ಗೃಹಲಕ್ಷ್ಮೀ ಯೋಜನೆಗಾಗಿ ಇತರ ಪಿಂಚಣಿಗಳನ್ನು ಕಡಿತ ಮಾಡುವುದಿಲ್ಲ ಎಂದು ಕಂದಾಯ ಇಲಾಖೆ ಸಚಿವ ಕೃಷ್ಣ ಭೈರೇಗೌಡ ಸ್ಪಷ್ಟಪಡಿಸಿದ್ದಾರೆ.

ಗೃಹಲಕ್ಷ್ಮೀ ಯೋಜನೆ ಕಾರಣಕ್ಕೆ ಇತರೆ ಪಿಂಚಣಿಗಳನ್ನು ಕಡಿತ ಮಾಡುತ್ತಾ ಸರ್ಕಾರ? ಸಚಿವ ಕೃಷ್ಣ ಭೈರೇಗೌಡ ಸ್ಪಷ್ಟನೆ ಇಲ್ಲಿದೆ

ಸಚಿವ ಕೃಷ್ಣ ಭೈರೇಗೌಡ

ಬೆಂಗಳೂರು: ಕರ್ನಾಟಕ ಕಾಂಗ್ರೆಸ್​ ಸರ್ಕಾರದ ಗ್ಯಾರಂಟಿಗಳ ಪೈಕಿ ಒಂದಾಗಿರುವ ಗೃಹಲಕ್ಷ್ಮೀ ಯೋಜನೆಗೆ (Gruha Lakshmi Scheme) ಅರ್ಜಿ ಸಲ್ಲಿಕೆ ಪ್ರಕ್ರಿಯೆ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಯೋಜನೆಯಡಿ ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್​​​ದಾರ ಕುಟುಂಬಗಳ ಯಜಮಾನಿಗೆ ಪ್ರತಿ ತಿಂಗಳು 2,000 ರೂ. ನೀಡುವುದಾಗಿ ಸರ್ಕಾರ ಘೋಷಿಸಿದೆ. ಈ ಯೋಜನೆ ನೀಡುವ ಮಹಿಳೆಯರ ಇತರ ಪಿಂಚಣಿಗಳನ್ನು ಸರ್ಕಾರ ಕಡಿತಮಾಡಬಹುದು ಎಂಬ ಆತಂಕ ಜನರಲ್ಲಿ ಮೂಡಿತ್ತು. ಈ ಕುರಿತು ವದಂತಿಗಳೂ ಹಬ್ಬಿದ್ದವು. ಈ ವಿಚಾರವಾಗಿ ಇದೀಗ ಸರ್ಕಾರ ಸ್ಪಷ್ಟನೆ ನೀಡಿದೆ.

ಗೃಹಲಕ್ಷ್ಮೀ ಯೋಜನೆಗಾಗಿ ಇತರ ಪಿಂಚಣಿಗಳನ್ನು ಕಡಿತ ಮಾಡುವುದಿಲ್ಲ ಎಂದು ಕಂದಾಯ ಇಲಾಖೆ ಸಚಿವ ಕೃಷ್ಣ ಭೈರೇಗೌಡ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇಲಾಖೆ ವ್ಯಾಪ್ತಿಯಲ್ಲಿ ಹಲವು ಪಿಂಚಣಿ ಯೋಜನೆಗಳು ಇವೆ. ವಿಧವೆಯರು, ವೃದ್ಧರು, ಅಂಗವಿಕಲರು, ತೃತೀಯಲಿಂಗಿಗಳು ಸೇರಿ 78 ಲಕ್ಷ ಜನರಿಗೆ ಪ್ರತಿವರ್ಷ ಸರ್ಕಾರದಿಂದ ಪಿಂಚಣಿ ಲಭಿಸುತ್ತಿದೆ. ಗೃಹಲಕ್ಷ್ಮೀ ಯೋಜನೆ ಲಾಭ ಪಡೆಯುವವರಿಗೆ ಈ ಮೊದಲೇ ನೀಡುತ್ತಿರುವ ಪಿಂಚಣಿ ಕಡಿತ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ವಿಧವಾ ವೇತನ ಸೇರಿದಂತೆ ಸರ್ಕಾರದಿಂದ ಬರುತ್ತಿರುವ ಯಾವುದೇ ಪಿಂಚಣಿ ಮೊಟಕುಗೊಳಿಸುವುದಿಲ್ಲ. ಇವುಗಳ ಜತೆಗೆ ಹೆಚ್ಚುವರಿಯಾಗಿ ಗೃಹಲಕ್ಷ್ಮೀ ಯೋಜನೆಯ ಹಣವೂ ಲಭಿಸಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ಹಂಚಿಕೆಯಾದ ಸರ್ಕಾರಿ ಭೂಮಿಗಳ ಪರಿಶೀಲನೆ’

ಕಳೆದ 6 ತಿಂಗಳಲ್ಲಿ ಹಂಚಿಕೆಯಾದ ಸರ್ಕಾರಿ ಭೂಮಿಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಕೃಷ್ಣ ಭೈರೇಗೌಡ ಹೇಳಿದ್ದಾರೆ. 6 ತಿಂಗಳ ಹಿಂದೆ ತರಾತುರಿಯಲ್ಲಿ ಸರ್ಕಾರಿ ಭೂಮಿ ಹಂಚಿಕೆ ಮಾಡಲಾಗಿದೆ. ಯಾರಿಗೆಲ್ಲ ಭೂಮಿ ಹಂಚಲಾಗಿದೆ ಎಂಬುದರ ಬಗ್ಗೆ ಪರಿಶೀಲಿಸುತ್ತೇವೆ. ಮುಖ್ಯಮಂತ್ರಿ ಸೂಚನೆ ಮೇರೆಗೆ ಭೂಮಿ ಹಂಚಿಕೆ ಬಗ್ಗೆ ಮರುಪರಿಶೀಲನೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

ಕೆಐಎಡಿಯಿಂದ ಚಾಣಕ್ಯ ವಿವಿಗೆ ಭೂಮಿ ಮಂಜೂರು ಮಾಡಲಾಗಿದೆ. ಜಮೀನು ಮಂಜೂರು ಬಗ್ಗೆ ಕಂದಾಯ ಇಲಾಖೆ ಪರಿಶೀಲಿಸಲಿದೆ. ಡಿಸೆಂಬರ್​ ಬಳಿಕ ಮಂಜೂರಾದ ಜಮೀನುಗಳ ಬಗ್ಗೆ ಪರಿಶೀಲಿಸುತ್ತೇವೆ. ತರಾತುರಿಯ ತೀರ್ಮಾನಗಳ ಮರುಪರಿಶೀಲನೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Latest News