತ್ತೊಂದು ಸಮಸ್ಯೆ. ಶಾಲೆ ಆರಂಭವಾಗಿ ವಾರವಾದರೂ ಮಕ್ಕಳು ಮನೆಯಲ್ಲಿ ಆಟವಾಡುತ್ತಿದ್ದಾರೆ ವಿನಃ ಶಾಲೆಗೆ ಬರುತ್ತಿಲ್ಲ. ಕಾರಣ ಇಲ್ಲಿನ ಮೇಷ್ಟ್ರು. ಇಡೀ ಶಾಲೆಗೆ ಇರುವುದು ಒಬ್ಬರೇ ಶಿಕ್ಷಕರು. ಅವರು ಬೆಳಗ್ಗೆ 11.30ಕ್ಕೆ ಬಂದರೆ 2.30ಕ್ಕೆ ಮನೆ ಸೇರುತ್ತಾರೆ.‌ ಸಂಜೆ ಮಕ್ಕಳೇ ಶಾಲೆಯ ಬೀಗ ಹಾಕಿಕೊಂಡು ಮನೆಗೆ ಹೋಗಬೇಕು. ಇದರಿಂದ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆಯೂ ಇಳಿಮುಖವಾಗಿ ಇಂದು ಒಂಬತ್ತಕ್ಕೆ ಬಂದು ನಿಂತಿದೆ. ಹಾಗಾಗಿ, ಹಾಗಾಗಿ ಪೋಷಕರು ಶಿಕ್ಷಕ ಇಲ್ಲಿಂದ ಬೇರೆಡೆಗೆ ಸ್ಥಳಾಂತರಗೊಂಡು ಬೇರೆ ಶಿಕ್ಷಕರು ಬರುವವರೆಗೂ ಮಕ್ಕಳನ್ನ ಶಾಲೆಗೆ ಕಳುಹಿಸುವುದಿಲ್ಲ ಎಂದು ಮಕ್ಕಳನ್ನ ಕಳುಹಿಸುತ್ತಿಲ್ಲ. ಈ ಹಿನ್ನೆಲೆ ಇಲ್ಲಿನ ಶಿಕ್ಷಕರನ್ನ ಬೇರೆ ಕಡೆ ವರ್ಗಾವಣೆ ಮಾಡಿದರೆ ಮಕ್ಕಳ ಸಂಖ್ಯೆಯು ಹೆಚ್ಚುತ್ತದೆ ಶಾಲೆಯು ಉಳಿಯುತ್ತೆ” ಅಂತಿದ್ದಾರೆ

ಶಾಲಾ ಸಮಸ್ಯೆ ಬಗ್ಗೆ ಮಾತನಾಡಿದ ರಘುಪತಿ, ”ಕೂಲಿ ಕಾರ್ಮಿಕರ ಮಕ್ಕಳೇ ಓದುವ ಕುಗ್ರಾಮದ ಸರ್ಕಾರಿ ಶಾಲೆಯೊಂದು ಮೂಲ ಸೌಲಭ್ಯಗಳಿಂದ ವಂಚಿತವಾಗಿ ಬೀಗ ಬೀಳುವ ಸ್ಥಿತಿ ತಲುಪಿದೆ. ಇದಕ್ಕೆ ಕಾರಣ ಸರ್ಕಾರ ಅಥವಾ ಶಿಕ್ಷಕನೋ ಗೊತ್ತಿಲ್ಲ. ಆದರೆ, ಬಡ ಮಕ್ಕಳು ಮಾತ್ರ ಶಿಕ್ಷಣದಿಂದ ವಂಚಿತರಾಗೋದರಲ್ಲಿ ಅನುಮಾನ ಇಲ್ಲ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *