ಹುಬ್ಬಳ್ಳಿ- ಧಾ‌ರವಾಡ ಪಾಲಿಕೆ ಮೇಯರ್ ಚುನಾವಣೆ: ಪ್ರಹ್ಲಾದ್‌ ಜೋಶಿಯಿಂದ ಮಹತ್ವದ ಸಭೆ- ರೆಸಾರ್ಟ್‌ನಲ್ಲಿ ಕಮಲ ಪಡೆ

ಹುಬ್ಬಳ್ಳಿ- ಧಾ‌ರವಾಡ ಪಾಲಿಕೆ ಮೇಯರ್ ಚುನಾವಣೆ: ಪ್ರಹ್ಲಾದ್‌ ಜೋಶಿಯಿಂದ ಮಹತ್ವದ ಸಭೆ- ರೆಸಾರ್ಟ್‌ನಲ್ಲಿ ಕಮಲ ಪಡೆ

ಕೇಂದ್ರ ಸಚಿವ, ಬಿಜೆಪಿಯ ಹಿರಿಯ ಮುಖಂಡ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಹುಬ್ಬಳ್ಳಿ- ಧಾರವಾಡ ಪಾಲಿಕೆ ಮೇಯರ್​ ಚುನಾವಣೆ ಕುರಿತು ಸಭೆ ನಡೆಯಲಿದೆ.

ಹುಬ್ಬಳ್ಳಿ : ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆ ಕೈ- ಕಮಲ ಪಾಳೆಯದ ನಾಯಕರ ನಿದ್ದೆಗೆಡಿಸಿದೆ.

ದಾಂಡೇಲಿಗೆ ಹೋಗಿರುವ ಕಮಲ ಪಡೆಯ ಚುನಾಯಿತ ಪ್ರತಿನಿಧಿಗಳು ಪಾಲಿಕೆ ಅಧಿಕಾರದ ಚುಕ್ಕಾಣಿ ಹಿಡಿಯಲು ಶತಾಯಗತಾಯು ಹೋರಾಟ ನಡೆಸುತ್ತಿದ್ದಾರೆ.

ಜೂನ್ 20ರಂದು ಪಾಲಿಕೆಯ ನೂತನ ಮೇಯರ್- ಉಪ ಮೇಯರ್ ಆಯ್ಕೆ ಚುನಾವಣೆ ನಿಗದಿಯಾಗಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನೇತೃತ್ವದಲ್ಲಿ ಇಂದು (ಸೋಮವಾರ) ಸಭೆ ನಡೆಯಲಿದೆ. ಆಪರೇಷನ್ ಹಸ್ತ ಭೀತಿಯ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದುಕೊಂಡಿದೆ.

ಕಳೆದ 9 ದಿನಗಳಿಂದ ಬ್ರೆಜಿಲ್-ಉರುಗೈ ಪ್ರವಾಸದಲ್ಲಿರುವ ಜೋಶಿ ಇಂದು ಮಧ್ಯಾಹ್ನ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. ಮೊದಲಿಗೆ ಹುಬ್ಬಳ್ಳಿಯಲ್ಲಿ ಪಕ್ಷದ ಶಾಸಕರು ಹಾಗೂ ಮುಖಂಡರೊಂದಿಗೆ ಸಭೆ ನಡೆಸುವರು. ಬಳಿಕ ದಾಂಡೇಲಿಗೆ ತೆರಳುವರೋ ಅಥವಾ ದಾಂಡೇಲಿ ರೆಸಾರ್ಟ್‌ನಲ್ಲಿರುವ ಪಾಲಿಕೆಯ ಬಿಜೆಪಿ ಸದಸ್ಯರನ್ನು ಹುಬ್ಬಳ್ಳಿ ಕರೆ ತರುವರೋ ಎಂಬುದೆಲ್ಲ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಮಹಾನಗರ ಪಾಲಿಕೆಯ ಬಹುತೇಕ ಬಿಜೆಪಿ ಸದಸ್ಯರು ಕಳೆದ ಮೂರು ದಿನಗಳಿಂದ ತಂಡ ತಂಡವಾಗಿ ದಾಂಡೇಲಿ ರೆಸಾರ್ಟ್‌ಗೆ ತೆರಳಿದ್ದಾರೆ. ಆಪರೇಷನ್ ಹಸ್ತದ ಭೀತಿಯ ಕಾರಣ ಮೇಯರ್ ಮತ್ತು ಉಪ ಮೇಯರ್ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಗಳು ಯಾರು ಎಂಬುದು ಮಂಗಳವಾರ ಬೆಳಗ್ಗೆಯೇ ನಿರ್ಧಾರವಾಗಲಿದೆ ಎಂದು ತಿಳಿದು ಬಂದಿದೆ. ಅಲ್ಲಿಯವರೆಗೆ ಪಕ್ಷದ ಪಾಲಿಕೆ ಸದಸ್ಯರನ್ನು ರೆಸಾರ್ಟ್‌ ನಲ್ಲಿ ಹಿಡಿದಿಟ್ಟುಕೊಳ್ಳುವುದು ಬಿಜೆಪಿಯ ಕಾರ್ಯತಂತ್ರ.

ಸದ್ಯ ಪಾಲಿಕೆಯಲ್ಲಿ ಬಿಜೆಪಿ ಆಡಳಿತವಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಪಾಲಿಕೆಯನ್ನು ವಶಕ್ಕೆ ಪಡೆಯಲು ಪ್ರಯತ್ನ ನಡೆಸುತ್ತಿದೆ. ಹು- ಧಾ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯಿಂದ ಆಯ್ಕೆಯಾದ 39 ಸದಸ್ಯರಿದ್ದಾರೆ. ಪಕ್ಷೇತರರಾದ ಕಿಶನ್ ಬೆಳಗಾವಿ, ದುರ್ಗಮ್ಮ ಬಿಜವಾಡ, ಚಂದ್ರಿಕಾ ಮೇಸ್ತ್ರಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಜೆಡಿಎಸ್‌ನ ಲಕ್ಷ್ಮೀ ಹಿಂಡಸಗೇರಿ ಅವರ ಬೆಂಬಲ ಬಿಜೆಪಿಗಿದೆ.

ಮೇಯರ್-ಉಪ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಬೆಂಬಲಿಸಿದರೆ ಬಿಜೆಪಿ ಸದಸ್ಯರಿಗೆ 50 ರಿಂದ 75 ಲಕ್ಷ ರೂ. ಕೊಡುವುದಾಗಿ ಜತೆಗೆ ವಾರ್ಡ್‌ನಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡಿಸಿಕೊಡುವುದಾಗಿ ಕಾಂಗ್ರೆಸ್ ಮುಖಂಡರು ಕಳೆದೊಂದು ವಾರದಿಂದ ಫೋನ್ ಕರೆ ಮಾಡಿ ಆಮಿಷವೊಡ್ಡಿದ್ದಾರೆ. ಕಾಂಗ್ರೆಸ್​ ಮೇಲೆ ಈ ಸಂಬಂಧ ಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ ಕಪಟಕರ, ಮೇಯರ್‌ ಈರೇಶ ಅಂಚಟಗೇರಿ ಆರೋಪಿಸಿದ್ದರು. ಈಗ ಶಾಸಕ ಅರವಿಂದ್​ ಬೆಲ್ಲದ್​ ಹಾಗೂ ಪ್ರಹ್ಲಾದ ಜೋಶಿ ಮುತುವರ್ಜಿಯಿಂದ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ಬದಲಾವಣೆ ಕಾದುನೋಡಬೇಕು.

Leave a Reply

Your email address will not be published. Required fields are marked *