ಧಾರವಾಡ, ಜೂನ್‌ 13: ತುಮಕೂರು ಜಿಲ್ಲಾ ಶಿರಾ ತಾಲೂಕಿನಲ್ಲಿ ಲಾರಿ ಚಾಲಕರಿಂದ ಹಣ ವಸೂಲಿ ಮಾಡುತ್ತಿದ್ದ ಎಎಸ್‌ಐ ಹಾಗೂ ಕಾನ್ಸ್ಟೇಬಲ್ ಲಂಚಾವತಾರದ ವಿಡಿಯೋ ವೈರಲ್ ಆಗಿ ಅಮಾನತು ಆದ ಸುದ್ದಿ ಮಾಸುವ ಮುನ್ನವೇ, ಧಾರವಾಡ ಜಿಲ್ಲೆಯಲ್ಲಿ ಎಎಸ್‌ಐ ಒಬ್ಬರು ಲಾರಿ ಚಾಲಕರಿಂದ ಹಣ ಪಡೆದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕುಂದಗೋಳ ಪೊಲೀಸ್ ಠಾಣಾ ಮುಂಭಾಗದಲ್ಲಿಯೇ ಈ ಒಂದು ಘಟನೆ ನಡೆದಿದ್ದು, ಕುಂದಗೋಳ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಎಎಸ್‌ಐ ಭೂದೇಶ ಮಡಿವಾಳ ಎನ್ನುವವರ ವಿರುದ್ಧ ಈ ಆರೋಪ ಕೇಳಿ ಬಂದಿದೆ.

ಎಎಸ್‌ಐ ಭೂದೇಶ ಮಡಿವಾಳ, ಮರಳು ಸಾಗಾಟದ ಲಾರಿಯ ಚಾಲಕನಿಗೆ ದಂಡ ಹಾಕಲು ಮುಂದಾದಾಗ, ಲಾರಿ ಚಾಲಕ ಬೇಡ ಸರ್..ದಂಡ ಏನು ಬೇಡ..ಈಗ ನನ್ನ ಬಳಿ ದುಡ್ಡಿಲ್ಲ ಎಷ್ಟಿದೆಯೋ ಅಷ್ಟು ತಗೊಳಿ ಎಂದಿದ್ದಾನೆ. ಅಲ್ಲದೇ ತನ್ನ ಬಳಿ ಇದ್ದ ಹಣವನ್ನು ಎಎಸ್‌ಐ ಭೂದೇಶ ಮಡಿವಾಳ ಅವರಿಗೆ ನೀಡಿದ್ದು, ದಂಡ ಹಾಕಲು ಮುಂದಾದ ಪೊಲೀಸ್‌ ದಂಡ ಹಾಕದೇ ಚಾಲಕ ಕೊಟ್ಟ ಹಣವನ್ನು ತಮ್ಮ ಜೇಬಿಗೆ ಇಳಿಸಿಕೊಂಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಪ್ರತಿ ನಿತ್ಯವೂ ಕೂಡ ಲಕ್ಷ್ಮೇಶ್ವರದಿಂದ ಮರಳು ತೆಗೆದುಕೊಂಡು ಹುಬ್ಬಳ್ಳಿಗೆ ಆಗಮಿಸುವ ಲಾರಿಗಳು ಕುಂದಗೋಳ ಪೊಲೀಸ್ ಠಾಣಾ ಮುಂಭಾಗದಲ್ಲಿಯೇ ಹಾದು ಹೋಗುತ್ತವೆ. ಹೀಗಾಗಿ ಇಲ್ಲಿ ಸಂಚಾರ ಮಾಡುವ ಲಾರಿ ಚಾಲಕರಿಂದ ಹಣವನ್ನು ಪೀಕಲಾಗುತ್ತದೆ ಎಂಬುದಕ್ಕೆ ಈ ಒಂದು ವಿಡಿಯೋ ಇದೀಗ ಸಾಕ್ಷಿಯಾಗಿದೆ.

ಮೊನ್ನೆ ಅಷ್ಟೇ ಗುಡಗೇರಿ ಪೊಲೀಸ್ ಠಾಣೆಯ ಸಿಬ್ಬಂದಿ ಒಬ್ಬರು ಮರಳು ಸಾಗಾಟ ಮಾಡುತ್ತಿದ್ದ ಟ್ರ್ಯಾಕ್ಟರ್‌ ಅನ್ನು ಠಾಣೆಗೆ ತಂದು ಟ್ರ್ಯಾಕ್ಟರ್ ಮಾಲಕರಿಂದ ಹಣ ಪೀಕಲು ಮುಂದಾಗಿದ್ದರು. ಈ ಸುದ್ದಿ ಎಲ್ಲೆಡೆ ವೈರಲ್‌ ಆಗುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್‌ ಜಗಲಾಸುರ ಕಾನ್ಸ್ಟೇಬಲ್ ರವಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದರು.

ಒಟ್ಟಿನಲ್ಲಿ ಸರ್ಕಾರಿ ಸಂಬಳ ಬಂದರೂ ಕೂಡಾ ಈ ರೀತಿಯಾಗಿ ಲಂಚದ ಹಣ ಪಡೆದ ಪೊಲೀಸರ ವಿರುದ್ಧ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್‌ ಜಗಲಾಸುರ ಯಾವ ರೀತಿಯಾದ ಕ್ರಮ ತೆಗೆದುಕೊಳ್ಳುತ್ತಾರೆ ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *