Bharat Infra Exports & Imports: ಎಸ್​ಬಿಐಗೆ 113.38 ಕೋಟಿ ರೂ ಸಾಲ ಕೊಡದೇ ಬಾಕಿ ಉಳಿಸಿಕೊಂಡಿರುವ ಹಾಗೂ ಹಣಕಾಸು ಅಕ್ರಮ ಎಸಗಿದ ಆರೋಪ ಎದುರಿಸುತ್ತಿರುವ ಭಾರತ್ ಇನ್​ಫ್ರಾ ಸಂಸ್ಥೆಯ ವಿವಿಧ ಕಚೇರಿಗಳ ಮೇಲೆ ಇಡಿ ದಾಳಿ ನಡೆಸಿದೆ.

ED Raid: ಎಸ್​ಬಿಐಗೆ 113 ಕೋಟಿ ರೂ ಸಾಲ ವಂಚನೆ: ಬೆಂಗಳೂರಿನ ಭಾರತ್ ಇನ್​ಫ್ರಾ ಕಂಪನಿ ಮೇಲೆ ಇಡಿ ರೇಡ್

ಇಡಿ ರೇಡ್

ಬೆಂಗಳೂರು: ಭಾರತ್ ಇನ್​ಫ್ರಾ ಎಕ್ಸ್​ಪೋರ್ಟ್ಸ್ ಅಂಡ್ ಇಂಪೋರ್ಟ್ಸ್ ಸಂಸ್ಥೆಯ (Bharat Infra Exports & Imports) ಬೆಂಗಳೂರು ಹಾಗೂ ದಾವಣಗೆರೆ ಕಚೇರಿಗಳಲ್ಲಿ ಜಾರಿ ನಿರ್ದೇಶನಾಲಯ ದಾಳಿ ಮಾಡಿ (ED Raid) ದಾಖಲೆಗಳನ್ನು ಪರಿಶೀಲಿಸಿರುವ ಸಂಗತಿ ಬೆಳಕಿಗೆ ಬಂದಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ 113.38 ಕೋಟಿ ರೂ ಸಾಲ ಬಾಕಿ ಉಳಿಸಿಕೊಂಡ ಹಾಗೂ ಸಾಲದ ಹಣಕ್ಕಾಗಿ ಸುಳ್ಳು ದಾಖಲೆಗಳನ್ನು ಕೊಟ್ಟ ಆರೋಪ ಭಾರತ್ ಇನ್​ಫ್ರಾ ಮೇಲಿದೆ. ಈ ಪ್ರಕರಣದ ಮೇಲೆ ಇಡಿ ಅಧಿಕಾರಿಗಳ ತಂಡಗಳು ಜೂನ್ 5ರಂದು ರೇಡ್ ನಡೆಸಿರುವುದು ತಿಳಿದುಬಂದಿದೆ. ಜೂನ್ 7ರಂದು ಇಡಿ ಈ ರೇಡ್ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದೆ.

ಬೆಂಗಳೂರು ಮತ್ತು ದಾವಣಗೆರೆಯ ಭಾರತ್ ಇನ್​ಫ್ರಾ ಸಂಸ್ಥೆಯ ಕಚೇರಿಗಳ ಮೇಲೆ ನಡೆದ ದಾಳಿಗಳಲ್ಲಿ 100 ಕೋಟಿ ರೂ ಮೌಲ್ಯದ ಚಿರಾಸ್ತಿಗಳನ್ನು ಇಡಿ ಅಧಿಕಾರಿಗಳು ಜಫ್ತಿ ಮಾಡಿಕೊಂಡಿವೆ. ಈ ವೇಳೆ 14.5 ಲಕ್ಷ ರೂ ನಗದು ಹಣ, ಹಲವು ದಾಖಲೆಗಳು, ಡಿಜಿಟಲ್ ಸಾಧನಗಳು ಹಾಗೂ ಸಂಬಂಧಿತ ಸಂಸ್ಥೆಗಳ ಬ್ಯಾಂಕ್ ಖಾತೆಗಳನ್ನೂ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ ಎಂದು ಇಡಿ ಮಾಹಿತಿ ನೀಡಿದೆ.

ಎಸ್​ಬಿಐನ ಬೆಂಗಳೂರು ಸಿಟಿ ಶಾಖೆಯಿಂದ ಭಾರತ್ ಇನ್​ಫ್ರಾ ಸಂಸ್ಥೆ ವಿವಿಧ ರೂಪದಲ್ಲಿ ಸಾಲ ಪಡೆದಿತ್ತು. ಈ ಸಾಲ ತೀರದೇ ಹಾಗೆ ಉಳಿದಿದ್ದರಿಂದ 2017ರ ಜನವರಿ 17ರಂದು ಎಸ್​ಬಿಐ ಈ ಸಾಲವನ್ನು ಅನುತ್ಪಾದಕ ಸಾಲ (ಎನ್​ಪಿಎ) ಎಂದು ವರ್ಗೀಕರಿಸಿತ್ತು. ಆಗ ಸಾಲ ಬಾಕಿ ಉಳಿದದ್ದು ಒಟ್ಟು 113.38 ಕೋಟಿ ರೂ.

ಸಾಲ ದುರುಪಯೋಗ ಮಾಡಿದ್ದ ಭಾರತ್ ಇನ್​ಫ್ರಾ

ಎಸ್​ಬಿಐನಿಂದ ಪಡೆದ ಸಾಲದ ಹಣವನ್ನು ಭಾರತ್ ಇನ್​ಫ್ರಾ ದುರುಪಯೋಗಿಸಿಕೊಂಡಿದ್ದು ಇಡಿ ತನಿಖೆಯಿಂದ ತಿಳಿದುಬಂದಿದೆ. ಅಂದರೆ ಈ ಸಾಲದ ಹಣವನ್ನು ಬೇರೆ ವ್ಯಕ್ತಿ ಮತ್ತು ಸಂಸ್ಥೆಗಳಿಗೆ ವರ್ಗಾವಣೆ ಮಾಡಲಾಗಿತ್ತು. ಬ್ಯಾಂಕಿಗೆ ನಕಲಿ ಇನ್​ವಾಯ್ಸ್ ಮತ್ತು ದಾಖಲೆಗಳನ್ನು ನೀಡಿ ದಾರಿತಪ್ಪಿಸಲಾಗಿತ್ತು.

ಆರಾಧ್ಯ ವಯರ್ ರೋಪ್ಸ್ ಸಂಸ್ಥೆಗೆ ಎಸ್​ಬಿಐ ನೀಡಿದ್ದ 10 ಎಲ್​ಸಿ (ಲೆಟರ್ ಆಫ್ ಕ್ರೆಡಿಟ್) ಅನ್ನು ಭಾರತ್ ಇನ್​ಫ್ರಾ ಸಂಸ್ಥೆ ಬೇರೆ ಬೇರೆ ಸಂಸ್ಥೆಗಳ ಹೆಸರಿನ ಬ್ಯಾಂಕ್ ಖಾತೆಗಳ ಮೂಲಕ ಅಕ್ರಮವಾಗಿ ವರ್ಗಾಯಿಸಿಕೊಂಡಿತ್ತು. ಇದರ ಮೊತ್ತ 101.18 ಕೋಟಿ ರೂ ಎನ್ನಲಾಗಿದೆ. ಯಾವುದೇ ಸರಕು ಸಾಗಣಿ ಆಗದೇ ಇದ್ದರೂ ಟ್ರಾನ್ಸ್​ಪೋರ್ಟ್ ಕಾಂಟ್ರಾಕ್ಟರುಗಳು ಮತ್ತು ಏಜೆಂಟ್​ಗಳಿಂದ ನಕಲಿ ವಾಹನ ದಾಖಲೆ ಮತ್ತು ಇನ್​ವಾಯ್ಸ್​ಗಳನ್ನು ಪಡೆದು ಈ ಅಕ್ರಮ ಎಸಗಲಾಗಿದ್ದು ಇಡಿ ತನಿಖೆ ವೇಳೆ ಬಹಿರಂಗವಾಗಿತ್ತು.

ಜಾರಿ ನಿರ್ದೇಶನಾಲಯ ತನ್ನ ತನಿಖೆಯನ್ನು ಇನ್ನೂ ಮುಂದುವರಿಸುತ್ತಿದೆ.

Leave a Reply

Your email address will not be published. Required fields are marked *