ಹಿಂದಿನ ಬಿಜೆಪಿ ಸರ್ಕಾರದಂತೆ, ಹೊಸ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಆರೋಗ್ಯ ಕ್ಷೇತ್ರದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ(ಪಿಪಿಪಿ) ಮಾದರಿಗೆ ಒಲವು ತೋರುತ್ತಿಲ್ಲ. ಹೀಗಾಗಿ ಇಲ್ಲಿಯವರೆಗೆ ಪಿಪಿಪಿ ಮಾದರಿ ಅಡಿ…

Dinesh GunduRao

ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದಂತೆ, ಹೊಸ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಆರೋಗ್ಯ ಕ್ಷೇತ್ರದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ(ಪಿಪಿಪಿ) ಮಾದರಿಗೆ ಒಲವು ತೋರುತ್ತಿಲ್ಲ. ಹೀಗಾಗಿ ಇಲ್ಲಿಯವರೆಗೆ ಪಿಪಿಪಿ ಮಾದರಿ ಅಡಿ ಅನುಮೋದಿಸಲಾದ ಎಲ್ಲಾ ಯೋಜನೆಗಳನ್ನು ಪರಿಶೀಲಿಸಲು ನಿರ್ಧರಿಸಿದ್ದಾರೆ.

ಯಾವುದೇ ಜಿಲ್ಲಾ ಆಸ್ಪತ್ರೆಗಳು ಅಥವಾ ಸಾರ್ವಜನಿಕ ಆರೋಗ್ಯ ಕೇಂದ್ರಗಳನ್ನು(ಪಿಎಚ್‌ಸಿ) ಪಿಪಿಪಿ ಮಾದರಿಗೆ ಒಳಪಡಿಸಬಾರದು. ಬದಲಾಗಿ, ಎಲ್ಲಾ ಆಸ್ಪತ್ರೆ ಆವರಣಗಳು, ವೈದ್ಯರು, ದಾದಿಯರನ್ನು ಬಲಪಡಿಸಲು ಸರ್ಕಾರ ಹೆಚ್ಚು ಜವಾಬ್ದಾರಿಯುತವಾಗಿರಬೇಕು ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಪಿಪಿಪಿ ಮಾದರಿಯನ್ನು ಹಿಂದಿನ ಬಿಜೆಪಿ ಸರ್ಕಾರ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಚ್ಚಾಗಿ ಪ್ರಚಾರ ಮಾಡಿತು ಮತ್ತು ಇದಕ್ಕಾಗಿ ಕರ್ನಾಟಕದಲ್ಲಿ 11 ಜಿಲ್ಲೆಗಳನ್ನು ಗುರುತಿಸಿತ್ತು. ಅಲ್ಲಿ ಜಿಲ್ಲಾ ಆಸ್ಪತ್ರೆಗಳ ಜೊತೆಗೆ ವೈದ್ಯಕೀಯ ಕಾಲೇಜುಗಳನ್ನು ಪಿಪಿಪಿ ಮಾದರಿಯಲ್ಲಿ ಸ್ಥಾಪಿಸಲು ನಿರ್ಧರಿಸಿತ್ತು. ತುಮಕೂರು, ದಾವಣಗೆರೆ, ಚಿತ್ರದುರ್ಗ, ಬಾಗಲಕೋಟೆ, ಕೋಲಾರ, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ವಿಜಯಪುರ, ವಿಜಯನಗರ ಮತ್ತು ರಾಮನಗರ ಜಿಲ್ಲೆಗಳನ್ನು ಹಿಂದಿನ ಬಿಜೆಪಿ ಸರ್ಕಾರ ಗುರುತಿಸಿತ್ತು.

‘ದಾವಣಗೆರೆಯ ಜಿಲ್ಲಾ ಆಸ್ಪತ್ರೆಯಲ್ಲಿ ಒಂದು ಪಿಪಿಪಿ ಮಾದರಿಯನ್ನು ಪರಿಚಯಿಸಲಾಗಿದೆ. ಇದನ್ನು ಹೊರತುಪಡಿಸಿ, ಸಂಪೂರ್ಣ ಯೋಜನೆ ಚರ್ಚೆ ಹಂತದಲ್ಲಿದೆ. 2024-25ರ ವೇಳೆಗೆ ಇದಕ್ಕೆ ಚಾಲನೆ ನೀಡುವ ನಿರೀಕ್ಷೆಯಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕಿ ಡಾ.ಸುಜಾತಾ ರಾಥೋಡ್ ಅವರು ಹೇಳಿದ್ದಾರೆ.

ಎಲ್ಲಾ ಪಿಪಿಪಿ ಯೋಜನೆಗಳನ್ನು ಸಂಪೂರ್ಣವಾಗಿ ತೆಗೆದು ಹಾಕುವುದಿಲ್ಲ. ಆದರೆ ಅವುಗಳನ್ನು ವಿವರವಾಗಿ ಪರಿಶೀಲಿಸಿದ ನಂತರ ಯಾವುದನ್ನು ಮುಂದುವರಿಸಬೇಕೆಂದು ನಿರ್ಧರಿಸುತ್ತೇವೆ ಎಂದು ದಿನೇಶ್ ಗುಂಡೂರಾವ್ ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಹಿಂದಿನ ಸರ್ಕಾರ ಖಾಸಗಿ ಸಂಸ್ಥೆಗಳಿಗೆ ಪಿಪಿಪಿ ಮಾದರಿಯಲ್ಲಿ ಭೂಮಿ ಮಂಜೂರು ಮಾಡಲು ಯೋಜಿಸಿತ್ತು. ಖಾಸಗಿ ಸಂಸ್ಥೆಗಳು ಕಾಲೇಜು ಕಟ್ಟಡ, ಮೂಲಸೌಕರ್ಯ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಹಣ ಹೂಡಿಕೆ ಮಾಡುತ್ತಾರೆ. ಇದಲ್ಲದೆ, ವೈದ್ಯಕೀಯ ಚಿಕಿತ್ಸೆಗಾಗಿ ಸರ್ಕಾರ ಜಿಲ್ಲಾ ಆಸ್ಪತ್ರೆಯನ್ನು ಆ ಸಂಸ್ಥೆಗಳಿಗೆ ಹಸ್ತಾಂತರಿಸಲಿದೆ.

Leave a Reply

Your email address will not be published. Required fields are marked *