ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಅವರ 45 ಪರ್ಸೆಂಟ್ ಸರ್ಕಾರ ಆರೋಪಕ್ಕೆ ಶಾಸಕ ವಿಜಯಾನಂದ ಕಾಶಪ್ಪನವರ್​ ತಿರುಗೇಟು ನೀಡಿದ್ದಾರೆ. ನೋಡಿ ಕುಮಾರಸ್ವಾಮಿ ರಾಜ್ಯದ ಜನತೆ ಅವರನ್ನು ಎಲ್ಲಿ ಕೂರಿಸಿದ್ದಾರೆ ಅಂತ ಅರ್ಥ ಮಾಡಿಕೊಳ್ಳಬೇಕು. 19 ಸೀಟ್ ಗೆಲ್ಲಿಸಿ ಎಲ್ಲಿ ಕೂರಿಸಬೇಕು ಕೂರಿಸಿದ್ದಾರೆ ಎಂದು ಹೇಳಿದರು.

ತಂದೆ-ಮಗ ಇಬ್ಬರಿಗೂ ಭ್ರಷ್ಟಾಚಾರ ಬಿಟ್ಟರೆ ಏನು ಉದ್ಯೋಗವಿಲ್ಲ: ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಕಾಶಪ್ಪನವರ್​ ವಾಗ್ದಾಳಿ

ಹೆಚ್​.ಡಿ ಕುಮಾರಸ್ವಾಮಿ, ವಿಜಯಾನಂದ ಕಾಶಪ್ಪನವರ್​

ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಅವರ 45 ಪರ್ಸೆಂಟ್ ಸರ್ಕಾರ ಆರೋಪಕ್ಕೆ ಶಾಸಕ ವಿಜಯಾನಂದ ಕಾಶಪ್ಪನವರ್​ (Vijayanand Kashappanavar) ತಿರುಗೇಟು ನೀಡಿದ್ದಾರೆ. ನೋಡಿ ಕುಮಾರಸ್ವಾಮಿ ಅವರನ್ನ ರಾಜ್ಯದ ಜನತೆ ಅವರನ್ನು ಎಲ್ಲಿ ಅವರು ಕೂರಿಸಿದ್ದಾರೆ ಅಂತ ಅರ್ಥ ಮಾಡಿಕೊಳ್ಳಬೇಕು. ಹೆಚ್​.ಡಿ ಕುಮಾರಸ್ವಾಮಿ ಅವರು ಮಾತನಾಡುತ್ತಾರಲ್ಲ ಈ ತರಹ ಬೇಜವಾಬ್ದಾರಿಯಿಂದ, ಅವರಿಗೆ ಜನರು ತಕ್ಕ ಉತ್ತರ ಕೊಟ್ಟಿಲ್ವಾ? 19 ಸೀಟ್ ಗೆಲ್ಲಿಸಿ ಎಲ್ಲಿ ಕೂರಿಸಬೇಕು ಕೂರಿಸಿದ್ದಾರೆ. ಯಾಕಂದರೇ ಇವರದ್ದು ಇದೆ ಆಟ ಆ ಸರಕಾರ‌ದ ಜೊತೆ ಭಾಗಿಯಾದೆ. ಈ ಸರಕಾರದ‌ ಜೊತೆ ಭಾಗಿಯಾದೆ. ತಂದೆ-ಮಗಂದು ಏನು ಕೆಲಸ‌? ಇಬ್ಬರಿಗೂ ಭ್ರಷ್ಟಾಚಾರ ಬಿಟ್ಟರೆ ಏನು ಉದ್ಯೋಗವಿಲ್ಲ. ಇದು ಜೆಡಿಎಸ್ ಅಪ್ಪ-ಮಗನ ಪಕ್ಷ ಎಂದು ವಾಗ್ದಾಳಿ ಮಾಡಿದರು.

ಬಾಗಲಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಇವರೇ ಈ ಹಿಂದೆ ಬಿಜೆಪಿ ಜೊತೆ ಎಷ್ಟು ಸಾರಿ ಶಾಮೀಲಾಗಿಲ್ಲ ? ಎಷ್ಟು ಸಾರಿ ಬಿಜೆಪಿ ಜೊತೆ ಶಾಮೀಲಾಗಿ ಕಾಂಗ್ರೆಸ್ ಸೋಲಿಸುವ ಕೆಲಸ‌ಮಾಡಿಲ್ಲ. ಇವರು ಎಷ್ಟು ಪರ್ಸೆಂಟ್ ಕಮೀಷನ್ ಹೊಡೆದರು ಹೇಳಲಿ? ಕುಮಾರಸ್ವಾಮಿ ಬೇಡವೇ ಬೇಡ ಅಂತ ಜನ ಮೂಲೆಗೆ ಒತ್ತಿದ್ದಾರೆ. ಜೆಡಿಎಸ್ ಬಿಜೆಪಿಯ ಬಿ ಟೀಮ್ ಎಂದು ಹೇಳಿದರು.

ಇನ್ನು ಬಿಜೆಪಿ ಕಾಂಗ್ರೆಸ್ ಅತಿರಥ ಮಹಾರಥರು ಶಾಮೀಲಾಗಿದ್ದಾರೆ. ಈಗ ಅಧಿಕಾರಕ್ಕೆ ಬಂದ ಮೇಲೆ ಕಾಂಗ್ರೆಸ್​​ನವರು ಹಿಂದಿನ ನಮ್ಮ ಸರಕಾರದ ಹಗರಣಗಳ ಬಗ್ಗೆ ಯಾಕೆ‌ ಮಾತಾಡುತ್ತಿಲ್ಲ ಎಂಬ ಸಂಸದ ಪ್ರತಾಪ್ ಸಿಂಹ ಪ್ರಶ್ನೆಗೆ ಉತ್ತರಿಸಿದ ಅವರು ನಮ್ಮ ಸರಕಾರ ಬಂದಿದೆ ಇಲ್ಲಿ ಯಾವುದೇ ಕಾಂಪ್ರಮೈಸ್ ಇಲ್ಲ. ಇದು ಕಾಂಪ್ರಮೈಸ್ ಸರಕಾರವಲ್ಲ. ಹಿಂದಿನ ಸರಕಾರ ಕಾಂಪ್ರಮೈಸ್ ಸರಕಾರ 40 ಪರ್ಸೆಂಟ್​​ ಸರಕಾರ. ಎಲ್ಲ ಹಗರಣಗಳ ಸರಕಾರ ಬಿಜೆಪಿ ಸರಕಾರ ಎಂದು ಆರೋಪ ಮಾಡಿದರು.

ಸಿದ್ದರಾಮಯ್ಯನವರ ಸರಕಾರ ಕಾಂಗ್ರೆಸ್ it is never compromise ಸರಕಾರ. ಪಿಎಸ್​​ಐ, ಬಿಟ್ ಕಾಯಿನ್ ಸೇರಿದಂತೆ ಎಲ್ಲ ಹಗರಣ ಹೊರ ಬಂದಿದ್ದು ಅವರ ಕಾಲದಲ್ಲಿ. ಎಲ್ಲವೂ ತನಿಖೆ ಹಂತದಲ್ಲಿದೆ. ಈಗಾಗಲೇ ಪಿಎಸ್​ಐ ಹಗರಣದಲ್ಲಿ ಪಾಪ ಎಷ್ಟೊ ಜನ ನಿಜವಾಗಿ ಪಾಸ್ ಆದವರು ವಂಚಿತರಾಗಿದ್ದಾರೆ. ಅವರಿಗೆಲ್ಲ ನ್ಯಾಯ ಕೊಡಬೇಕು. ಬಿಟ್​​ ಕಾಯಿನ್​ನಲ್ಲಿ ಯಾರ್ಯಾರಿದ್ದಾರೆ ಅಂತ ಗೊತ್ತಿದೆ. ಸ್ವತಃ ಸಿಎಮ್ ಇದರಲ್ಲಿ ಶಾಮೀಲಾಗಿದ್ದಾರೆ. ಶಾಸಕ ಬಿ ವೈ ವಿಜಯೇಂದ್ರ ಕೂಡ ಇದರಲ್ಲಿ ಭಾಗಿಯಾಗಿದ್ದಾರೆ. ಇವರೆಲ್ಲ ಇದ್ದಾರೆ ಅಂತ ಮಾಧ್ಯಮದಲ್ಲೇ ನಾನು ನೋಡಿದ್ದು. ಇವೆಲ್ಲ ತನಿಖೆ ಮಾಡಿಸುತ್ತೇವೆ. ನಮ್ಮ ಸರಕಾರ ಬಂದಿದೆ ಇದರಲ್ಲಿ ಯಾವುದೇ ಕಾಂಪ್ರಮೈಸ್ ಇಲ್ಲ ಎಂದರು.

ಪಠ್ಯಪುಸ್ತಕ ಪರಿಷ್ಕರಣೆ ವಿಚಾರವಾಗಿ ಮಾತನಾಡಿದ ಅವರು ಪಠ್ಯಪುಸ್ತಕ ‌ಮುಟ್ಟಿದ್ದೆ ಬಿಜೆಪಿಯವರು. ಹಿಂದೆ ಯಾವ ಸರಕಾರ ಮುಟ್ಟಿತ್ತು ರಾಜ್ಯದಲ್ಲಿ. ಪಠ್ಯಪುಸ್ತಕ ಮುಟ್ಟಿ ಇತಿಹಾಸ ಬದಲಿ ಮಾಡಿದ್ದು ಇದೆ ಬಿಸಿ ನಾಗೇಶ್ ಸಚಿವರಾಗಿದ್ದಾಗ. ಇವರು ಹಳೆ ಪಠ್ಯಪುಸ್ತಕ ಓದಿಯೇ ಪಾಸ್ ಆಗಿ ಸಚಿವರಾಗಿದ್ದು ಮರೆತಿದ್ದಾರೆ. ಅವರು ಅರ್ಥ ಮಾಡಿಕೊಳ್ಳಬೇಕು. ಅವರು ಇತಿಹಾಸ ತಿರುಚಿವ ಕೆಲಸ ಮಾಡಿದ್ದಾರೆ. ಇತಿಹಾಸ ತಿರುಚುವ ಕೆಲಸ ಮಾಡಬೇಡ್ರಪ್ಪಾ ಎಂದು ತಪ್ಪು ಮಾಡಿದ್ದನ್ನು ಸರಿ ಮಾಡುತ್ತಿದ್ದೇವೆ. ಬಿಜೆಪಿಗೆ ಇತಿಹಾಸವೇ ಗೊತ್ತಿಲ್ಲ ಇತಿಹಾಸವನ್ನೇನು ರಚಿಸ್ತಾರೆ. ಅದಕ್ಕೆ ಜನ ಈ ಬಾರಿ ಮನೆಯಲ್ಲಿ ಕೂರಿಸಿದ್ದಾರೆ ಎಂದು ಕಾಲೆಳೆದರು.

Leave a Reply

Your email address will not be published. Required fields are marked *