ಪೊಲೀಸರ ನಿರಾಕರಣೆ ನಂತರ ಆಟೋದಲ್ಲಿ ತಂದಿದ್ದ ಬಕ್ರೀದ್ ಬಿರಿಯಾನಿಯನ್ನು ಸಚಿವ ಜಮೀರ್ ಅಹಮದ್ ಖಾನ್ ಬೆಂಬಲಿಗರು ಬೆನ್ಜ್ ಕಾರಿಗೆ ಶಿಫ್ಟ್​ ಮಾಡಿ ಸಿದ್ದರಾಮಯ್ಯ ನಿವಾಸಕ್ಕೆ ಕೊಂಡೊಯ್ದಿದ್ದಾರೆ.

ಸಿದ್ದರಾಮಯ್ಯ ನಿವಾಸಕ್ಕೆ ಬೆನ್ಜ್ ಕಾರಿನಲ್ಲಿ ಬಂತು ಬಕ್ರೀದ್ ಬಿರಿಯಾನಿ

ಸಿದ್ದರಾಮಯ್ಯ, ಜಮೀರ್ ಅಹ್ಮದ್ ಖಾನ್ (ಬಲಚಿತ್ರ) ಮತ್ತು ಉಪಹಾರ ಸೇವಿಸುತ್ತಿರುವ ಸಿದ್ದರಾಮಯ್ಯ ಮತ್ತು ಜಮೀರ್ ಅಹ್ಮದ್ ಖಾನ್ (ಎಡಚಿತ್ರ)

ಬೆಂಗಳೂರು: ಬಕ್ರೀದ್ (Bakrid) ಹಬ್ಬ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ನೀಡಲೆಂದು ಅವರ ನಿವಾಸಕ್ಕೆ ಆಟೋದ ಮೂಲಕ ಬಿರಿಯಾನಿ ಕಳುಹಿಸಲಾಗಿತ್ತು. ಆದರೆ ಸಿಎಂ ನಿವಾಸದ ಬಳಿ ಭದ್ರತಾ ಕಾರ್ಯದಲ್ಲಿರುವ ಪೊಲೀಸರು ನಿರಾಕರಿಸಿದ ಹಿನ್ನೆಲೆ ಸಚಿವ ಜಮೀರ್ ಅಹಮದ್ ಖಾನ್ (Zameer Ahmed Khan) ಅವರ ಬೆಂಬಲಿಗರು ಆಟೋದಲ್ಲಿದ್ದ ಬಿರಿಯಾನಿಯನ್ನು ಬೆನ್ಜ್ ಕಾರಿನಲ್ಲಿಟ್ಟು ಒಳಗೆ ಕೊಂಡೊಯ್ದಿದ್ದಾರೆ.

ಸಿಎಂ ಸರ್ಕಾರಿ ನಿವಾಸದ ಎದುರು ಆಟೋ ಬಂದು ನಿಂತಿದೆ. ಈ ವೇಳೆ ಭದ್ರತಾ ಸಿಬ್ಬಂದಿ ಆಟೋ ಚಾಲಕನನ್ನು ವಿಚಾರಿಸಿದಾಗ ಸಚಿವ ಜಮೀರ್ ಅಹಮದ್ ಖಾನ್ ಅವರ ಕಡೆಯಿಂದ ಸಿದ್ದರಾಮಯ್ಯ ಅವರಿಗೆ ಬಿರಿಯಾನಿ ಕಳುಹಿಸಿರುವುದಾಗಿ ತಿಳಿಸಿದ್ದಾರೆ. ಆದರೆ ಅನುಮತಿ ಇಲ್ಲದೆ ತಂದಿದ್ದ ಬಿರಿಯಾನಿಯನ್ನ ಒಳಗೆ ಬಿಡುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರು ಒಳಗೆ ಬಿಡದೆ ಆಟೋವನ್ನು ವಾಪಸ್ ಕಳುಹಿಸಿದ್ದಾರೆ. ಇತ್ತ ಜಮೀರ್ ಬೆಂಬಲಿಗರು ಆಟೋದಲ್ಲಿದ್ದ ಬಿರಿಯಾನಿಯನ್ನು ಬೆನ್ಜ್ ಕಾರಿನಲ್ಲಿಟ್ಟುಕೊಂಡು ಸಿಎಂ ನಿವಾಸದ ಒಳಗೆ ಕೊಂಡೊಯ್ಯಲಾಗಿದೆ. ಬಿರಿಯಾನಿಯನ್ನು ನಿವಾಸದಲ್ಲಿಟ್ಟ ಬಳಿಕ ಕಾರು ವಾಪಸ್ ಹೋಗಿದೆ.

ಸಿಎಂ ರಾಜಕೀಯ ಕಾರ್ಯದರ್ಶಿ ಮನೆಗೆ ಸಿದ್ದರಾಮಯ್ಯ ಭೇಟಿ

ಬಕ್ರೀದ್ ಹಿನ್ನೆಲೆ ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ಅವರ ನಿವಾಸದಲ್ಲಿ ಔತಣಕೋಟ ಏರ್ಪಡಿಸಲಾಗಿತ್ತು. ಅದರಂತೆ ಸಿದ್ದರಾಮಯ್ಯ ಅವರು ಬೆಂಗಳೂರಿನ ಸಂಜಯನಗರದಲ್ಲಿರುವ ನಜೀರ್ ಮನೆಗೆ ಭೇಟಿ ನೀಡಿ ಔತಣಕೂಟದಲ್ಲಿ ಭಾಗಿಯಾದರು.

ಇದಕ್ಕೂ ಮುನ್ನ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದ ಸಿದ್ದರಾಮಯ್ಯ ಅವರು ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ‌ ಇರುವ ಜನಾರ್ದನ ಹೋಟೆಲ್​ಗೆ ತೆರಳಿ ಉಪಹಾರ ಸವಿದಿದ್ದರು. ಈ ವೇಳೆ ಸಚಿವರಾದ ಜಮೀರ್ ಅಹ್ಮದ್ ಖಾನ್, ಭೈರತಿ‌ ಸುರೇಶ್ ಹಾಗೂ ಮಾಜಿ ಸಚಿವ ಪರಮೇಶ್ವರ್ ‌ನಾಯ್ಕ್ ಜೊತೆಗಿದ್ದರು.

Leave a Reply

Your email address will not be published. Required fields are marked *