Splitting Of HAL Stocks: ಸರ್ಕಾರಿ ಸ್ವಾಮ್ಯದ ಎಚ್​ಎಎಲ್ ಸಂಸ್ಥೆ ತನ್ನ ಈಕ್ವಿಟಿ ಷೇರುಗಳ ವಿಭಜನೆ ಮಾಡುವ ಚಿಂತನೆ ಇದೆ. ಜೂನ್ 27ರಂದು ಸಭೆ ನಡೆಯಲಿದ್ದು, ಅಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದು ತನ್ನ ಎಕ್ಸ್​ಚೇಂಜ್ ಫೈಲಿಂಗ್​ನಲ್ಲಿ ತಿಳಿಸಿತ್ತು. ಇದಾದ ಬಳಿಕ ಅದರ ಷೇರುಗಳಿಗೆ ಬೇಡಿಕೆ ಹೆಚ್ಚಾಗಿದೆ.

HAL: ಷೇರುವಿಭಜನೆ ಅಂತ ಹೇಳಿದ್ದೇ ತಡ ಎಚ್​ಎಎಲ್ ಷೇರಿಗೆ ಭರ್ಜರಿ ಬೇಡಿಕೆ; ಏನಿದು ಷೇರುವಿಭಜನೆ? ಯಾರಿಗೆ ಲಾಭ?

ಬೆಂಗಳೂರು: ಹಿಂದೂಸ್ತಾನ್ ಏರೋನಾಟಿಕ್ಸ್ ಲಿ ಸಂಸ್ಥೆ (HAL) ತನ್ನ ಷೇರಿನ ವಿಭಜನೆ ಮಾಡಲು (Stock Split) ಯೋಚಿಸುತ್ತಿರುವುದಾಗಿ ಹೇಳಿದ್ದೇ ಬಂತು, ಅದರ ಷೇರುಗಳಿಗೆ ಬೇಡಿಕೆ ಇನ್ನಷ್ಟು ಹೆಚ್ಚಾದಂತಿದೆ. ಶುಕ್ರವಾರದ ಬೆಳಗಿನ ವಹಿವಾಟಿನಲ್ಲಿ ಎಚ್​ಎಎಲ್ ಷೇರುಬೆಲೆ ಶೇ. 115 ರೂಗಳಷ್ಟು ಏರಿದೆ. ಶೇ. 3ಕ್ಕಿಂತ ಅಧಿಕ ಬೆಲೆ ಹೆಚ್ಚಳವಾಗಿದೆ. ಶುಕ್ರವಾರ ಮಧ್ಯಾಹ್ನ ಹೆಚ್​ಎಎಲ್​ನ ಒಂದು ಷೇರು 3,643 ರುಪಾಯಿ ಬೆಲೆ ಹೊಂದಿತ್ತು. ಬೆಳಗ್ಗೆಯಿಂದಲೂ ಇದರ ಷೇರುಗಳ ವಹಿವಾಟು ಮಿಂಚಿನ ಗತಿಯಲ್ಲಿ ನಡೆಯುತ್ತಿದೆ. ಹೆಚ್​ಎಎಲ್​ನ ಷೇರು ಗರಿಷ್ಠ ಮಟ್ಟಕ್ಕೆ ಏರಿರುವುದು ಗಮನಾರ್ಹ.

ಸರ್ಕಾರಿ ಸ್ವಾಮ್ಯದ ಎಚ್​ಎಎಲ್ ಸಂಸ್ಥೆ 10 ರೂ ಫೇಸ್ ವ್ಯಾಲ್ಯೂ ಇರುವ ಈಕ್ವಿಟಿ ಷೇರುಗಳ ವಿಭಜನೆ ಮಾಡುವ ಚಿಂತನೆ ಇದೆ. ಜೂನ್ 27ರಂದು ಸಭೆ ನಡೆಯಲಿದ್ದು, ಅಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದು ತನ್ನ ಎಕ್ಸ್​ಚೇಂಜ್ ಫೈಲಿಂಗ್​ನಲ್ಲಿ ತಿಳಿಸಿತ್ತು. ಆದರೆ, ಒಂದು ಷೇರು ಎಷ್ಟು ವಿಭಜನೆ ಆಗುತ್ತದೆ ಎಂದು ನಿರ್ದಿಷ್ಟವಾಗಿ ಹೇಳಿಲ್ಲ.

ದಾಖಲೆ ಮಟ್ಟಕ್ಕೆ ಏರಿದ ಎಚ್​ಎಎಲ್ ಷೇರು ಬೆಲೆ?

ಇತ್ತೀಚಿನ ಕೆಲ ವರ್ಷಗಳಿಂದ ಎಚ್​ಎಎಲ್ ಸಂಸ್ಥೆ ಒಳ್ಳೆಯ ಲಾಭದ ಓಟದಲ್ಲಿದೆ. ಅದರ ಪರಿಣಾಮವಾಗಿ ಷೇರುಗಳೂ ಒಳ್ಳೆಯ ಬೆಲೆ ಕುದುರಿಸಿಕೊಂಡಿವೆ. 2020ರ ಮಾರ್ಚ್ ತಿಂಗಳಲ್ಲಿ ಎಚ್​ಎಎಲ್​ನ ಷೇರು ಬೆಲೆ ಕೇವಲ 448 ರು ಇತ್ತು. ಅದಕ್ಕೆ ಹೋಲಿಸಿದರೆ ಷೇರುಬೆಲೆ ಶೇ. 700ಕ್ಕಿಂತಲೂ ಹೆಚ್ಚು ಬೆಲೆ ಹೆಚ್ಚಿದೆ. ಕೇವಲ 3 ವರ್ಷದಲ್ಲಿ ಅದರ ಷೇರುಬೆಲೆ 7 ಪಟ್ಟು ಹೆಚ್ಚಳವಾಗಿರುವುದು ಗಮನಾರ್ಹ.

ಷೇರುವಿಭಜನೆ ಆಗುತ್ತಿರುವುದು ಯಾಕೆ?

ಷೇರುಪೇಟೆಯಲ್ಲಿ ಹಲವು ಕಂಪನಿಗಳು ತಮ್ಮ ಷೇರನ್ನು ಒಂದಕ್ಕೆ ಎರಡಾಗಿಯೋ, ಮೂರಾಗಿಯೋ ಅಥವಾ ಇನ್ನೂ ಹೆಚ್ಚಿನ ಷೇರುಗಳಾಗಿಯೋ ವಿಭಜನೆ ಮಾಡುವುದನ್ನು ನೋಡಿದ್ದೇವೆ. ಇದರಿಂದ ಕಂಪನಿಯ ಷೇರುಗಳ ಸಂಖ್ಯೆ ಹೆಚ್ಚುತ್ತದೆ. ಒಟ್ಟಾರೆ ಷೇರಿನ ಮೌಲ್ಯ ಅಷ್ಟೇ ಇರುತ್ತದಾದರೂ ಪ್ರತೀ ಷೇರಿನ ಬೆಲೆ ಕಡಿಮೆ ಆಗುತ್ತದೆ. ಇದರಿಂದ ಷೇರುವಹಿವಾಟು ಹೆಚ್ಚಿನ ಸಂಖ್ಯೆಯಲ್ಲಿ ಆಗುತ್ತದೆ. ಹೂಡಿಕೆದಾರರಿಗೆ ಷೇರು ಖರೀದಿಸಲೂ ಸುಲಭವಾಗುತ್ತದೆ ಎಂಬ ಕಾರಣಕ್ಕೆ ಕಂಪನಿಗಳು ಷೇರು ವಿಭಜನೆ ಕಾರ್ಯ ಮಾಡುತ್ತವೆ. ಹಾಗೆಯೆ, ತನ್ನ ಷೇರು ಬೆಲೆ ಇನ್ನೂ ಹೆಚ್ಚಬಹುದು ಎಂಬ ಸುಳಿವನ್ನು ನೀಡಲೂ ಎಚ್​ಎಎಲ್ ಈ ತಂತ್ರ ಅನುಸರಿಸಬಹುದು.

ಉದಾಹರಣೆಗೆ, ಒಂದು ಕಂಪನಿ ಷೇರುಪೇಟೆಯಲ್ಲಿ ಒಟ್ಟು 10 ಕೋಟಿಯಷ್ಟು ಷೇರುಗಳನ್ನು ಹೊಂದಿದೆ ಎಂದಿಟ್ಟುಕೊಳ್ಳಿ. ಒಂದು ಷೇರಿನ ಬೆಲೆ 5,000 ರೂ ಇದೆ ಎಂದು ಭಾವಿಸೋಣ. ಅದರ ಮಾರುಕಟ್ಟೆ ಮೌಲ್ಯ 5,000 ಕೋಟಿ ರೂ ಆಗಿರುತ್ತದೆ. ಈಗ ಒಂದು ಷೇರನ್ನು ಎರಡಾಗಿ ವಿಭಜಿಸಿದಾಗ 5,000 ರೂ ಇರುವ ಪ್ರತೀ ಷೇರು ಈಗ ತಲಾ 2,500 ರೂ ಮೌಲ್ಯದ ಎರಡು ಷೇರುಗಳಾಗುತ್ತವೆ. ಇದರಿಂದ ಒಟ್ಟಾರೆ ಷೇರುಗಳ ಸಂಖ್ಯೆ 20 ಕೋಟಿ ಆಗುತ್ತದೆ. ಅದರ ಮಾರುಕಟ್ಟೆ ಮೌಲ್ಯ 5,000 ಕೋಟಿ ರೂನಲ್ಲೇ ಇರುತ್ತದೆ. ವಿಭಜನೆಗೆ ಮುನ್ನ 1,000 ಷೇರುಗಳನ್ನು ಹೊಂದಿರುವವರು ಈಗ 2,000 ಷೇರುಗಳ ಒಡೆಯರಾಗುತ್ತಾರೆ. ಆದರೆ, ಮೌಲ್ಯ ಮಾತ್ರ ಅಷ್ಟೇ ಇರುತ್ತದೆ.

ಎಚ್​ಎಎಲ್ ಸಂಸ್ಥೆ ಷೇರುಪೇಟೆಯಲ್ಲಿ ಹೊಂದಿರುವ ಒಟ್ಟು ಷೇರುಗಳ ಸಂಖ್ಯೆ 33.44 ಕೋಟಿ. ಒಟ್ಟು ಷೇರು ಸಂಪತ್ತು 1.21 ಲಕ್ಷ ಕೋಟಿ ರೂ. ಇದರಲ್ಲಿ ಶೇ. 75ರಷ್ಟು ಪಾಲು ಸರ್ಕಾರದ್ದಾಗಿದೆ.

Leave a Reply

Your email address will not be published. Required fields are marked *

Latest News