ಮೈಸೂರು ದಸರಾಗಾಗಿ ಪ್ರತ್ಯೇಕ‌ ಪ್ರಾಧಿಕಾರ ರಚನೆ‌ ವಿಚಾರವಾಗಿ ಶೀಘ್ರದಲ್ಲೇ ಹೈಪವರ್ ಕಮಿಟಿ ಮೀಟಿಂಗ್ ಕರೆದು ತೀರ್ಮಾನ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಹೈಪವರ್ ಕಮಿಟಿ ಸಭೆಯಲ್ಲಿ ದಸರಾ ಪ್ರಾಧಿಕಾರ ನಿರ್ಮಾಣದ ಬಗ್ಗೆ ತೀರ್ಮಾನ: ಸಿದ್ದರಾಮಯ್ಯ

ಹೈಪವರ್ ಕಮಿಟಿ ಸಭೆಯಲ್ಲಿ ದಸರಾ ಪ್ರಾಧಿಕಾರ ನಿರ್ಮಾಣದ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದ ಸಿದ್ದರಾಮಯ್ಯ

ಮೈಸೂರು: ದಸರಾಗಾಗಿ ಪ್ರತ್ಯೇಕ‌ ಪ್ರಾಧಿಕಾರ ರಚನೆ‌ ವಿಚಾರವಾಗಿ ಶೀಘ್ರದಲ್ಲೇ ಹೈಪವರ್ ಕಮಿಟಿ ಮೀಟಿಂಗ್ ಕರೆದು ತೀರ್ಮಾನ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ವಿಶ್ವ ವಿಖ್ಯಾತ ದಸರಾ (Mysuru Dasara 2023) ಹಾಗೂ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಒಂದು ಪ್ರತ್ಯೇಕ ಪ್ರಧಿಕಾರ ರಚನೆ ಮಾಡುವ ಬೇಡಿಕೆ ಸರ್ಕಾರದ ಮುಂದಿದ್ದರೂ ಕ್ರಮ ಕೈಗೊಂಡಿರಲಿಲ್ಲ. ಸದ್ಯ ನೂತನ ಸರ್ಕಾರ ಈ ಬಗ್ಗೆ ಚಿಂತನೆಗೆ ಮುಂದಾಗಿದ್ದು, ಸಭೆ ಕರೆದು ತೀರ್ಮಾನ ಕೈಗೊಳ್ಳಲಿದೆ.

ತಮಿಳುನಾಡಿಗೆ ಕೆಆರ್‌ಎಸ್ ನೀರು ಬಿಡುವ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ನಮಗೆ ಕುಡಿಯುವ ನೀರು ಹಾಗೂ ಬೆಳೆಗಳಿಗೆ ನೀರಿನ ಅವಶ್ಯಕತೆ ಇದೆ. ಅವರಿಗೆ ಬಿಡಬಾರದು ಅಂತ ಏನಿಲ್ಲ. ನಮ್ಮಲ್ಲಿ ನೀರು ಇದ್ದರೆ ತಾನೆ ಅವರಿಗೆ ನೀರು ಬಿಡುವುದು. ನಮ್ಮಲ್ಲಿ ಈಗ ಬಿಡಲು ನೀರಿಲ್ಲ ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಜಿಲ್ಲಾಪಂಚಾಯತ್​ನಲ್ಲಿ ಸಿದ್ದರಾಮಯ್ಯ ಅವರು ಅಧಿಕಾರಿಗಳ ಸಭೆಯನ್ನು ನಡೆಸಿದರು. ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳ ಬಗ್ಗೆ ನಿಮಗೆ ಗೊತ್ತಿದೆಯಾ? ನಾಳೆ ಯಾವ ಗ್ಯಾರಂಟಿ ಜಾರಿಯಾಗುತ್ತಿದೆ ಹೇಳಿ ಎಂದ ಸಿದ್ದರಾಮಯ್ಯ ಕೇಳಿದರು. ಇದೇ ವೇಳೆ ಕೆಎಸ್​​ಆರ್​​ಟಿಸಿ ಡಿಸಿ ಬಂದಿದ್ದಾರಾ ಎಂದು ಸಿಎಂ ಪ್ರಶ್ನೆ ಹಿಂದೆ ಕುಳಿತಿದ್ದ ಅವರನ್ನು ಕರೆದು ಶಕ್ತಿ ಯೋಜನೆ ಜಾರಿ ಕಾರ್ಯಕ್ರಮದ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದುಕೊಂಡರು.

ಇದೇ ವೇಳೆ ಮುಡಾ ಆಯುಕ್ತರಿಗೂ ಕ್ಲಾಸ್ ತೆಗೆದುಕೊಂಡ ಸಿಎಂ ಸಿದ್ದರಾಮಯ್ಯ, ಚುನಾವಣೆಗೂ ಮುನ್ನ ಆಗಿರುವ ತೀರ್ಮಾನ ಇಂಪ್ಲಿಮೆಂಟ್ ಮಾಡಬೇಡಿ ಎಂದು ತಾಕೀತು ಮಾಡಿದರು. ಇದಕ್ಕೂ ಮುನ್ನ ಜಿಲ್ಲಾಧಿಕಾರಿಯವರು ಮಳೆ ಕೊರತೆ ಬಗ್ಗೆ ಸಿಎಂಗೆ ಮಾಹಿತಿ ನೀಡಿದರು. ಈ ವೇಳೆ, ಮಳೆ ಬಾರದಿದ್ದರೆ ಯಾವುದೇ ರೀತಿಯಲ್ಲೂ ಕುಡಿಯುವ ನೀರಿನ ಕೊರತೆ ಆಗದಂತೆ ನೋಡಿಕೊಳ್ಳಬೇಕು ಮತ್ತು ಬೆಳೆ ಒಣಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

Leave a Reply

Your email address will not be published. Required fields are marked *