ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಜಿಲ್ಲೆಯಲ್ಲಿ ಪಕ್ಷದ ಎಲ್ಲಾ ಶಾಸಕರು ಒಗ್ಗಟ್ಟಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತೀಶಣ್ಣ ನನ್ನನ್ನು ಮೈಸೂರು ದಸರಾ ಪ್ರವಾಸಕ್ಕೆ ಕರೆದಿದ್ದರು. ನಾನು ಮೊದಲು ಬರುತ್ತೇನೆ ಅಂತ ಹೇಳಿದ್ದೆ. ಆದರೆ ನನ್ನ ಸಕ್ಕರೆ ಫ್ಯಾಕ್ಟರಿ ಬಾಯ್ಲರ್ ಪೂಜೆ ಇದ್ದಿದ್ದರಿಂದ ಕೊನೆ ಗಳಿಗೆಯಲ್ಲಿ ಬರಲ್ಲ ಅಂತ ಹೇಳಿದೆ. ಆದರೆ ಇದನ್ನು ಡಿಕೆಶಿ ವಿರುದ್ಧ ಶಾಸಕರು ಪ್ರವಾಸಕ್ಕೆ ಹೋಗುತ್ತಿದ್ದರು ಎಂದು ಹೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಸಿಎಂ ಮತ್ತು ಡಿಸಿಎಂ ನನಗೆ ಬಹಳ ಒಳ್ಳೆ ಖಾತೆ ಕೊಟ್ಟಿದ್ದಾರೆ. ಉಡುಪಿ ಜಿಲ್ಲಾ ಉಸ್ತುವಾರಿ ವಹಿಸಿದ್ದಾರೆ. ಕಷ್ಟಪಟ್ಟು ಈ ಹಂತಕ್ಕೆ ಬಂದಿದ್ದೇನೆ. ಆದರೆ ಪದೇಪದೆ ನನ್ನ ಹೆಸರು ಯಾಕೆ ಬರುತ್ತಿದೆ ಅಂತ ಗೊತ್ತಾಗುತ್ತಿಲ್ಲ. ಕಾಂಪ್ರಮೈಸ್ ಎಂಬುದು ಯಾವ ಅರ್ಥದಲ್ಲಿ ಹೇಳುತ್ತಿದ್ದಾರೆ ಗೊತ್ತಾಗುತ್ತಿಲ್ಲ ಎಂದು ಅವರು ಹೇಳಿದರು.

ಜಿಲ್ಲೆಗೆ ಯಾವುದೇ ಅಧಿಕಾರಿಯನ್ನು ಸತೀಶ್ ಜಾರಕಿಹೊಳಿ ಅವರು ಹಾಕಿದಾಗ ನಾನು ಎಸ್ ಎನ್ನುತ್ತೇನೆ. ನಾನು ಯಾವುದೇ ಅಧಿಕಾರಿ ಹಾಕಿದಾಗ ಅವರು ಎಸ್ ಎನ್ನುತ್ತಾರೆ. ಅದೇ ಕಾಂಪ್ರಮೈಸ್ ಅಷ್ಟೇ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಸಹೋದರ ಚನ್ನರಾಜ್ ಹಟ್ಟಿಹೊಳಿ ಅವರ ಎಂಎಲ್ಸಿ ಚುನಾವಣೆಯಿಂದ ಹಿಡಿದು ಇಲ್ಲಿ ತನಕ ಒಂದೇ ಒಂದು ವಿಚಾರದಲ್ಲೂ ಸತೀಶ್ ಅವರ ಜೊತೆ ಭಿನ್ನಾಭಿಪ್ರಾಯಗಳು ಬಂದಿಲ್ಲ. ನಾನು ಗಟ್ಡಿ ಧ್ಚನಿಯಲ್ಲಿ ಸ್ಪಷ್ಟಪಡಿಸ್ತೇನೆ, ಒಂದೇ ಒಂದು ವಿಚಾರದಲ್ಲೂ ನನ್ನ ಸತೀಶಣ್ಣ ಮಧ್ಯೆ ಭಿನ್ನಾಭಿಪ್ರಾಯ ಇಲ್ಲ ಎಂದು ಸಚಿವರು ಹೇಳಿದರು.

ನಾನು ಯಾವುದಾದರೂ ಹಸ್ತಕ್ಷೇಪ ಮಾಡಿದ್ದೀನಾ? ಜಿಲ್ಲಾಡಳಿತದಲ್ಲೇನಾದ್ರೂ ನನ್ನಿಂದ ತೊಂದರೆ ಆಗ್ತಿದೆಯಾ ಅಂತ ಮತ್ತೊಮ್ಮೆ ಸಚಿವರನ್ನೆ ಕೇಳಿ ಎಂದ ಹೆಬ್ಬಾಳ್ಕರ್, ಬೆಳಗಾವಿ ರಾಜಕೀಯ ವಿಷಯಕ್ಕೆ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರನ್ನು ಯಾಕೆ ಎಳೆದು ತರ್ತೀರಾ ಎಂದು ಮಾಧ್ಯಮದವರನ್ನ ಪ್ರಶ್ನಿಸಿದರು.

ನಿನ್ನೆ ಬೆಳಗಾವಿಯಲ್ಲಿ ಡಿ.ಕೆ.ಶಿವಕುಮಾರ್ ಅವರ ಸ್ವಾಗತಕ್ಕೆ ಜಿಲ್ಲೆಯ ಶಾಸಕರು ಹೋಗದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಮುಜುಗರ ಅನ್ನೋ ಶಬ್ದ ರಾಜಕಾರಣದಲ್ಲಿ ಇಲ್ಲ. ಅದರ ಹೊರತಾಗಿ ನಾವು ರಾಜಕಾರಣ ಮಾಡಬೇಕಾಗುತ್ತದೆ. ಒಂದು ತಿಂಗಳು ಮೊದಲೇ ನನ್ನ ಮೊಮ್ಮಗಳ ನಾಮಕರಣ ನಿಗದಿಯಾಗಿತ್ತು. ಹೀಗಾಗಿ ನಾನು ಭದ್ರಾವತಿಗೆ ಹೋದೆ. ಉಸ್ತುವಾರಿ ಸಚಿವರೂ ಕೂಡ ಮೊದಲೇ ತಿಳಿಸಿದ್ದರು, ಅವರು ಬೆಂಗಳೂರಲ್ಲೇ ಇದ್ರು. ದಸರಾ ಹಬ್ಬ, ವಿವಿಧ ಕಾರಣಗಳಿಂದ ಇತರ ಶಾಸಕರು ಹೋಗಿರಲಿಲ್ಲ. ನಾನು ಅಧ್ಯಕ್ಷರಿಗೆ ಮುಂಚಿತವಾಗಿ ಗಮನಕ್ಕೆ ತಂದಿದ್ದೆ ಎಂದು ಸಚಿವರು ಹೇಳಿದರು.

ಡಿಕೆ ಶಿವಕುಮಾರ್ ಸಮರ್ಥರಿದ್ದಾರೆ

ಡಿಕೆಶಿ ವಿರುದ್ಧ ಸಿಬಿಐ ತನಿಖೆಗೆ ಕೋರ್ಟ್ ಅನುಮತಿ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ಡಿ.ಕೆ.ಶಿವಕುಮಾರ್ ಸಮರ್ಥರಿದ್ದಾರೆ. ಯಾವುದೇ ಕಾನೂನು ಹೋರಾಟವಾದರೂ ಸಮರ್ಥವಾಗಿ ಎದುರಿಸುತ್ತಾರೆ. ಎಲ್ಲವನ್ನೂ ನಿಭಾಯಿಸುತ್ತಾರೆ. ಸಂವಿಧಾನ ಕಾನೂನಿನ ಬಗ್ಗೆ ಗೌರವವಿದೆ. ಸಮರ್ಥವಾಗಿ ನಿಭಾಯಿಸಿ ಜಯಶಾಲಿಯಾಗಿ ಹೊರಬರ್ತಾರೆ ಎಂದು ಸಚಿವರು ಹೇಳಿದರು.

Leave a Reply

Your email address will not be published. Required fields are marked *