ಹಗಲು ಪೇಂಟಿಂಗ್​​ ವೃತ್ತಿ, ರಾತ್ರಿ ದ್ವಿಚಕ್ರ ವಾಹನ ಕಳ್ಳತನ...ಸಹೋದರರ ಬಂಧನ

ಹಗಲು ಪೇಂಟಿಂಗ್​​ ವೃತ್ತಿ, ರಾತ್ರಿ ದ್ವಿಚಕ್ರ ವಾಹನ ಕಳ್ಳತನ…ಸಹೋದರರ ಬಂಧನ

ಆಂಧ್ರ ಮೂಲದ ಸಹೋದರರಿಬ್ಬರು 2018 ರಿಂದಲೂ ಕಳ್ಳತನದಲ್ಲಿ ಭಾಗಿಯಾಗಿ, ಜೊತೆಗೂಡಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದರು. ಇದೀಗ ಇಬ್ಬರನ್ನು ಬೈಯ್ಯಪ್ಪನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.ಆರೋಪಿಗಳ ಬಂಧನದ ಕುರಿತು ಡಿಸಿಪಿ ಡಾ.ಭೀಮಾಶಂಕರ್ ಗುಳೇದ್ ಹೇಳಿಕೆ

ಬೆಂಗಳೂರು: ದ್ವಿಚಕ್ರ ವಾಹನಗಳ ಹ್ಯಾಂಡಲ್ ಲಾಕ್ ಮುರಿದು ಕದ್ದು, ನಂತರ ಗಾಡಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಇಬ್ಬರು ಕಳ್ಳ ಸಹೋದರರನ್ನು ಬೈಯ್ಯಪ್ಪನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಆಂಧ್ರ ಪ್ರದೇಶ ಮೂಲದ ಉದಯ್ ಕುಮಾರ್ (26) ಹಾಗೂ ಶ್ರೀನಿವಾಸುಲು (23) ಬಂಧಿತ ಸಹೋದರರು. ಬಂಧಿತರಿಂದ 5 ರಾಯಲ್ ಎನ್ ಫೀಲ್ಡ್ ಸೇರಿದಂತೆ 16 ಲಕ್ಷ ಮೌಲ್ಯದ 9 ದ್ವಿಚಕ್ರ ವಾಹನಗಳನ್ನ ವಶಕ್ಕೆ ಪಡೆಯಲಾಗಿದೆ.

ಆಂಧ್ರಪ್ರದೇಶ ಮೂಲದವರಾಗಿರುವ ಆರೋಪಿಗಳು ಕಳೆದ ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ ಪೇಂಟಿಂಗ್​​​​​ ಕೆಲಸ ಮಾಡಿಕೊಂಡಿದ್ದರು. ಆದರೆ ರಾತ್ರಿ ವೇಳೆ ದ್ವಿಚಕ್ರ ವಾಹನಗಳ ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದರು. 2018 ರಿಂದಲೂ ಕಳ್ಳತನದಲ್ಲಿ ಭಾಗಿಯಾಗಿದ್ದ ಆರೋಪಿಗಳು ಕೆ.ಆರ್.ಪುರಂ, ಮಹಾದೇವಪುರ, ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣಾ ವ್ಯಾಪ್ತಿಗಳಲ್ಲಿ ಕಳ್ಳತನ ಮಾಡಿದ್ದರು.

ಬಳಿಕ ಅವುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ, ದಾಖಲೆಗಳನ್ನು ಕೊಡದೇ ವಂಚಿಸುತ್ತಿದ್ದರು. ಸದ್ಯ ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದ್ದು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಬಂಧಿತರ ವಿರುದ್ಧ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 6 ದ್ವಿಚಕ್ರ ವಾಹನ ಕಳ್ಳತನ ಪ್ರಕರಣ ಬೆಳಕಿಗೆ ಬಂದಂತಾಗಿದೆ.

ಆರೋಪಿಗಳ ಬಂಧನದ ಕುರಿತು ಪ್ರತಿಕ್ರಿಯಿಸಿದ ಪೂರ್ವ ವಿಭಾಗದ ಡಿಸಿಪಿ ಡಾ.ಭೀಮಾಶಂಕರ್ ಗುಳೇದ್, “ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಖರೀದಿಸುವಾಗ ಅದರ ಮೂಲ ದಾಖಲೆಗಳಿಲ್ಲದೇ, ಅಥವಾ ಪರಿಶೀಲಿಸದೇ ಖರೀದಿಸಬಾರದು. ಇಂತಹ ಸಂದರ್ಭಗಳಲ್ಲಿ ಕಳ್ಳರ ಬಂಧನವಾದರೂ ಸಹ ವಂಚಿಸಿದ ಹಣವನ್ನು ಅವರಿಂದ ವಶಕ್ಕೆ ಪಡೆಯುವುದು ಕಷ್ಟವಾಗುತ್ತದೆ” ಎಂದು ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ.

ಮೋಜು ಮಸ್ತಿಗಾಗಿ ದ್ವಿಚಕ್ರ ವಾಹನ ಕದಿಯುತ್ತಿದ್ದ ಪ್ರೇಮಿಗಳು: ಕಳೆದ ಏಪ್ರಿಲ್​ನಲ್ಲಿ ಪ್ರೇಮಿಗಳಿಬ್ಬರು ದ್ವಿಚಕ್ರ ವಾಹನಗಳನ್ನು ಕದ್ದು ಪೊಲೀಸರ ಬಂಧನಕ್ಕೆ ಒಳಗಾಗಿದ್ದರು. ಇವರು ವಾಹನಗಳನ್ನು ಕದ್ದು ಸ್ವಲ್ಪ ಹಣಕ್ಕೆ ಮಾರಿ, ಬಂದ ಹಣದಲ್ಲಿ ಮಾದಕ ಪದಾರ್ಥಗಳನ್ನು ಖರೀದಿಸಿ ಮೋಜು -ಮಸ್ತಿ ಮಾಡುತ್ತಿದ್ದರು. ಇಬ್ಬರ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದರಿಂದ ಮಲ್ಲೇಶ್ವರಂನ ಠಾಣಾ ಪೊಲೀಸರ ಕೈಗೆ ಇವರಿಬ್ಬರು ಸಿಕ್ಕಿ ಬಿದ್ದು ಬಂಧಿಸಲ್ಪಟ್ಟಿದ್ದರು.

ಫುಲ್​ ಟೈಂ ಮೆಕ್ಯಾನಿಕ್​, ಪಾರ್ಟ್​ ಟೈಂ ಕಳ್ಳತನ: ಬೆಂಗಳೂರಿನಲ್ಲಿ ಕಳೆದ 2022 ರ ಸೆಪ್ಟೆಂಬರ್​ ತಿಂಗಳಿನಲ್ಲಿ ವಾಹನ ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಜಯನಗರ ಠಾಣಾ ಪೊಲೀಸರು ಬಂಧಿಸಿದ್ದರು. ಈ ಕಳ್ಳರಿಬ್ಬರು ಹೇಳಿಕೊಳ್ಳಲು ಮೆಕ್ಯಾನಿಕ್​ ಉದ್ಯೋಗ. ಆದರೆ, ಮಾಡುತ್ತಿದ್ದದ್ದು ದ್ವಿಚಕ್ರ ವಾಹನ ಕಳ್ಳತನ. ಬಂಧಿತ ಆರೋಪಿಗಳು ಅರ್ಪರೋಜ್​ ಪಾಶಾ ಹಾಗೂ ಹುಸೇನ್​ ಸೌದದ್​.

ಇವರು ತನ್ನ ಮನೆಯಲ್ಲೇ ಮೆಕ್ಯಾನಿಕ್​ ಕೆಲಸ ಮಾಡಿಕೊಂಡಿದ್ದು, ನಕಲಿ ಕೀ ಬಳಸಿ ದ್ವಿಚಕ್ರ ವಾಹನ ಕಳ್ಳತನ ಆರಂಭಿಸಿದ್ದರು. ಕಳ್ಳತನ ಮಾಡುತ್ತಿದ್ದ ವಾಹನದ ಬಿಡಿಭಾಗಗಳನ್ನು ಬಿಚ್ಚಿ ಮಾರಾಟ ಮಾಡುತ್ತಿದ್ದರು. ಕೊನೆಗೆ ಇವರನ್ನು ಬಂಧಿಸಿದ ಪೊಲೀಸರು ಇವರಿಂದ ಒಟ್ಟು 20 ವಿವಿಧ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದರು.

Leave a Reply

Your email address will not be published. Required fields are marked *