ಕರ್ನಾಟಕ ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರ ಬೆಲೆ ಏರಿಕೆ ಆರಂಭವಾಗಿದೆ. ವಿದ್ಯುತ್ ದರ ಏರಿಕೆ ನಂತರ ಇದೀಗ ಹಾಲಿನ ದರ ಏರಿಕೆಗೆ ಚಿಂತನೆ ನಡೆಸುತ್ತಿದೆ. ಇದರ ದರ ಏರಿಕೆಯಾದರೆ ಹೊಟೇಲ್ ತಿಂಡಿ ದರವೂ ಏರಿಕೆಯಾಗಲಿದೆ.

ಬೆಂಗಳೂರು: ಐದು ಗ್ಯಾರಂಟಿ ಯೋಜನೆಗಳನ್ನು (Congress Guarantees) ಅನುಷ್ಠಾನಕ್ಕೆ ತರಲು ಹಣ ಹೊಂದಿಸುವ ಕಾರ್ಯದಲ್ಲಿ ತೊಡಗಿಕೊಂಡಿರುವ ನೇತೃತ್ವದ ಕಾಂಗ್ರೆಸ್ ಸರ್ಕಾರ, ಬೆಲೆ ಏರಿಕೆ ಬಗ್ಗೆ ಚಿಂತನೆ ನಡೆಸುತ್ತಿದೆ. ವಿದ್ಯುತ್ ದರ ಏರಿಕೆ ಆಯ್ತು, ಇದೀಗ ಹಾಲಿನ ದರ ಏರಿಕೆಗೆ ಚಿಂತಿಸಲಾಗುತ್ತಿದೆ. ಒಂದೊಮ್ಮೆ ಹಾಲಿನ ದರ ಏರಿಕೆಯಾದರೆ ಹೊಟೇಲ್ (Hotel) ತಿಂಡಿಗಳ ಬೆಲೆಯಲ್ಲೂ ಏರಿಕೆಯಾಗಲಿದೆ.

ಹೋಟೆಲ್​​ಗಳಲ್ಲಿ ದರ ಏರಿಕೆಗೆ ಚಿಂತನೆ ನಡೆಸುತ್ತಿರುವ ಬಗ್ಗೆ ಮಾತನಾಡಿದ ನಿಸರ್ಗ ಹೋಟೆಲ್ ಮಾಲೀಕ ಕೃಷ್ಣರಾಜ್, ವಿದ್ಯುತ್, ತರಕಾರಿ, ಕಾಫಿ ಪುಡಿ, ಆಹಾರ ಧಾನ್ಯಗಳ ಬೆಲೆಗಳಲ್ಲಿ ಏರಿಕೆ ಆಗುತ್ತಿದೆ. ಸದ್ಯ ಸರ್ಕಾರದ ಮುಂದೆ ಹಾಲಿನ ದರ ಹೆಚ್ಚಳ ಪ್ರಸ್ತಾವನೆ ಇದೆ. ಇದು ನಮಗೆ ಹೊರೆ ಆಗುತ್ತದೆ. ಹೀಗಾಗಿ ಹೋಟೆಲ್​ನಲ್ಲಿ ತಿಂಡಿ ಊಟದ ದರ ಏರಿಕೆಗೆ ಚಿಂತನೆ ಮಾಡುತ್ತಿದ್ದೇವೆ ಎಂದಿದ್ದಾರೆ

ಸರ್ಕಾರವು ದರ ಏರಿಕೆಗೆ ಮುಂದಾಗಿರುವ ಹಿನ್ನೆಲೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ನಾವು ಭೇಟಿ ಮಾಡಿ ದರ ಹೆಚ್ಚಳ ಮಾಡದಂತೆ ಮನವಿ ಮಾಡಿದ್ದೇವೆ. ಈ ವೇಳೆ ಅವರು ನಾವು ಯೋಚನೆ ಮಾಡುತ್ತೇವೆ ಸರ್ಕಾರಕ್ಕೆ ಈಗ ಹಣ ಇಲ್ಲ ಎಂದು ಹೇಳಿದ್ದಾರೆ. ಒಟ್ಟಾರೆಯಾಗಿ ಹಾಲಿನ ದರದ ಮೇಲೆ ನಮ್ಮ ದರ ಏರಿಕೆ ಅವಲಂಬಿತವಾಗಿರುತ್ತದೆ. ಇನ್ನೊಂದು ವಾರದಲ್ಲಿ ನಿರ್ಧಾರ ಮಾಡುತ್ತೇವೆ ಎಂದರು.

ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ವಿದ್ಯುತ್ ದರದಲ್ಲೂ ಏರಿಕೆಯಾಗಿದೆ. ಒಂದೆಡೆ ಜನರು ಸರ್ಕಾರದ ಮೇಲೆ ಆಕ್ರೋಶ ಹೊರಹಾಕುತ್ತಿದ್ದರೆ, ಇನ್ನೊಂದೆಡೆ ವಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಮತ್ತು ಆಡಳಿತ ಪಕ್ಷ ಕಾಂಗ್ರೆಸ್ ನಡುವೆ ಆರೋಪ ಪ್ರತ್ಯಾರೋಪಗಳು ನಡೆಯುತ್ತಿವೆ. ವಿದ್ಯುತ್ ಬಿಲ್ ಕಡಿತ ಮಾಡಿ ಎಂದರೂ ಕಡಿಮೆ ಮಾಡಲು ಒಲ್ಲೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಒಟ್ಟಾರೆಯಾಗಿ, ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಸರ್ಕಾರ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ಜನರು ಆರೋಪಿಸುತ್ತಿದ್ದಾರೆ.

Leave a Reply

Your email address will not be published. Required fields are marked *