ಕ್ರೂಸರ್ ವಾಹನ ಮತ್ತು ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಕಲಬುರಗಿ ಜಿಲ್ಲೆಯ ಐವರು ಮಹಿಳೆಯರು, ಒಂದು ಮಗು ದುರ್ಮರಣ ಹೊಂದಿರುವಂತಹ ಘಟನೆ ಮಹಾರಾಷ್ಟ್ರದ ಅಕ್ಕಲಕೋಟೆ ತಾಲೂಕಿನ ಶಿರವಾಡಿ ಬಳಿ ನಡೆದಿದೆ.

ಕಲಬುರಗಿ: ಕ್ರೂಸರ್ ವಾಹನ ಮತ್ತು ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಕಲಬುರಗಿ ಜಿಲ್ಲೆಯ 6 ಜನರು ಸಾವನ್ನಪ್ಪಿರುವಂತಹ ಘಟನೆ ಮಹಾರಾಷ್ಟ್ರದ ಅಕ್ಕಲಕೋಟೆ ತಾಲೂಕಿನ ಶಿರವಾಡಿ ಬಳಿ ನಡೆದಿದೆ. ಕ್ರೂಸರ್‌ನಲ್ಲಿದ್ದ ಐವರು ಮಹಿಳೆಯರು, ಒಂದು ಮಗು ದುರ್ಮರಣ ಹೊಂದಿದೆ. ಮೃತರನ್ನು ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಅಣೂರ ನಿವಾಸಿಗಳು ಎಂದು ಗುರುತಿಸಲಾಗಿದೆ. ಕ್ರೂಸರ್ ವಾಹನದಲ್ಲಿ ಮಹಾರಾಷ್ಟ್ರದ ತೀರ್ಥ ಕ್ಷೇತ್ರಗಳಿಗೆ ಪ್ರವಾಸಕ್ಕೆ ತೆರಳಿದ್ದರು. ವಾಪಸಾಗುತ್ತಿದ್ದಾಗ ಟ್ಯಾಂಕರ್ ಡಿಕ್ಕಿಯಾಗಿ ದುರಂತ ಸಂಭವಿಸಿದೆ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇನಲ್ಲಿ ಸರಣಿ ಅಪಘಾತದಲ್ಲಿ ಐವರಿಗೆ ಗಾಯ, ಓರ್ವನ ಸ್ಥಿತಿ ಗಂಭೀರ

ಮಂಡ್ಯ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇನಲ್ಲಿ ಸರಣಿ ಅಪಘಾತವಾಗಿದ್ದು, ಐವರಿಗೆ ಗಾಯ, ಓರ್ವನ ಸ್ಥಿತಿ ಗಂಭೀರವಾಗಿದೆ. ಮಂಡ್ಯ ತಾಲೂಕಿನ ತೂಬಿನಕೆರೆ ಬಳಿ ಸರಣಿ ಅಪಘಾತ ಸಂಭವಿದೆ.  ಹೈವೇನಲ್ಲಿ ರಸ್ತೆ ಮಧ್ಯದ ಗಿಡಗಳಿಗೆ ಟ್ಯಾಂಕರ್‌ನಿಂದ ನೀರು ಹರಿಸುತ್ತಿದ್ದರು. ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ  ಸಿಬ್ಬಂದಿ ಗಿಡಗಳಿಗೆ ನೀರು ಹರಿಸುತ್ತಿದ್ದರು.

ಈ ವೇಳೆ ನೀರಿನ ಟ್ಯಾಂಕರ್ ಕಾಣದೇ ಕಾರು ಡಿಕ್ಕಿ ಹೊಡೆದಿದೆ. ನಂತರ ಹಿಂಬದಿಯಿಂದ ಮತ್ತೆರಡು ಕಾರುಗಳು ಡಿಕ್ಕಿ ಹೊಡೆದಿವೆ. ನೀರಿನ ಟ್ಯಾಂಕರ್‌ಗೆ ಡಿಕ್ಕಿಯಿಂದ ಕಾರಿನಲ್ಲಿದ್ದ ಐವರಿಗೆ ಗಾಯಗಳಾಗಿದ್ದು, ಓರ್ವನ ಸ್ಥಿತಿ ಗಂಭೀರ, ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಎನ್‌ಹೆಚ್‌ಎಐ ಅಧಿಕಾರಿಗಳ ಬೇಜವಾಬ್ದಾರಿಯಿಂದ ಅಪಘಾತ ಕಾರಣ ಎನ್ನಲಾಗುತ್ತಿದೆ.

ಟ್ರಕ್ಕಿಂಗ್ ಹೋಗಿದ್ದ ಪ್ರವಾಸಿಗ ಹೃದಯಘಾತದಿಂದ ಸಾವು‌

ಚಿಕ್ಕಮಗಳೂರು: ಟ್ರಕ್ಕಿಂಗ್ ಹೋಗಿದ್ದ ಪ್ರವಾಸಿಗ ಹೃದಯಘಾತದಿಂದ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆ ಕಳಸ ತಾಲೂಕಿನ ಕುದುರೆಮುಖ ಅರಣ್ಯ ಪ್ರದೇಶದಲ್ಲಿ ನಡೆದಿದೆ. ರಕ್ಷಿತ್ (27) ಹೃದಯಘಾತದಿಂದ ಮೃತಪಟ್ಟ ಯುವಕ.

ಮೈಸೂರು ಮೂಲದ ಏಳು ಯುವಕರ ತಂಡ ಟ್ರಕ್ಕಿಂಗ್ ಆಗಮಿಸಿದ್ದರು. ಕುದುರೆಮುಖದಿಂದ-ನೇತ್ರಾವತಿ ಪೀಕ್ ಸ್ಪಾಟ್​ಗೆ ತೆರಳಿದ್ದರು. ನೇತ್ರಾವತಿ ಪೀಕ್​ಗೆ ಹೋಗುವ ಮಾರ್ಗದಲ್ಲಿ ಯುವಕ ಮೃತಪಟ್ಟಿದ್ದಾನೆ. ನೇತ್ರಾವತಿ ಪೀಕ್​ನಿಂದ ಮೃತದೇಹವನ್ನ ಪೊಲೀಸರು ಕಳಸಕ್ಕೆ ತಂದಿದ್ದಾರೆ.

Leave a Reply

Your email address will not be published. Required fields are marked *