ಶಿರಾಡಿ ಘಾಟ್​ನಲ್ಲಿ ಶೀಘ್ರದಲ್ಲಿ ಏಕಮುಖ ಸಂಚಾರ ಸುರಂಗ ಮಾರ್ಗ ನಿರ್ಮಾಣ.. ಕೇಂದ್ರ ಸರ್ಕಾರದ ಜೊತೆಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿ

ಶಿರಾಡಿ ಘಾಟ್​ನಲ್ಲಿ ಶೀಘ್ರದಲ್ಲಿ ಏಕಮುಖ ಸಂಚಾರ ಸುರಂಗ ಮಾರ್ಗ ನಿರ್ಮಾಣ.. ಕೇಂದ್ರ ಸರ್ಕಾರದ ಜೊತೆಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿ

ಶಿರಾಡಿ ಘಾಟ್​ನಲ್ಲಿ ಪ್ರಸ್ತುತ ಇರುವ ಪ್ರಾಥಮಿಕ ರೂಪುರೇಷೆಯಂತೆ 3.8 ಕಿಮೀ ದೂರದ ಸುರಂಗ ಮಾರ್ಗ ನಿರ್ಮಾಣ ಮಾಡುವ ಯೋಜನೆ ಇದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ

ಹಾಸನ: ಮಂಗಳೂರು ಮತ್ತು ಬೆಂಗಳೂರು ಸಂಪರ್ಕಕ್ಕೆ ಪ್ರಮುಖ ಮಾರ್ಗವಾಗಿರುವ ಶಿರಾಡಿ ಘಾಟ್​ನಲ್ಲಿ ಸುರಂಗ ಮಾರ್ಗಗಳನ್ನು ಮಾಡುವ ಬಗ್ಗೆ ಈ ಹಿಂದೆಯೇ ಪ್ರಸ್ತಾಪಗಳಿದ್ದವು. ಈಗ ಮತ್ತೆ ಮುನ್ನಲೆ ಬಂದಿದೆ. ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ, ದೋಣಿಗಾಲ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ಎನ್ ಹೆಚ್ 75 ಕಾಮಗಾರಿ ಪರಿಶೀಲನೆಗೆ ಬಂದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಪ್ರಯಾಣಿಕರ ಅನುಕೂಲಕರ ಸಂಚಾರ ವ್ಯವಸ್ಥೆಗಾಗಿ ಸುರಂಗವನ್ನು ಒಳಗೊಂಡ ಮಾರ್ಗ ನಿರ್ಮಾಣ ಆದಷ್ಟು ಬೇಗ ಮಾಡಲಾಗುವುದು ಎಂದು ಭರವಸೆ ಇತ್ತಿದ್ದಾರೆ.

ಕಾಮಗಾರಿ ವೀಕ್ಷಣೆ ವೇಳೆ ಮಾಧ್ಯಮದಬರೊಂದಿಗೆ ಮಾತನಾಡಿದ ಅವರು,”ಒಟ್ಟು 30 ಕಿಲೋಮೀಟರ್ ಉದ್ದದ ಹೊಸ ಯೋಜನೆಗೆ ರೂಪುರೇಷೆ ಸಿದ್ದಪಡಿಸಲಾಗಿದೆ. ಇದರಲ್ಲಿ 3.8 ಕಿಲೋಮೀಟರ್ ಸುರಂಗ ಮಾರ್ಗ ಇರಲಿದೆ. ಹತ್ತು ಕಿಲೋಮೀಟರ್ ಪ್ರದೇಶ ಅರಣ್ಯ ಸಂರಕ್ಷಣಾ ಕಾಯ್ದೆ ವ್ಯಾಪ್ತಿಯಲ್ಲಿ ಇರುವುದರಿಂದ ಅರಣ್ಯ ಇಲಾಖೆಯೊಂದಿಗೆ ವ್ಯವಹರಿಸಿ ಆನೆ ಕಾರಿಡಾರ್ ಸೇರಿದಂತೆ ಪ್ರಾಣಿಗಳ ಚಲನ ವಲನಕ್ಕೆ ಯಾವುದೇ ಧಕ್ಕೆ ಉಂಟಾಗದಂತೆ ಯೋಜನೆ ರೂಪಿಸಿ ಅನುಷ್ಠಾನ ಮಾಡಲಾಗುವುದು” ಎಂದರು.

ಏಕಮುಖ ಸಂಚಾರ ಸುರಂಗ: ಇನ್ನೂ ವಿಸ್ತೃತ ಕ್ರೀಯಾ ಯೋಜನೆ ತಯಾರಾಗಬೇಕಿದೆ. ಹಾಲಿ ಕೆಲವಡೆ ಪ್ರತ್ಯೇಕ ಏಕಮುಖ ಸಂಚಾರ ಮಾರ್ಗ ರೂಪಿಸುವ ಪ್ರಸ್ತಾಪವನೆ ಕೂಡ ಇದೆ. ಪ್ರಸ್ತಾಪಿತ ಯೋಜನೆಯನ್ನು ಮಾಡಿದರೆ ಒಂದು ಕಡೆಯಿಂದ ಹೋಗಲು ಒಂದು ಕಡೆಯಿಂದ ಬರಲು ಅನುಕೂಲ ಆಗಲಿದೆ. ಇದು ಅತ್ಯಂತ ತಿರುವುಗಳಿರುವ ಪ್ರದೇಶ, ಬಹಳಷ್ಟು ಅಪಘಾತಗಳಾಗುತ್ತವೆ. ಹೊಸ ಯೋಜನೆಯಿಂದ ಸಮಸ್ಯೆ ಪರಿಹಾರ ಆಗುತ್ತದೆ ಅನ್ನೋದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಲಹೆಯಾಗಿದೆ ಎಂದು ಸಚಿವ ಹೇಳಿದರು.

ಮಾರೇನಹಳ್ಳಿಯಿಂದ ಅಡ್ಡಹೊಳೆಯವರೆಗೆ ಪ್ರಾಥಮಿಕ ಯೋಜನೆ: ಕರ್ನಾಟಕಕ್ಕೆ ಇದೊಂದು ಹೆಮ್ಮೆಯ ಯೋಜನೆ. ಮುಖ್ಯಮಂತ್ರಿಗಳು ಹಾಗೂ ಕ್ಯಾಬಿನೆಟ್ ಗಮನಕ್ಕೆ ತರಬೇಕಿದೆ. ಅಲ್ಲದೆ ಕೇಂದ್ರ ಮಂತ್ರಿಗಳನ್ನು ಭೇಟಿ ಮಾಡಿ ಗಮನಕ್ಕೆ ತರುತ್ತೇವೆ. ಅನುಮತಿ‌ ದೊರೆತ ನಂತರ ವಿಸ್ತೃತ ಕ್ರಿಯಾ ಯೋಜನೆ ರೂಪಿಸಲಾಗುವುದು. ಪ್ರಾಥಮಿಕ ಯೋಜನೆ ಪ್ರಕಾರ ಈ ಮಾರ್ಗವನ್ನು ಮಾರೇನಹಳ್ಳಿಯಿಂದ ಅಡ್ಡಹೊಳೆಯವರೆಗೆ ಮಾಡಲಾಗುವುದು. ಮುಂದೆ ಘಾಟ್ ಇಲ್ಲವಾದ ಕಾರಣ ವಾಹನಗಳು ಸುಲಭವಾಗಿ ಹೋಗುತ್ತವೆ. ಒಂದು ಕಡೆಯಿಂದ ಟನಲ್‌ನಲ್ಲಿ, ಇನ್ನೊಂದು ಕಡೆ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತವೆ. ಮುಖಾಮುಖಿ ಸಂಚಾರ ಇಲ್ಲದಿರುವುದರಿಂದ ಅಪಘಾತಗಳು ಕಡಿಮೆಯಾಗುತ್ತದೆ. ಪರಿಸರದ ಸಂರಕ್ಷಣೆ ಬಗ್ಗೆ ಕಾಳಜಿ ವಹಿಸಿ, ಪರಿಸರಕ್ಕೆ ಪ್ರಾಮುಖ್ಯತೆ ನೀಡಿ ಯೋಜನೆಯನ್ನು ರೂಪಿಸಲಾಗುವುದು ಎಂದರು.

ಕೇಂದ್ರ ಸಚಿವರನ್ನು ಭೇಟಿ ಮಾಡಿ ನಾವು ಮನವರಿಕೆ ಮಾಡುತ್ತೇವೆ. ಆನಂತರ ನಮ್ಮ ರಾಜ್ಯ ಸರ್ಕಾರ ಮುಂದಿನ ಹೆಜ್ಜೆ ಇಡುತ್ತೆ. ನಾನೂ ಕೂಡ ಅರಣ್ಯ ಮಂತ್ರಿಯಾಗಿ ಕೆಲಸ ಮಾಡಿದ್ದೀನಿ. ಹೀಗಾಗಿ ಪರಿಸರದ ಮಹತ್ವ, ಗಾಂಭೀರ್ಯತೆ ಅರಿವಿದೆ. ಅದನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

Leave a Reply

Your email address will not be published. Required fields are marked *