ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಅಟ್ಟಾಡಿಸಿ ಮಚ್ಚು, ಕಬ್ಬಿಣದ ರಾಡ್​ನಿಂದ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಹಾಸನ ಎಸ್​ಪಿ ಹರಿರಾಮ್ ಶಂಕರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಮಹಿಳೆಯ ಆರೋಗ್ಯ ವಿಚಾರಿಸಿದರು.

ಹಾಸನ: ತನ್ನ ಪತ್ನಿಯನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಹಲ್ಲೆ (Assault) ನಡೆಸಿದ ಪ್ರಕರಣ ಸಂಬಂಧ ಆರೋಪಿ ಪತಿ ಬಂಧನಕ್ಕೆ ಶೋಧಕಾರ್ಯ ಮುಂದುವರಿದಿದೆ ಎಂದು ಜಿಲ್ಲಾ ಎಸ್​ಪಿ (Hassan SP) ಹರಿರಾಮ್ ಶಂಕರ್ ಹೇಳಿದ್ದಾರೆ. ಪತಿಯಿಂದ ಹಲ್ಲೆಗೊಳಗಾದ ಮಹಿಳೆಯ ಆರೋಗ್ಯ ವಿಚಾರಿಸಿದ ನಂತರ ಆಸ್ಪತ್ರೆ ಬಳಿ ಮಾತನಾಡಿದ ಅವರು, ಪ್ರಕರಣ ಸಂಬಂಧ ಆರೋಪಿಗೆ ಮಚ್ಚು ನೀಡಿದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದರು.

ಶ್ರೀನಿವಾಸ ಮತ್ತು ಸವಿತಾ ಎಂಬವರು 18 ವರ್ಷಗಳ ಹಿಂದೆ ಮದುವೆಯಾಗಿದ್ದರು. ಸದ್ಯ ಪತಿಯಿಂದ ವಿಚ್ಛೇದನ ಪಡೆಯಲು ಸವಿತಾ ಕಾನೂನು ಹೋರಾಟ ನಡೆಸುತ್ತಿದ್ದು, 2 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಅಲ್ಲದೆ, ಪತಿಯ ಆಸ್ತಿ ವಿಭಾಗಕ್ಕಾಗಿ ಸವಿತಾ ಕೇಸ್ ಮಾಡಿದ್ದಾಳೆ. ಆದರೆ ನಿನ್ನೆ (ಜೂನ್ 24) ನಿವೇಶನ ಮಾರಾಟದ ವಿಚಾರವಾಗಿ ಸವಿತಾಳ ಜೊತೆ ಶ್ರೀನಿವಾಸ್ ಜಗಳ ಮಾಡಿದ್ದು, ರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಮಚ್ಚು ಮತ್ತು ರಾಡ್​ನಿಂದ ಹಲ್ಲೆ ನಡೆಸಿದ್ದಾನೆ.

ಕೈ ಹಾಗೂ ದೇಹದ ಹಲವೆಡೆ ಗಂಭೀರವಾಗಿ ಗಾಯಗೊಂಡ ಸವಿತಾಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಜೀವಕ್ಕೇನು ಅಪಾಯ ಇಲ್ಲ ಎಂದು ಎಸ್​ಪಿ ತಿಳಿಸಿದ್ದಾರೆ. ಪ್ರಕರಣ ಸಂಬಧ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಶ್ರೀನಿವಾಸನನ್ನು ಬಂಧಿಸಲು ಮೂರು ತಂಡ ರಚಿಸಲಾಗಿದೆ. ಆದಷ್ಟು ಬೇಗ ಬಂಧಿಸುತ್ತೇವೆ. ಮಚ್ಚು ನೀಡಿದ್ದ ಆರೋಪಿಯ ಸಹೋದರನನ್ನು ಬಂಧಿಸಲಾಗಿದೆ ಎಂದರು.

Leave a Reply

Your email address will not be published. Required fields are marked *

Latest News