ಮೆಜೆಸ್ಟಿಕ್​ನಲ್ಲಿ ಮಾಧವಿ ಪರಿಚಯವಾಗಿದ್ದ ಮಹಿಳೆ ವೃದ್ಧರೊಬ್ಬರ ಬಳಿಯಿಂದ ಚಿನ್ನಾಭರಣ ದೋಚಿದ ಆರೋಪ ಕೇಳಿಬಂದಿದೆ. ಆದರೆ ಪೊಲೀಸರು ದೂರು ನೀಡಿದ ವೃದ್ಧನ ಮೇಲೆಯೇ ಶಂಕೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ನಗರದ ಮೆಜೆಸ್ಟಿಕ್​ನಲ್ಲಿ ಪರಿಚಯವಾಗಿದ್ದ ಮಹಿಳೆ ವೃದ್ಧರೊಬ್ಬರಿಗೆ ಮತ್ತು ಬರುವ ಔಷಧಿ ನೀಡಿ  ಲೂಟಿ (Robbery) ಮಾಡಿದ ಆರೋಪ ಕೇಳಿಬಂದಿದೆ. ಪ್ರಕರಣ ಸಂಬಂಧ ಆಭರಣಗಳನ್ನು ಕಳೆದುಕೊಂಡ ವೃದ್ಧ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ, ತನಿಖೆಗೆ ಇಳಿದ ಪೊಲೀಸರಿಗೆ ದೂರು ಕೊಟ್ಟ ವೃದ್ಧನ ಮೇಲೆಯೇ ಅನುಮಾನ ವ್ಯಕ್ತವಾಗಿದೆ.

ವೃದ್ಧ ನಾಗರಾಜು ಎಂಬವರಿಗೆ ಮೆಜೆಸ್ಟಿಕ್​ನಲ್ಲಿ ಮಾಧವಿ ಎಂಬ ಮಿಳೆ ಪರಿಚಯವಾಗಿದ್ದಾಳೆ. ಹೀಗೆ ಪರಿಚಯವಾಗಿದ್ದಾಕೆ ನಾಗರಾಜು ಜೊತೆ ಸಿನಿಮಾ ನೋಡಲೆಂದು ಮಲ್ಲೇಶ್ವರಂನಲ್ಲಿರುವ ಮಂತ್ರಿಮಾಲ್​ಗೆ ಕರೆದುಕೊಂಡು ಹೋಗಿದ್ದಾಳೆ. ಈ ವೇಳೆ ಮತ್ತು ಬರುವ ಔಷಧಿ ನೀಡಿ 3 ಲಕ್ಷ ಮೌಲ್ಯದ ಚಿನ್ನಾಭರಣ ಲೂಟಿ ಮಾಡಿ ಸಿನಿಮಾ ಮಧ್ಯೆಯೇ ಹೊರಟು ಹೋಗಿದ್ದಾಳೆ ಎಂದು ಆರೋಪಿಸಲಾಗಿದೆ.

ಜೂನ್ 12 ರಂದು 12.30 ಕ್ಕೆ ನಡೆದ ಘಟನೆ ಇದಾಗಿದ್ದು, ನಾಗರಾಜು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಆರಂಭಿಸಿದ್ದಾರೆ. ಅದರಂತೆ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ವೇಳೆ ನಾಗರಾಜು ಹಾಗೂ ಮಹಿಳೆ ನಗು ನಗುತ್ತಲೆ ಮಂತ್ರಿ ಮಾಲ್​ನಿಂದ ತೆರಳಿರುವುದು ಸೆರೆಯಾಗಿದೆ. ಹೀಗಾಗಿ ನಾಗರಾಜು ನೀಡಿದ ದೂರಿನ‌ ಮೇಲೆಯೇ ಪೊಲೀಸರಿಗೆ ಶಂಕೆ ವ್ಯಕ್ತವಾಗಿದ್ದು, ವೃದ್ಧನನ್ನ ಬ್ಲಾಕ್ ಮೇಲೆ ಮಾಡಿ ಚಿನ್ನಾಭರಣ ಪಡೆದಿರುವ ಸಾಧ್ಯತೆಯೂ ಇದೆ. ಸದ್ಯ ಮಲ್ಲೇಶ್ವರಂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಸೆಕ್ಯೂರಿಟಿ ಮೇಲೆ ಹಲ್ಲೆ ಮಾಡಿದ್ದ ಆರೋಪಿ ಬಂಧನ

ಬೆಂಗಳೂರು: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ನಿವಾಸದ ಬಳಿ ಪುಡಿ ರೌಡಿ ಪುಂಡಾಟ ನಡೆಸಿ ಸೆಕ್ಯೂರಿಟಿ ಮೇಲೆ ಹಲ್ಲೆ ಮಾಡಿದ್ದ ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತೌಸಿಫ್ (22) ಬಂಧಿತ ಆರೋಪಿ. ಈತನ ತನಿಖೆ ವೇಳೆ ಮತ್ತೊಂದು ಸೆಕ್ಯೂರಿಟಿಗಾರ್ಡ್​ ಮೇಲೆ ನಡೆಸಿದ್ದ ಹಲ್ಲೆ ಪ್ರಕರಣ ಬೆಳಕಿಗೆ ಬಂದಿದೆ.

ಜೂನ್ 18ರ ರಾತ್ರಿ ಬೊಮ್ಮಾಯಿ ಮನೆಯ ಕೊಂಚ ದೂರದಲ್ಲೇ ಸೆಕ್ಯೂರಿಟಿ ಮೇಲೆ ಹಲ್ಲೆ ಮಾಡಿದ್ದ ಆರೋಪಿ ತೌಸಿಫ್, ಸಂಜಯ್ ನಗರದಲ್ಲಿ ಇತ್ತಿಚೆಗೆ ಸೆಕ್ಯೂರಿಟಿ ಮೇಲೆ ಹಲ್ಲೆ ನಡೆಸಿರುವುದನ್ನು ಬಾಯಿಬಿಟ್ಟಿದ್ದಾನೆ. ಅಲ್ಲದೆ, ಈ ಪ್ರಕರಣ ಸಂಬಂಧ ಸಂಜಯ್ ನಗರ ಠಾಣೆಯಲ್ಲೂ ಪ್ರಕರಣ ದಾಖಲಾಗಿತ್ತು. ಇದರ ಜೊತೆಗೆ ಸುಲಿಗೆ ಪ್ರಕರಣ ಸೇರಿದಂತೆ 6 ವಿವಿಧ ಪ್ರಕರಣಗಳು ತೌಸಿಫ್ ವಿರುದ್ಧ ದಾಖಲಾಗಿದೆ. ಸದ್ಯ ತನಿಖೆ ನಡೆಸುತ್ತಿರುವ ಆರ್​ಟಿ ನಗರ ಪೊಲೀಸರು ಆರೋಪಿ ವಿರುದ್ಧ ರೌಡಿಪಟ್ಟಿ ತೆರೆಯಲು ಚಿಂತನೆ ನಡೆಸುತ್ತಿದ್ದಾರೆ.

ಮಲ್ಲೇಶ್ವರಂ ರೈಲು ಹಳಿ ಮೇಲೆ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಬೆಂಗಳೂರು: ನಗರದ ಮಲ್ಲೇಶ್ವರಂ ರೈಲು ಹಳಿ ಮೇಲೆ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಮಾಹಿತಿ ತಿಳಿದ ರೈಲ್ವೇ ಠಾಣೆ ಪೊಲೀಸರು, ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳೀಯ ಪೊಲೀಸ್ ಠಾಣೆಗೂ ಮಾಹಿತಿ ನೀಡಿದ್ದಾರೆ. ಸದ್ಯ ಮೃತ ವ್ಯಕ್ತಿಯ ಗುರುತು ಪತ್ತೆ ಹಚ್ಚಲು ರೈಲ್ವೆ ಪೊಲೀಸರು ಮುಂದಾಗಿದ್ದು, ಕೊಲೆಯೋ ಅಥವಾ ಆತ್ಮಹತ್ಯೆ ಎಂಬುದರ ಬಗ್ಗೆ ಪತ್ತೆ ಕಾರ್ಯ ನಡೆಯುತ್ತಿದೆ.

Leave a Reply

Your email address will not be published. Required fields are marked *