ಮೊನ್ನೆ ಬೆಂಗಳೂರು ನಗರದ ಮೆಜೆಸ್ಟಿಕ್​ನಲ್ಲಿ ಪರಿಚಯವಾಗಿದ್ದ ಮಹಿಳೆ ವೃದ್ಧರೊಬ್ಬರಿಗೆ ಮತ್ತುಬರುವ ಔಷಧಿ ನೀಡಿ ಚಿನ್ನಾಭರಣ ಲೂಟಿ ಮಾಡಿದ ಆರೋಪ ಕೇಳಿಬಂದಿತ್ತು. ನಿನ್ನೆ ಹೈದರಾಬಾದಿನಲ್ಲಿ ಯುವತಿಯೊಬ್ಬಳ ವಾಟ್ಸ್​​ಅಪ್​ ವಿಡಿಯೋ ಸಂದೇಶ ಕಳಿಸಿ, 79 ವರ್ಷದ ಮುದುಕನನ್ನು ಯಾಮಾರಿಸಿರುವ ಆರೋಪ ಕೇಳಿಬಂದಿದೆ.

ಆ ವಯೋವೃದ್ಧನ ವಯಸ್ಸು 79. ಯುವತಿಯೊಬ್ಬಳಿಂದ ಮೆಸೇಜ್ ಬಂತು ಅಂತಾ ಹಿಂದೆಮುಂದೆಯೂ ನೋಡದೆ ಟೆಂಪ್ಟ್​​ ಆಗಿದ್ದಾರೆ. ಯುವತಿಯಿಂದ ವಿಡಿಯೋ ಕರೆ (Whatsappp Video) ಬಂದಾಕ್ಷಣ ಆತ ನಖಶಿಖಾಂತ ಉತ್ಸುಕರಾದರು. ಇನ್ನೂ ಹಾಗೇ ನೋಡ್ತಿದ್ದಂಗೆ ಗೊಂಬೆಯಂತಹ ಚೆಂದುಳ್ಳಿ ಚೆಲುವೆಯ ಫೋಟೋ ಕಾಣಿಸಿಕೊಂಡಿದೆ. ಮುಂದೆ ಅವಾಂತರವಾಗುತ್ತಿದ್ದಂತೆ ನನ್ನನ್ನು ರಕ್ಷಿಸಿ ಎಂದು ಸೈಬರ್​​ ಕ್ರೈಂ ಪೊಲೀಸರಿಗೆ ಮೊ್ರೆಹೋಗಿದ್ದಾರೆ ಆತ. ಇಷ್ಟಕ್ಕೂ ಆ ಮುದುಕ ಮಾಡಿಕೊಂಡ ಯಡವಟ್ಟು ಏನು? ಹುಡುಗಿ ಏನು ಮಾಡಿದಳು? ಆತ ಪೊಲೀಸರಿಗೆ ಮೊರೆಹೋಗಿದ್ದು ಏಕೆ? ಪ್ರಕರಣ ನಡೆದಿದ್ದಾದರೂ ಎಲ್ಲಿ? ಘಟನೆಯ ನಿಜಾಂಶಗಳು ಇಲ್ಲಿವೆ.  (Cyber Crime) ಏನೆಂದು ತಿಳಿಯೋಣ ಬನ್ನಿ..

ಯುವತಿಯೊಬ್ಬಳು ಹೈದರಾಬಾದ್‌ನ 79 ವರ್ಷದ ವ್ಯಕ್ತಿಗೆ ವಾಟ್ಸಾಪ್‌ನಲ್ಲಿ ಸಂದೇಶ ಕಳುಹಿಸಿದ್ದಾಳೆ. ಆಕೆ ಯಾರು, ಏನು ವಿಷಯ ಅದ್ಯಾವುದನ್ನೂ ಯೋಚಿಸದೆ ವೃದ್ಧ ಮಹಾಶಯ ಹುಡುಗಿಯ ಜೊತೆ ಹರಟೆ ಹೊಡೆಯತೊಡಗಿದ. ಬಳಿಕ ನಗ್ನಗೊಂಡು ವಿಡಿಯೋ ಕಾಲ್ ನಲ್ಲಿ ಮಾತನಾಡುವಂತೆ ಕೇಳಿದ್ದಾಳೆ. ಆದರೆ, ತಾನು ಹೊರಗಿದ್ದೇನೆ ಎಂದು ಹೇಳಿದಾಗ ಆಯ್ತು ಸ್ವಲ್ಪ ಹೊತ್ತುಬಿಟ್ಟು ಮಾಡಿ, ಆದರೆ ಬಾತ್ ರೂಂನಿಂದ ವಿಡಿಯೋ ಕಾಲ್ ಮಾಡುವಂತೆ ಆತನಿಗೆ ಹೇಳಿದ್ದಾಳೆ.

ಕಾಣದ ಆಮಿಷಕ್ಕೆ ಒಳಗಾದ ವೃದ್ಧ ಸೀದಾ ಮನೆಗೆ ಹೋಗಿ ಬಾತ್ ರೂಮ್​ ಸೇರಿಕೊಂಡಿದ್ದಾನೆ. ಅಲ್ಲಿಂದಲೇ ವಿಡಿಯೋ ಕಾಲ್ ಮಾಡಿದ್ದಾನೆ. ಇನ್ನೇನಿದೆ, ಈತನಿಗೆ ಅಸಲಿ ಕತೆ ಗೊತ್ತಿಲ್ಲ. ಯಾಕೆಂದರೆ ಆ ಕಡೆಯಿಂದ ಅಂದರೆ ಯುವತಿ ಕಡೆಯವರು ಮುಂದಿದೆ ಅಸಲಿ ಆಟ ಅಂತಾ ವಿಡಿಯೋ ಕಾಲ್ ಅನ್ನು ಸ್ಕ್ರೀನ್ ರೆಕಾರ್ಡ್ ಮಾಡಿಕೊಂಡಿದ್ದಾರೆ.

ಬಳಿಕ ಅನಾಮಧೇಯರು ವೃದ್ಧನಿಗೆ ಕರೆ ಮಾಡಿ ತಮ್ಮ ರಸಿಕತೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಅದಕ್ಕೂ ಮುನ್ನ, ನಿಮ್ಮ ಕುಟುಂಬ ಸದಸ್ಯರಿಗೆ ವಿಡಿಯೋ ಕಳುಹಿಸುತ್ತೇವೆ ಎಂದು ಬ್ಲಾಕ್ ಮೇಲ್ ಮಾಡಿದ್ದಾರೆ. ಸ್ವಲ್ಪ ಸಮಯದ ನಂತರ ತಾನು ಪೊಲೀಸ್ ಅಧಿಕಾರಿ ಮಾತನಾಡುತ್ತಿರುವುದು ಎಂದು ಹೇಳಿಕೊಂಡು ಮತ್ತೊಬ್ಬ ವ್ಯಕ್ತಿ ಕರೆ ಮಾಡಿ ಪ್ರಕರಣ ದಾಖಲಿಸಲಾಗಿದೆ ಎಂದು ಬೆದರಿಕೆ ಹಾಕಿದ್ದಾನೆ.

ಅಲ್ಲಿಗೆ ವಿಷಯ ಅರ್ಥವಾದಂತೆ ವಿಚಲಿತರಾದ ಯಜಮಾನರು ಅವರು ಕೇಳಿದಷ್ಟು ಹಣ ಸಲ್ಲಿಸಿದ್ದಾರೆ. ಮೂರು ದಿನಗಳಲ್ಲಿ ಒಟ್ಟು 15 ಲಕ್ಷ ರೂ. ವೃದ್ಧರ ಕೈಬಿಟ್ಟಿದೆ. ಅದು ಯುವತಿ ಗ್ಯಾಂಗ್​​ನ ಕೈಸೇರಿದೆ. ಆದರೆ ದುರಾಸೆಯಿಂದಾಗಿ ಯುವತಿ ಇನ್ನೂ ಹೆಚ್ಚಿನ ಹಣಕ್ಕಾಗಿ ಬೇಡಿಕೆಯಿಟ್ಟಾಗ, ಸಂತ್ರಸ್ತ ವೃದ್ಧ ಸೈಬರ್ ಅಪರಾಧ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ನ್ಯೂಡ್ ಕಾಲ್ ಮಾಡುವವರಿಗೆ ಫೋನ್ ನಂಬರ್ ಹ್ಯಾಕ್ ಮಾಡಲು ಆಗುವುದಿಲ್ಲ. ಯೂಟ್ಯೂಬ್ ನಂತಹ ಸೈಟ್ ಗಳಲ್ಲಿ ನಿಮ್ಮ ವಿಡಿಯೋ ಹಾಕಿದರೆ ಅಂತಹ ವಿಡಿಯೋಗಳನ್ನು ಬ್ಲಾಕ್ ಮಾಡುವುದು ತುಂಬಾ ಸುಲಭ. ಹಾಗಾಗಿ ಇಂತಹ ಘಟನೆಗಳಲ್ಲಿ ಭಯಪಡದೆ ಸೈಬರ್ ಕ್ರೈಂ ದೂರು ದಾಖಲಿಸಬೇಕು, ಕ್ರಮ ಕೈಗೊಳ್ಳುತ್ತೇವೆ ಎಂದು ಸೈಬರಾಬಾದ್​​ ಪೊಲೀಸರು ಭರವಸೆ ನೀಡಿದ್ದಾರೆ. ಅಂದಹಾಗೆ ಈ ಪ್ರಕರಣದಲ್ಲಿ ಇನ್ನೂ ಆರೋಪಿಗಳ ಬಂಧನವಾಗಿಲ್ಲ.

Leave a Reply

Your email address will not be published. Required fields are marked *