ಮಾನವ ಸಹಿತ ಗಗನಯಾನ ಸಿದ್ಧತೆ ಅಂಗವಾಗಿ ಭಾರತೀಯ ಬಾಹ್ಯಕಾಶ ಸಂಸ್ಥೆ (ಇಸ್ರೊ) ನಡೆಸಿದ ಮೂರನೇ ಪರೀಕ್ಷೆ ಯಶಸ್ವಿಯಾಗಿದೆ.
ಗಗನಯಾನದ ನೌಕೆ ವಿಫಲವಾದರೆ ಗಗನಯಾತ್ರಿ ಹೇಗೆ ರಕ್ಷಣೆ ಮಾಡಬೇಕು ಎಂಬ ಕುರಿತು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿ ಶನಿವಾರ ನಡೆಸಿದ ಮೂರನೇ ಪರೀಕ್ಷೆ ಕೂಡ ಯಶಸ್ವಿಯಾಗಿದೆ. ಈ ಮೂಲಕ ಗಗನಯಾತ್ರೆಯ ಸಿದ್ಧತೆ ಆಶಾಕಿರಣ ಮೂಡಿಸಿದೆ.

ಶನಿವಾರ ಬೆಳಗ್ಗೆ ೧೦ ಗಂಟೆ ವೇಳೆಗೆ ಟಿವಿ-ಡಿ೧ ರಾಕೆಟ್ ಉಡಾವಣೆ ಮಾಡಲಾಯಿತು. ಯಶಸ್ವಿಯಾಗಿ ಹಾರಾಟ ನಡೆಸಿದ ಗಗನನೌಕೆ ಸೇಫ್ ಲ್ಯಾಂಡಿಂಗ್ ಆಗಿದೆ ಎಂದು ಇಸ್ರೋ ಮಾಹಿತಿ ಹಂಚಿಕೊಂಡಿದೆ.

ಶನಿವಾರ ಬೆಳಗ್ಗೆ 8.45ಕ್ಕೆ ಮಾನವರಹಿತ ಪರೀಕ್ಷಾರ್ಥ ವಾಹನ ಉಡಾವಣೆಗೆ ಸಜ್ಜಾಗಿತ್ತು. ಅದಕ್ಕೂ ಮುನ್ನ 8.30ಕ್ಕೆ ಉಡ್ಡಯನಕ್ಕೆ ಇಸ್ರೋ ಸಮಯ ನಿಗದಿ ಪಡಿಸಿತ್ತು. ಆದರೆ ಹವಾಮಾನ ವೈಪರೀತ್ಯದಿಂದ ಸಮಯ ಬದಲಾವಣೆ ಮಾಡಲಾಗಿತ್ತು. ಕೊನೆ ಕ್ಷಣದಲ್ಲಿ ಇಂಜಿನ್ ನಲ್ಲಿ ತಾಂತ್ರಿಕ ದೋಷ ಸರಿಪಡಿಸಿದ ನಂತರ ಯಶಸ್ವಿಯಾಗಿ ಪರೀಕ್ಷಾರ್ಥ ಹಾರಾಟಕ್ಕೆ ರಾಕೆಟ್ ಉಡಾವಣೆ ಮಾಡಲಾಯಿತು.

ಟಿವಿ-ಡಿ1 ಪರೀಕ್ಷಾರ್ಥ ಹಾರಾಟವು ಗಗನಯಾನ ಮಿಷನ್ನ ನಿರ್ಣಾಯಕ ಭಾಗವಾಗಿದೆ. ಇದು ಮೂರು ವ್ಯಕ್ತಿಗಳ ಸಿಬ್ಬಂದಿಯನ್ನು 3 ದಿನಗಳ ಕಾರ್ಯಾಚರಣೆಗಾಗಿ ೪೦೦ ಕಿಲೋಮೀಟರ್ ಕಕ್ಷಗೆ ಕಳುಹಿಸುವುದು, ಈ ಮೂಲಕ ಹಿಂದೂ ಮಹಾಸಾಗರದ ನೀರಿನಲ್ಲಿ ಸೇಫ್ ಲ್ಯಾಂಡಿಂಗ್ ಮತ್ತು ಅವರ ಸುರಕ್ಷಿತ ವಾಪಸಾತಿಯನ್ನು ಖಚಿತಪಡಿಸಿಕೊಳ್ಳುವುದು. ಇದರೊಂದಿಗೆ ಬಾಹ್ಯಾಕಾಶ ಯಾನಕ್ಕೆ ಭಾರತದ ಸಾಮರ್ಥ್ಯ ಪ್ರದರ್ಶಿಸುವ ಗುರಿಯನ್ನು ಹೊಂದಿದೆ.

ಟಿವಿ-ಡಿ ವಾಹನವು ಮಾರ್ಪಡಿಸಿದ ವಿಕಾಸ್ ಎಂಜಿನ್ ಒಳಗೊಂಡಿದ್ದು, ಕ್ರ್ಯೂ ಮಾಡ್ಯೂಲ್ ಮತ್ತು ಕ್ರ್ಯೂ ಎಸ್ಕೇಪ್ ಸಿಸ್ಟಂ ಅನ್ನು ಬಳಸುತ್ತದೆ. ಇದು 34.5 ಮೀಟರ್ ಎತ್ತರದಲ್ಲಿದೆ ಮತ್ತು 44 ಟನ್ ಗಳಷ್ಟು ತೂಕ ಹೊಂದಿದೆ. ಒಂದು ವೇಳೆ ಈ ಮಿಷನ್ ಯಶಸ್ವಿಯಾದಲ್ಲಿ ಮಾನವಸಹಿತ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡುವ ಸಾಮರ್ಥ್ಯವಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಸೇರಲಿದೆ.

Leave a Reply

Your email address will not be published. Required fields are marked *