ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಕೊಟ್ಟ ಶಾಕ್ನಿಂದ ಸಿದ್ದರಾಮಯ್ಯನವರ ಸರ್ಕಾರ ತನ್ನ ನಿರ್ಧಾರ ಬದಲಿಸಿದೆ.
ಸಿದ್ದರಾಮಯ್ಯ
ಬೆಂಗಳೂರು: ಸರ್ಕಾರ ಬದಲಾಗುತ್ತಿದ್ದಂತೆಯೇ ಅಧಿಕಾರಿಗಳ ಬದಲಾವಣೆಯಾಗುವುದು ಸಾಮಾನ್ಯ. ಆಡಳಿತರೂಢ ಸರ್ಕಾರ ತಮಗೆ ಯಾವೆಲ್ಲ ಅಧಿಕಾರಿಗಳು ಬೇಕೋ ಅವರನ್ನು ತಮಗೆ ಬೇಕಾದ ಸ್ಥಳಕ್ಕೆ ವರ್ಗಾವಣೆ ಮಾಡುತ್ತೆ. ಅದರಂತೆ ಇದೀಗ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಐಪಿಎಸ್ ಹಾಗೂ ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡುತ್ತಿದೆ. ಆರಂಭದಲ್ಲಿ ಈಗಾಗಲೇ ಕೆಲ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಿದೆ. ಆದ್ರೆ, ಇದೀಗ ಅದೇ ಐಪಿಎಸ್ ವರ್ಗಾವಣೆ ಸಂಬಂಧ ರಾಜ್ಯ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದೆ.
ಹೌದು..ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರ್ ವರ್ಗಾವಣೆಗೆ ತಡೆ ಬಂದ ಹಿನ್ನಲೆಯಲ್ಲಿ ಮುಜುಗರಕ್ಕೀಡಾದ ಸರ್ಕಾರ, ಐಪಿಎಸ್ ಅಧಿಕಾರಿಗಳ ವರ್ಗಾವಣೆ ನಿರ್ಧಾರ ಬದಲಾವಣೆ ಮಾಡಿಕೊಂಡಿದೆ. ಬೆಂಗಳೂರಿನ ಕೇಂದ್ರ ವಿಭಾಗ, ಪಶ್ಚಿಮ, ಪೂರ್ವ, ಉತ್ತರ ಸೇರಿದಂತೆ 25 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಪಟ್ಟಿ ಸಿಎಂ ಸಿದ್ದರಾಮಯ್ಯನವರ ಬಳಿ ಇತ್ತು. ಆದ್ರೆ, ರವಿ ಡಿ ಚೆನ್ನಣ್ಣನವರ್ ಕೊಟ್ಟ ಶಾಕ್ನಿಂದಾಗಿ ಸಿಎಂ, ಅಧಿಕಾರಿಗಳ ವರ್ಗಾವಣೆ ಕೈಬಿಟ್ಟಿದ್ದಾರೆ.
ರವಿ ಡಿ ಚೆನ್ನಣ್ಣನವರ್ ಅವರನ್ನು ಕಿಯೋನಿಕ್ಸ್ ಎಂಡಿಯಿಂದ ಆಂತರಿಕ ಭದ್ರತಾ ವಿಭಾಗಕ್ಕೆ ವರ್ಗಾವಣೆ ಮಾಡಿತ್ತು. ಈ ವರ್ಗಾವಣೆ ಪ್ರಶ್ನಿಸಿ ರವಿ ಡಿ ಚೆನ್ನಣ್ಣನವರ್ ಸಿಐಟಿ ಮೊರೆ ಹೋಗಿ ತಡೆ ತಂದಿದ್ದರು. ಹೀಗಾಗಿ ಸರ್ಕಾರಕ್ಕೆ ತೀವ್ರ ಮುಜುಗರ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಈಗ ಸದ್ಯ ಉಳಿದ ಅಧಿಕಾರಿಗಳ ವರ್ಗಾವಣೆ ಮಾಡಬೇಕೋ ಬೇಡ್ವಾ ಎನ್ನುವ ಬಗ್ಗೆ ಸರ್ಕಾರ ಗೊಂದಲದಲ್ಲಿದೆ.
ಸರ್ಕಾರದ ವಿರುದ್ಧವೇ ಸಿಎಟಿ ಮೊರೆ ಹೋಗಿದ್ದ ರವಿ ಡಿ ಚನ್ನಣ್ಣನವರ್
ರವಿ ಡಿ ಚನ್ನಣ್ಣನವರ್ ಅವರನ್ನು ಹಿಂದಿನ ಬಿಜೆಪಿ ಸರ್ಕಾರ 2022ರ ನವೆಂಬರ್ 14 ರಂದು ಕಿಯೋನಿಕ್ಸ್ ಎಂಡಿಯಾಗಿ ವರ್ಗಾಯಿಸಿತ್ತು. ಇದೀಗ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜೂನ್ 7 ರಂದು ವರ್ಗಾವಣೆ ಮಾಡಿ ಆದೇಶಿಸಿದೆ. ಕಿಯೋನಿಕ್ಸ್ ಎಂಡಿಯಾಗಿದ್ದ ರವಿ ಡಿ ಚನ್ನಣ್ಣನವರ್ ಅವರನ್ನ ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ ಎಂಡಿ ಹುದ್ದೆಗೆ ವರ್ಗಾವಣೆ ಮಾಡಲಾಗಿತ್ತು. ವರ್ಗಾವಣೆ ಆದೇಶವನ್ನು ಆಕ್ಷೇಪಿಸಿದ್ದ ರವಿ ಡಿ ಚನ್ನಣ್ಣನವರ್, ಕಿಯೋನಿಕ್ಸ್ ಎಂಡಿಯಾಗಿ ಈ ಹುದ್ದೆಗೆ ಬಂದು 6 ತಿಂಗಳಾಗಿದೆ. ಕಾರಣ ನೀಡದೆ ವರ್ಗಾವಣೆ ಮಾಡಿದ್ದು, ಸರಿಯಲ್ಲ ಎಂದು ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿಯಲ್ಲಿ ಪ್ರಶ್ನಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ್ದ ಸಿಎಟಿ ನ್ಯಾ. ಎಸ್ ಸುಜಾತಾ & ರಾಕೇಶ್ ಕುಮಾರ್ ಗುಪ್ತಾ ಅವರ ಪೀಠ ಮುಂದಿನ ಆದೇಶದವರೆಗೆ ಸರ್ಕಾರದ ಆದೇಶಕ್ಕೆ ತಡೆ ನೀಡಿ ಮನವಿ ಪುರಸ್ಕರಿಸಿ ವಿಚಾರಣೆಯನ್ನು ಜುಲೈ 4ಕ್ಕೆ ಮುಂದೂಡಿದೆ