• ವಿದ್ಯುತ್, ಕಲ್ಲಿದ್ದಲು ಖರೀದಿಯಲ್ಲಿ ಅವ್ಯವಹಾರದ ಆರೋಪ ತಳ್ಳಿ ಹಾಕಿದ ಇಂಧನ ಸಚಿವರು

ಹೊಸದಿಲ್ಲಿ, ಅಕ್ಟೋಬರ್ 26, 2023- ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಅದಕ್ಕೆ ಅನುಗುಣವಾಗಿ ಅಗತ್ಯ ವಿದ್ಯುತ್ ಪೂರೈಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ಹೇಳಿದ್ದಾರೆ.

ರಾಜ್ಯದಲ್ಲಿ ಹೆಚ್ಚಿರುವ ವಿದ್ಯುತ್‌ ಬೇಡಿಕೆ ಮತ್ತು ಅದರ ಪೂರೈಕೆಗೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಲು ಹೊಸದಿಲ್ಲಿಯ ಕರ್ನಾಟಕ ಭವನದಲ್ಲಿ ಗುರುವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಇಂಧನ ಸಚಿವರು ಮಾತನಾಡಿದರು.

“ಈ ಬಾರಿ ವಿದ್ಯುತ್ ಬೇಡಿಕೆ ಎಷ್ಟರ ಮಟ್ಟಿಗೆ ಏರಿಕೆಯಾಗಿದೆ ಎಂದರೆ, ಆಗಸ್ಟ್‌ ತಿಂಗಳ ವಿದ್ಯುತ್ ಬಳಕೆ ಬೇಸಿಗೆ ಕಾಲದಲ್ಲಿನ ಬಳಕೆಯನ್ನು ಮೀರಿಸಿದೆ. ಈ ಅಕ್ಟೋಬರ್‌ನಲ್ಲೇ 15,000 ಮೆ.ವ್ಯಾ.ಗಿಂತ ಹೆಚ್ಚಿನ ವಿದ್ಯುತ್ ಬೇಡಿಕೆ ಇದೆ. ಆ ಬೇಡಿಕೆಗೆ ಅನುಗುಣವಾಗಿ ವಿದ್ಯುತ್‌ ಒದಗಿಸುವುದು ನಮ್ಮ ಜವಾಬ್ದಾರಿ. ಅದಕ್ಕಾಗಿ ಪ್ರಯತ್ನ ಮಾಡಿದ್ದು, ಅದರಂತೆ ವಿದ್ಯುತ್ ಖರೀದಿ ಮತ್ತು ಕಲ್ಲಿದ್ದಲು ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ನಿಯಮದ ಪ್ರಕಾರ ವಿದ್ಯುತ್ ಖರೀದಿ ಮತ್ತು ಕಲ್ಲಿದ್ದಲು ಆಮದು ಪ್ರಕ್ರಿಯೆ ನಡೆಯುತ್ತಿದ್ದು, ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ ಕುಮಾರಸ್ವಾಮಿ ಅವರು ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದ್ದು, ರಾಜ್ಯ ಸರ್ಕಾರ ಇದನ್ನು ತಳ್ಳಿಹಾಕುತ್ತದೆ,” ಎಂದರು.

ವಿದ್ಯುತ್ ಬಳಕೆ ಏರಿಕೆ:
“ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಪ್ರತಿ ತಿಂಗಳಿಗೆ 200 ಮಿಲಿಯನ್ ಯೂನಿಟ್ ಗಿಂತ ಹೆಚ್ಚಿನ ವಿದ್ಯುತ್ ಬಳಕೆ ಆಗುತ್ತಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಅತ್ಯಧಿಕ ಅಂದರೆ 11,268 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇತ್ತು. 2022ರ ಆಗಸ್ಟ್‌ನಲ್ಲಿ ಗರಿಷ್ಠ ಬಳಕೆ 208 ಮಿಲಿಯನ್ ಯೂನಿಟ್ ನಷ್ಟಿದ್ದರೆ, ಈ ವರ್ಷ ಆಗಸ್ಟ್‌ನ ಗರಿಷ್ಠ ಬಳಕೆ 294 ಮಿಲಿಯನ್ ಯೂನಿಟ್ ಗೆಗೆ ಏರಿದೆ. ಇಂತಹ ಸವಾಲಿನ ಪರಿಸ್ಥಿತಿಯಲ್ಲೂ, ನೀರಾವರಿ ಉದ್ದೇಶಗಳಿಗಾಗಿ ರೈತರಿಗೆ 5 ಗಂಟೆಗಳ ನಿರಂತರ ವಿದ್ಯುತ್ ಪೂರೈಸಲು ಇಂಧನ ಸಚಿವಾಲಯವು ಹಗಲು-ರಾತ್ರಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ರಾಜ್ಯದ ಬೇರೆ ಬೇರೆ ಭಾಗಗಳಲ್ಲಿನ ಬೆಳೆ ಮಾದರಿ ಮತ್ತು ವಿದ್ಯುತ್ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಕಬ್ಬು ಮತ್ತು ಭತ್ತ ಬೆಳೆಯುವ ಭಾಗಗಳಲ್ಲಿ 7 ಗಂಟೆಗಳ ನಿರಂತರ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ವಿದ್ಯುತ್ ಸರಬರಾಜಿನ ಮೇಲ್ವಿಚಾರಣೆಗೆ ಚೀಫ್‌ ಎಂಜಿನಿಯರ್ ಶ್ರೇಣಿಯ ಅಧಿಕಾರಿಗಳನ್ನು ನೇಮಿಸಲಾಗಿದೆ. ಎಸ್ಕಾಂಗಳ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅಧಿಕಾರಿಗಳು ರಾಜ್ಯದ ಲೋಡ್‌ ಡಿಸ್ಪ್ಯಾಚ್ ಸೆಂಟರ್ (ಎಸ್‌ಎಲ್‌ಡಿಸಿ) ಪರಿಸ್ಥಿತಿ ಮೇಲೂ ನಿಗಾ ಇರಿಸಿದ್ದಾರೆ,” ಎಂದು ಇಂಧನ ಸಚಿವರು ಹೇಳಿದರು.

Leave a Reply

Your email address will not be published. Required fields are marked *