ಯಾರೇ ಮಾತಾಡಿದ್ರು ಜೈಲಿಗೆ ಹಾಕ್ತೀವಿ ಅಂತ ಹೇಳೋಕ್ಕೆ ಇದು ತಾಲಿಬಾನ್ ಆಡಳಿತ ಅಲ್ಲ, ಕರ್ನಾಟಕ ಎನ್ನುವುದನ್ನು ಎಂಬಿ ಪಾಟೀಲ್ ಮರೆಯಬಾರದು ಎಂದ ಯತ್ನಾಳ್.

ಬೆಂಗಳೂರು: ವಾಗ್ಮಿ ಚಕ್ರವರ್ತಿ ಸೂಲಿಬೆಲೆಗೆ ಸಚಿವ ಎಂಬಿ ಪಾಟೀಲ್ ಎಚ್ಚರಿಕೆ ನೀಡಿದ್ದಕ್ಕೆ ಖಾರವಾಗಿ ತಿರುಗೇಟು ನೀಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal), ಯಾರೇ ಮಾತನಾಡಿದರೂ ಜೈಲಿಗೆ ಹಾಕ್ತೀವಿ ಎನ್ನಲು ಇದು ತಾಲಿಬಾನ್ ಆಡಳಿತ ಅಲ್ಲ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಹಿಟ್ಲರ್ ಆಡಳಿತವಿದೆ ಎಂದು ಹೇಳಿದ್ದ ಚಕ್ರವರ್ತಿ ಸೂಲಿಬೆಲೆಗೆ ಸಚಿವ ಎಂಬಿ ಪಾಟೀಲ್ ಖಡಕ್ ಎಚ್ಚರಿಕೆ ನೀಡಿದ್ದರು. ಈ ಹಿಂದೆ ಹಿಜಾಬ್, ಹಲಾಲ್ ವಿಚಾರದಲ್ಲಿ ಗಲಾಟೆ ಮಾಡಿದ ಹಾಗೆ ಈಗ ನಾಟಕ ಮಾಡಿದರೆ ಅದಕ್ಕೆ ತಡೆಯೊಡ್ಡಲಿದ್ದೇವೆ. ಇನ್ನು ಮುಂದೆ ಅಂಥದ್ದೆಲ್ಲ ನಡೆಯಲ್ಲ. ಏನಾದರೂ ಗಲಾಟೆ ಮಾಡಿದರೆ ಜೈಲು ಕಂಬಿ ಎಣಿಸಬೇಕಾಗುತ್ತದೆ ಎಂದು ಎಂಬಿ ಪಾಟೀಲ್ ಎಚ್ಚರಿಕೆ ನೀಡಿದ್ದರು.

ಎಂಬಿ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಯತ್ನಾಳ್, ಯಾರೇ ಮಾತಾಡಿದ್ರು ಜೈಲಿಗೆ ಹಾಕ್ತೀವಿ ಅಂತ ಹೇಳೋಕ್ಕೆ ಇದು ತಾಲಿಬಾನ್ ಆಡಳಿತ ಅಲ್ಲ, ಕರ್ನಾಟಕ ಎನ್ನುವುದನ್ನು ಎಂಬಿ ಪಾಟೀಲ್ ಮರೆಯಬಾರದು. ಎಫ್​ಐಆರ್ ಮಾಡಿಸ್ತೀವಿ, ಜೈಲಿಗೆ ಕಳುಹಿಸ್ತೀವಿ ಎಂದು ಪದೇ ಪದೇ ಅನ್ನುವುದಕ್ಕೆ ಇವರೇನು ನ್ಯಾಯಾಧೀಶರೇ? ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಇದೆಲ್ಲ ಸಲ್ಲದು, ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಅವರ ಮಂತ್ರಿಗಳು ಅಸಹಿಷ್ಣು ಆಗಬಾರದು ಎಂದು ಉಲ್ಲೇಖಿಸಿದ್ದಾರೆ.

ಭಾರತ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದ ಅಡಿ ನಡೆಯುವುದು. ಸಂವಿಧಾನದ ವಿಧಿ 19 ರ ಬಗ್ಗೆ ತಿಳಿದುಕೊಳ್ಳಬೇಕಾಗಿ ಪಾಟೀಲ್ ಅವರನ್ನು ತಾಕೀತು ಮಾಡುತ್ತೇನೆ ಎಂದು ಯತ್ನಾಳ್ ಉಲ್ಲೇಖಿಸಿದ್ದಾರೆ.

ಸಚಿವ ಎಂಬಿ ಪಾಟೀಲ್ ಜೈಲಿಗೆ ಹಾಕಿಸಬೇಕಾಗುತ್ತದೆ ಅಂತ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಚಕ್ರವರ್ತಿ ಸೂಲಿಬೆಲೆ, ಜೈಲಿಗೆ ಹಾಕಿಸುವಂಥ ಯಾವ ಪ್ರಮಾದ ತನ್ನಿಂದ ಜರುಗಿದೆ ಅಂತ ಸಚಿವರೇ ಹೇಳಬೇಕು. ಅಸಲು ಸಂಗತಿಯೇನೆಂದರೆ ಅಧಿಕಾರದಲ್ಲಿರುವವರಿಗೆ ಅವರಿಗೆ ಸಹ್ಯವಾಗದ ಸತ್ಯಗಳನ್ನು ಮಾತಾಡಿದರೆ, ಆಡಳಿತದಲ್ಲಿನ ಅಪಸವ್ಯಗಳನ್ನು ಎತ್ತಿತೋರಿದರೆ ಪಥ್ಯವಾಗದು. ಅಧಿಕಾರ ತಮ್ಮ ಕೈಯಲ್ಲಿದೆ ಅನ್ನೋ ಕಾರಣಕ್ಕೆ ನಾಲಗೆಯನ್ನು ಬೇಕಾಬಿಟ್ಟಿ ಹರಿಬಿಡುತ್ತಾರೆ ಎಂದು ಹೇಳಿದ್ದರು. ಸರ್ಕಾರದಲ್ಲಿರುವವರು ಕೆಲಸಕ್ಕೆ ಬಾರದ ಮಾತುಗಳನ್ನಾಡುವ ಬದಲು ಜನರಿಗೆ ನೀಡಿದ ಗ್ಯಾರಂಟಿಗಳನ್ನು ಯಾವುದೇ ಗೊಂದಲವಿಲ್ಲದೆ ಈಡೇರಿಸುವ ಕಡೆ ಗಮನ ನೀಡಬೇಕೆಂದು ಅವರು ಒತ್ತಾಯಿಸಿದ್ದರು.

Leave a Reply

Your email address will not be published. Required fields are marked *