ಚುನಾವಣಾ ಪೂರ್ವದಲ್ಲಿ ನುಡಿದಂತೆ ನಡೆಯದ ಕಾಂಗ್ರೆಸ್ ವಿರುದ್ಧ ಜುಲೈ 4 ರಂದು ಬಿಜೆಪಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಅಲ್ಲದೆ, ಗ್ಯಾರಂಟಿ ಯೋಜನೆಗಳಿಗೆ ಹಾಕಿದ ಷರತ್ತುಗಳನ್ನು ವಾಪಸ್ ಪಡೆಯುವಂತೆ ಪಕ್ಷದ ಶಾಸಕರು ಆಗ್ರಹಿಸಲಿದ್ದಾರೆ.

ಬೆಂಗಳೂರು: ಚುನಾವಣಾ ಪೂರ್ವದಲ್ಲಿ ನುಡಿದಂತೆ ನಡೆಯದ ಕಾಂಗ್ರೆಸ್ (Congress) ವಿರುದ್ಧ ಜುಲೈ 4 ರಂದು ಬಿಜೆಪಿ ಶಾಸಕರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಯೂ ಆಗಿರುವ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ BS Yediyurappa) ಹೇಳಿದ್ದಾರೆ. ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆ ಬಳಿಕ ಮಾತನಾಡಿದ ಅವರು, ಬಿಜೆಪಿ ಶಾಸಕರು ವಿಧಾನಸಭೆ ಒಳಗೆ ಮತ್ತು ಹೊರಗೆ ಪ್ರತಿಭಟನೆ (BJP Protest) ನಡೆಸಲಿದ್ದಾರೆ ಎಂದು ತಿಳಿಸಿದರು.

ಮನೆ ಮನೆಗೆ ಹೋಗಿ ನೀಡಿದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ ಸಹಿಯುಳ್ಳ ಗ್ಯಾರಂಟಿ ಕಾರ್ಡ್​ಗಳಲ್ಲಿ ಇರುವ ಘೋಷಣೆಗಳನ್ನು ಜಾರಿ ಮಾಡಬೇಕು ಎಂದು ಒತ್ತಾಯಿಸಿ ನಾವು ವಿಧಾನಸೌಧದ ಮುಂದೆ ಇರುವ ಗಾಂಧಿ ಪ್ರತಿಮೆ ಬಳಿ ಒಂದು ದಿನ ಧರಣಿ ಸತ್ಯಾಗ್ರಹ ಮಾಡಲು ತೀರ್ಮಾನ ಮಾಡಿದ್ದೇವೆ. ಬೆಳಗ್ಗೆಯಿಂದ ಸಂಜೆಯವರೆಗೆ ಕಾರ್ಯಕರ್ತರ ಜೊತೆ ಧರಣಿ ನಡೆಯಲಿದೆ ಎಂದರು.

ಕಾಂಗ್ರೆಸ್​ ಪಕ್ಷ ಜನರಿಗೆ ನೀಡಿದ ಗ್ಯಾರಂಟಿ​ಗಳನ್ನು ಜಾರಿಗೆ ತರಬೇಕು. ಭರವಸೆ ನೀಡಿದಂತೆ ಬಡವರಿಗೆ 10 ಕೆಜಿ ಅಕ್ಕಿಯನ್ನು ನೀಡಬೇಕು. ಎಲ್ಲ ಪದವೀಧರ ನಿರುದ್ಯೋಗಿಗಳಿಗೆ 3 ಸಾವಿರ ಭತ್ಯೆ, ಡಿಪ್ಲೊಮಾ ಮಾಡಿ ನಿರುದ್ಯೋಗಿ ಆಗಿರುವವರಿಗೆ 1500 ರೂ. ಕೊಡಬೇಕು. 200 ಯೂನಿಟ್ ಕರೆಂಟ್ ಕೊಡಲೇಬೇಕು. 80 ಯೂನಿಟ್ ಎಂಬ ಕಂಡಿಷನ್ ರದ್ದು ಮಾಡಬೇಕು. ಭರವಸೆ ನೀಡಿದಂತೆ ಎಲ್ಲ ಮಹಿಳೆಯರಿಗೆ 2 ಸಾವಿರ ರೂ. ಕೊಡಬೇಕು. ಕರೆಂಟ್ ಬಿಲ್ ತೀವ್ರವಾಗಿ ಹೆಚ್ಚಾಗಿದ್ದು, ದರ ಏರಿಕೆಯನ್ನು ವಾಪಸ್ ಪಡೆಯಬೇಕು ಎಂದು ಹೇಳಿದರು.

ಚುನಾವಣೆ ಸೋಲಿನ ಬಗ್ಗೆ ಕೆಲವು ನಾಯಕರು ಬಹಿರಂಗವಾಗಿಯೇ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧವೇ ಆಕ್ರೋಶ ಹೊರಹಾಕಲಾಗುತ್ತಿದೆ. ಇದು ಪಕ್ಷಕ್ಕೆ ಮುಜುಗರ ಉಂಟುಮಾಡುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಪಕ್ಷಕ್ಕೆ ಮುಜುಗರ ಆಗದಂತೆ ಹೇಳಿಕೆ ಕೊಟ್ಟವರನ್ನು ಕರೆದು ಮಾತಾಡಿದ್ದೇವೆ. ಇನ್ನು ಮುಂದೆ ಹೇಳಿಕೆ ನೀಡದಂತೆ ಸೂಚಿಸಿದ್ದೇವೆ. ಎಚ್ಚರಿಕೆ ವಹಿಸದಿದ್ದರೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾಗಿ ಹೇಳಿದ್ದಾರೆ.

ರೇಣುಕಾಚಾರ್ಯ ಜೊತೆ ಯಡಿಯೂರಪ್ಪ ಮಾತುಕತೆ

ಬಿಜೆಪಿ ನಾಯಕರ ವಿರುದ್ಧವೇ ಮುನಿಸಿಕೊಂಡಿರುವ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಅವರು ಇಂದು ನಡೆದ ಪಕ್ಷದ ಸಭೆಗೆ ಗೈರಾಗಿದ್ದಾರೆ. ಹೀಗಾಗಿ ತನ್ನ ಆಪ್ತನ ಮುನಿಸನ್ನು ಶಮನಗೊಳಿಸಲು ಯಡಿಯೂರಪ್ಪ ಅವರು ರೇಣುಕಾಚಾರ್ಯ ಅವರನ್ನು ಭೇಟಿಯಾಗಿ ಮಾತನಾಡಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ರೇಣುಕಾಚಾರ್ಯ, ಕಟೀಲ್ ನಾಯಕತ್ವದಲ್ಲೇ ಬಿಜೆಪಿಗೆ ರಾಜ್ಯದಲ್ಲಿ ಹೀನಾಯ ಸೋಲಾಗಿದ್ದರಿಂದ ಅಧ್ಯಕ್ಷ ಸ್ಥಾನ ಮುಂದುವರಿಯಲು ಅವರಿಗೆ ನೈತಿಕ ಹಕ್ಕಿಲ್ಲ, ಕೂಡಲೇ ರಾಜಿನಾಮೆ ಸಲ್ಲಿಸಬೇಕು ಎಂದು ಬಹಿರಂಗವಾಗಿಯೇ ಹೇಳಿದ್ದರು. ಅಲ್ಲದೆ, ಯಡಿಯೂರಪ್ಪ ವಿರುದ್ಧ ಇಲ್ಲಸಲ್ಲದ ಆಪಾದನೆ ಮಾಡಿದ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಶಿಸ್ತಿನ ಕ್ರಮ ಜರುಗಿಸಲು ಅವರಿಂದ ಆಗಲಿಲ್ಲ. ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವುದು ಬೇಡವೆಂದರೂ ಕಟೀಲ್ ಮತ್ತು ಇತರ ನಾಯಕರು ಕಿವಿಗೆ ಹಾಕಿಕೊಳ್ಳಲಿಲ್ಲ ಎಂದರು. ಪಕ್ಷ ಕಟ್ಟಿ ಬೆಳೆಸಿದ ಯಡಿಯೂರಪ್ಪ, ಕೆಎಸ್ ಈಶ್ವರಪ್ಪ, ದಿವಂಗತ ಅನಂತ ಕುಮಾರ್ ಮತ್ತು ಜಗದೀಶ್ ಶೆಟ್ಟರ್ ಅವರನ್ನು ಕಡೆಗಣಿಸಲಾಯಿತು ಹೇಳಿದ್ದರು.

Leave a Reply

Your email address will not be published. Required fields are marked *