ಅಪ್ಪ ಹಾಗೂ ಅಮ್ಮನಿಂದಲೇ ನಾಲ್ವರು ಕಂದಮ್ಮಗಳು ಹತ್ಯೆಯಾದ ಪ್ರತ್ಯೇಕ ಘಟನೆ ಕರ್ನಾಟಕದ ಕೋಲಾರ ಹಾಗೂ ಮಂಡ್ಯದಲ್ಲಿ ನಡೆದಿವೆ.

ಬೆಂಗಳೂರು: ಅಪ್ಪ ಹಾಗೂ ಅಮ್ಮನಿಂದಲೇ ನಾಲ್ವರು ಕಂದಮ್ಮಗಳು ಹತ್ಯೆಯಾದ ಪ್ರತ್ಯೇಕ ಘಟನೆ ಕರ್ನಾಟಕದ ಕೋಲಾರ (Kolar) ಹಾಗೂ ಮಂಡ್ಯದಲ್ಲಿ (Mandya) ನಡೆದಿವೆ. ಮಹಿಳೆಯೊಬ್ಬರು ತನ್ನಿಬ್ಬರೂ ಮಕ್ಕಳನ್ನು ಕೊಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ಎರಡು ದಿನ ಹಿಂದೆ ಕೋಲಾರದಲ್ಲಿ ನಡೆದಿದ್ದು ಮತ್ತೊಂದೆಡೆ, ತಂದೆಯೇ ತನ್ನ ಇಬ್ಬರು ಪುಟ್ಟ ಮಕ್ಕಳನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳನ್ನು ಕೊಲೆ ಮಾಡಿ ನಂತರ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರದ ಉಪ್ಪಕುಂಟೆ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಸುಗುಣಾ (35) ಎಂಬಾಕೆ ತನ್ನ ಪತಿ ಮುರಳಿಯೊಂದಿಗೆ ಜಗಳವಾಡಿದ ನಂತರ ಮಕ್ಕಳಾದ ಪ್ರೀತಂ ಗೌಡ (12) ಮತ್ತು ನಿಶಿತಾ (5) ಅವರನ್ನು ಕೊಲೆ ಮಾಡಿದ್ದಾರೆ. ನಂತರ ಡೆತ್​​ನೋಟು ಬರೆದು ಸಹೋದರನಿಗೆ ಕಳುಹಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸುಗುಣ ಅವರ ಸಂಬಂಧಿಕರ ದೂರಿನ ಮೇರೆಗೆ ಪೊಲೀಸರು ಆಕೆಯ ಪತಿ ಮುರಳಿಯನ್ನು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ. ಸುಗುಣ ಮತ್ತು ಮುರಳಿ 13 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಇವರಿಬ್ಬರೂ ಸಾರಿಗೆ ಸಂಸ್ಥೆ ನೌಕರರು.

ಮತ್ತೊಂದೆಡೆ, ಶ್ರೀಕಾಂತ್ ಎಂಬ ವ್ಯಕ್ತಿ ತನ್ನ ಪತ್ನಿ ಲಕ್ಷ್ಮೀಗೆ ಗಂಭೀರವಾಗಿ ಹಲ್ಲೆ ಮಾಡಿದ್ದಲ್ಲದೆ, 3 ವರ್ಷದ ಆದಿತ್ಯ ಹಾಗೂ 4 ವರ್ಷದ ಅಮೂಲ್ಯ ಎಂಬ ಇಬ್ಬರು ಹೆಣ್ಣು ಮಕ್ಕಳನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ ಘಟನೆ ಗುರುವಾರ ಮುಂಜಾನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಮರಳಗಾಲ ಗ್ರಾಮದಲ್ಲಿ ನಡೆದಿದೆ.

ಈ ಕುಟುಂಬ ಕಲಬುರಗಿ ಜಿಲ್ಲೆ ಜೇವರ್ಗಿಯಿಂದ ಬಂದು ಆಲೆಮನೆಯಲ್ಲಿ ಕೆಲಸ ಮಾಡುತ್ತಿತ್ತು. ಮುಂಜಾನೆ 4 ಗಂಟೆಯ ವೇಳೆ ಮಕ್ಕಳನ್ನು ಕೊಂದು ಪತ್ನಿ ಮೇಲೆ ಹಲ್ಲೆ ನಡೆಸಿ ಶ್ರೀಕಾಂತ್ ಪರಾರಿಯಾಗಿದ್ದಾರೆ. ಗಂಭೀರ ಗಾಯಗೊಂಡ ಲಕ್ಷ್ಮೀಯನ್ನು ಮೈಸೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *