ನಿಂತಿದ್ದ ಲಾರಿಗೆ ಪ್ರಯಾಣಿಕರನ್ನು ತುಂಬಿದ್ದ ಟಾಟಾ ಸುಮೊ ಡಿಕ್ಕಿ ಹೊಡೆದಿದ್ದರಿಂದ 13 ಮಂದಿ ಮೃತಪಟ್ಟ ದಾರುಣ ಘಟನೆ ಚಿಕ್ಕಬಳ್ಳಾಪುರ ಹೊರವಲಯದಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದೆ.
ಮೃತರು ಆಂಧ್ರದ ಗೊರೆಂಟ್ಲ ಮೂಲದವರಾಗಿದ್ದು ಬೆಂಗಳೂರಿನ ಹೊಂಗಸಂದ್ರದಲ್ಲಿ ವಾಸವಾಗಿದ್ದರು. ದಸರಾ ಹಬ್ಬಕ್ಕೆ ಗೊರೆಂಟ್ಲ ಗ್ರಾಮಕ್ಕೆ ತೆರಳಿದ್ದ ಇವರು ಹಬ್ಬ ಮುಗಿಸಿ ಬೆಂಗಳೂರಿಗೆ ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಅರುಣಾ, ನವೀನ್ ಕುಮಾರ್, ನಂಜುಂಡಪ್ಪ, ಪದ್ಮಾವತಿ, ಋತ್ವಿಕ್ ಕುಮಾರ್ ಮೃತಪಟ್ಟಿದ್ದಾರೆ. ಉಳಿದ ಹೆಸರು ಲಭ್ಯವಾಗಿಲ್ಲ.
ಬೆಳಗಿನ ಜಾವ ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆಯ ಮುಂದೆಯೇ ರಸ್ತೆ ಬದಿ ನಿಂತಿದ್ದ ಬಲ್ಕರ್ ಲಾರಿಗೆ ಟಾಟಾ ಸುಮೋ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಸುಮೋದಲ್ಲಿ 12 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಟಾಟಾ ಸುಮೋ ಬಾಗೇಪಲ್ಲಿಯಿಂದ ಚಿಕ್ಕಬಳ್ಳಾಪುರದ ಕಡೆ ಹೋಗುತ್ತಿತ್ತು. ಆದರೆ ದಟ್ಟ ಮಂಜು ಕವಿದ ಹಿನ್ನೆಲೆಯಲ್ಲಿ ಟಾಟಾ ಸುಮೊ ಚಾಲಕನಿಗೆ ಸರಿಯಾಗಿ ರಸ್ತೆ ಕಾಣಿಸಿಲ್ಲ. ಇದರಿಂದ ರಸ್ತೆ ಬದಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಮಗು, ಮೂವರು ಮಹಿಳೆಯರು ಸೇರಿ 12 ಜನ ಮೃತಪಟ್ಟಿದ್ದಾರೆ.
ಓರ್ವ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ. ಮೃತರು ಆಂಧ್ರದ ಗೊರಂಟ್ಲ ನಿವಾಸಿಗಳು ಎನ್ನುವುದು ಗೊತ್ತಾಗಿದೆ. ಒಬ್ಬೊಬ್ಬರು ಒಂದೊಂದು ಊರಿನವರು ಎಂಬ ಮಾಹಿತಿ ಸಿಕ್ಕಿದೆ ಎಂದು ಚಿಕ್ಕಬಳ್ಳಾಪುರ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.