ಉಚಿತ ವಿದ್ಯುತ್ ಘೋಷಣೆ ಬೆನ್ನಲ್ಲೇ ವ್ಯಾಪಾರಸ್ಥರಿಗೆ ಶಾಕ್ : ದರ ಏರಿಕೆ ಖಂಡಿಸಿ ಅಘೋಷಿತ ಬಂದ್

ಉಚಿತ ವಿದ್ಯುತ್ ಘೋಷಣೆ ಬೆನ್ನಲ್ಲೇ ವ್ಯಾಪಾರಸ್ಥರಿಗೆ ಶಾಕ್ : ದರ ಏರಿಕೆ ಖಂಡಿಸಿ ಅಘೋಷಿತ ಬಂದ್

ಬಳ್ಳಾರಿ : ಉಚಿತ ವಿದ್ಯುತ್‌ ಘೋಷಣೆ ಬೆನ್ನಲ್ಲೇ ವಿದ್ಯುತ್‌ ದರ ಏರಿಕೆ ಖಂಡಿಸಿ ಬಳ್ಳಾರಿಯಲ್ಲಿ ವ್ಯಾಪಾರಸ್ಥರು ಅಘೋಷಿತ ಬಂದ್‌ ಮಾಡಿದ್ದಾರೆ.

ರಾಜ್ಯ ಸರ್ಕಾರದಿಂದ ಷರತ್ತುಗಳೊಂದಿಗೆ 200 ಯೂನಿಟ್‌ ಉಚಿತ ವಿದ್ಯುತ್‌ ಘೋಷಣೆಯಾದ ಬೆನ್ನಲ್ಲೇ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಕಳೆದ ಮೇ 12 ರಂದು ವಿದ್ಯುತ್ ದರವನ್ನು ಪ್ರತಿ ಯೂನಿಟ್ ಗೆ 70 ಪೈಸೆ ಏರಿಕೆ ಮಾಡಿದೆ.

ಇದರಿಂದ ರೊಚ್ಚಿಗೆದ್ದ ವರ್ತಕರು ಬೇಕಾಬಿಟ್ಟಿ ದರ ಏರಿಕೆ ಖಂಡಿಸಿ ಅಘೋಷಿತ ಬಂದ್‌ಗೆ ಮುಂದಾಗಿದ್ದಾರೆ. ಬಳ್ಳಾರಿಯ ಕಾಳಂಮ್ಮಾ ಸ್ಟ್ರೀಟ್‌ ಸಂಪೂರ್ಣವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಿ ವರ್ತಕರು ಪ್ರತಿಭಟನೆ ನಡೆಸಿದ್ದಾರೆ.

ವಿದ್ಯುತ್‌ ಬಿಲ್‌ ಏರಿಕೆ ಸಂಬಂಧ ಬೆಸ್ಕಾಂ ನಿನ್ನೆಯಷ್ಟೇ ಸ್ಪಷ್ಟನೆ ನೀಡಿತ್ತು. ವಿದ್ಯುತ್ ದರ ಪರಿಷ್ಕರಣೆ ಆದೇಶ ಏಪ್ರಿಲ್ ನಿಂದ ಪೂರ್ವನ್ವಯವಾಗುವುದರಿಂದ ಬಿಲ್ ನಲ್ಲಿ ಏಪ್ರಿಲ್ ತಿಂಗಳ ಹಿಂಬಾಕಿಯನ್ನು ನೀಡಲಾಗಿದೆ. ಹಾಗೆಯೇ ಕೆಇಆರ್‌ಸಿ ಆದೇಶದ ಪ್ರಕಾರ ಎರಡು ಶ್ರೇಣಿಗಳಲ್ಲಿ ವಿದ್ಯುತ್ ಶುಲ್ಕವನ್ನು ಸಂಗ್ರಹಿಸಲಾಗುತ್ತಿದೆ. ಗ್ರಾಹಕರು ಬಳಸುವ ಮೊದಲ 100 ಯೂನಿಟ್‌ ವಿದ್ಯುತ್‌ಗೆ ಪ್ರತಿ ಯೂನಿಟ್‌ ದರ 4.75 ರೂ. ವಿಧಿಸಲಾಗಿದೆ. 100 ಯೂನಿಟ್ ಮೀರಿದರೆ ಬಳಸಿದ ಅಷ್ಟೂ ಯೂನಿಟ್‌ಗೆ 2ನೇ ಶ್ರೇಣಿ ದರ ಪ್ರತಿ ಯೂನಿಟ್‌ಗೆ 7 ರೂ. ಅನ್ವಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಈ ಮೊದಲು ಮೂರು ಶ್ರೇಣಿ ದರಗಳಲ್ಲಿ ಸಂಗ್ರಹಿಸಲಾಗುತ್ತಿತ್ತು. ಮೊದಲ 50 ಯೂನಿಟ್ ಗೆ 4.15 ರೂ., ನಂತರದ 50 ಯೂನಿಟ್ ಗೆ 5.6 ರೂ. ಹಾಗೂ 100 ಯೂನಿಟ್ ಮೀರಿದರೆ 7.15 ರೂ. ಸಂಗ್ರಹಿಸಲಾಗುತ್ತಿತ್ತು. ಇದೀಗ ಎರಡು ಶ್ರೇಣಿ ದರಗಳಲ್ಲಿ ಸಂಗ್ರಹಿಸಲು ಕೆಇಆರ್‌ಸಿ ಮೇ 12 ರಂದು ಹೊರಡಿಸಿರುವ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ ಎಂದು ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದರು.

Leave a Reply

Your email address will not be published. Required fields are marked *