SHARE
ಬೆಂಗಳೂರು: ಗ್ಯಾರಂಟಿ (Congress Guarantee) ಹೊಡೆತದ ಕಾರಣ ಕಾಂಗ್ರೆಸ್ ಸರ್ಕಾರ (Karnataka Govt) ಶಾಲಾ ಮಕ್ಕಳ ಹಣಕ್ಕೂ ಕತ್ತರಿ ಹಾಕಿದೆ. ಶೂ, ಸಾಕ್ಸ್ (Shoes And Socks) ಖರೀದಿ ಹಣವನ್ನು ರಾಜ್ಯ ಸರ್ಕಾರ ಕಡಿತ ಮಾಡಿ ಆದೇಶ ಹೊರಡಿಸಿದೆ.
ಸರ್ಕಾರ ನೀಡಬೇಕಿದ್ದ ಒಟ್ಟು ಅನುದಾನದಲ್ಲಿ ಬರೋಬ್ಬರಿ 7 ಕೋಟಿ ಹಣ ಕಡಿತ ಮಾಡಿ ಶೂ, ಸಾಕ್ಸ್ ಖರೀದಿಗೆ ಆದೇಶ ಹೊರಡಿಸಿದೆ. 2022-23ನೇ ಸಾಲಿನಲ್ಲಿ ಬಿಜೆಪಿ ಸರ್ಕಾರ 1 ರಿಂದ 10 ನೇ ತರಗತಿ ಮಕ್ಕಳಿಗೆ 1 ಜೊತೆ ಶೂ, ಎರಡು ಜೊತೆ ಸಾಕ್ಸ್ ಖರೀದಿಗೆ 132 ಕೋಟಿ ಹಣ ಬಿಡುಗಡೆ ಮಾಡಿತ್ತು. 2023-24 ನೇ ಸಾಲಿಗೆ 125 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಅಂದರೆ 7 ಕೋಟಿ ಹಣ ಕಡಿತ ಮಾಡಿ ಶಾಲೆಗಳಿಗೆ ಶೂ, ಸಾಕ್ಸ್ ಖರೀದಿ ಮಾಡುವಂತೆ ಸುತ್ತೋಲೆ ಹೊರಡಿಸಿದೆ.
ಬಿಜೆಪಿ ಅವಧಿಯಲ್ಲಿ ಶೂಗೆ ನಿಗದಿ ಮಾಡಿದ್ದ ದರವನ್ನೇ ಈ ವರ್ಷವೂ ಸರ್ಕಾರ ಫಿಕ್ಸ್ ಮಾಡಿದೆ. ಕಳೆದ ವರ್ಷದ ರೇಟ್‌ನಲ್ಲಿಯೇ ಶೂ, ಸಾಕ್ಸ್ ಖರೀದಿ ಮಾಡುವಂತೆ ಶಾಲೆಗಳಿಗೆ ಸೂಚನೆ ನೀಡಿದೆ. 2019-20ನೇ ಸಾಲಿನಲ್ಲಿ ಇದ್ದ ದರದಲ್ಲೇ 2023-24ನೇ ಸಾಲಿಗೂ ಶೂ ಖರೀದಿಗೆ ಸರ್ಕಾರದ ಆದೇಶಿಸಿದೆ.
ಯಾವ ತರಗತಿಗೆ ಎಷ್ಟು ದರದ ಶೂ?
1-5ನೇ ತರಗತಿ – 265 ರೂ.
6-8 ನೇ ತರಗತಿ- 295 ರೂ.
9-10 ನೇ ತರಗತಿ- 325 ರೂ.ನಲ್ಲಿ ಖರೀದಿ ಮಾಡಬೇಕು.
ಕಡಿಮೆ ಹಣದಲ್ಲಿ ಗುಣಮಟ್ಟದ ಶೂ ಕೊಡಬೇಕು ಎಂದು ಎಲ್ಲಾ ಶಾಲೆಗಳಿಗೂ ಸರ್ಕಾರ ಸೂಚನೆ ನೀಡಿದೆ. ಸರ್ಕಾರ ನಿಗದಿ ಮಾಡಿರುವ ಹಣದಲ್ಲಿ ಹೆಸರಾಂತ ಕಂಪನಿಗಳ ಶೂ ಕೊಡಬೇಕು ಎಂದು ಅನುದಾನ ಕಡಿತ ಮಾಡಿ ತಿಳಿಸಿದೆ. ಶೂ ಖರೀದಿಗೆ ಹಣ ಸಾಕಾಗದೇ ಹೋದರೆ ಏನು ಮಾಡಬೇಕು ಎಂಬ ಬಗ್ಗೆಯೂ ಸರ್ಕಾರ ಸಲಹೆ ನೀಡಿದೆ.
ಶಿಕ್ಷಕರು ಹಾಗೂ ಶಾಲಾ ಆಡಳಿತ ಮಂಡಳಿಗಳು ಅನಿವಾರ್ಯವಾಗಿ ಸಂಘ ಸಂಸ್ಥೆಗಳು, ದಾನಿಗಳ ಮೊರೆ ಹೋಗಬೇಕಾಗಿದೆ. ಸರ್ಕಾರದ ಆದೇಶದಿಂದ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಕಂಗಾಲಾಗಿದ್ದಾರೆ.