Dvitva: ಪುನೀತ್ ರಾಜ್ಕುಮಾರ್ ನಟಿಸಬೇಕಿದ್ದ ದ್ವಿತ್ವ ಸಿನಿಮಾವನ್ನು ಯಾವಾಗ ಶುರು ಮಾಡುತ್ತಾರೆ ಪವನ್ ಕುಮಾರ್?
(Puneeth Rajkumar) ಅಗಲಿ ವರ್ಷದ ಮೇಲಾಯ್ತು. ಆದರೆ ಅವರ ನೆನಪು ಇಂದಿಗೂ ತುಸುವೂ ಮಾಸಿಲ್ಲ. ಹಲವು ಸುಂದರ ನೆನಪುಗಳು ಹಾಗೂ ಸಿನಿಮಾಗಳನ್ನು ಪುನೀತ್ ರಾಜ್ಕುಮಾರ್ ಬಿಟ್ಟು ಹೋಗಿದ್ದಾರೆ. ಪುನೀತ್ ತಮ್ಮ ವೃತ್ತಿ ಜೀವನದಲ್ಲಿ ಹೊಳವು ದಾರಿಯಲ್ಲಿ ಇರುವಾಗಲೇ ಹೋಗಿಬಿಟ್ಟರಲ್ಲ ಎಂಬ ಬೇಸರ ಸಿನಿಮಾ ಪ್ರೇಮಿಗಳನ್ನು ಬಹುವಾಗಿ ಕಾಡಿತ್ತು ಈಗಲೂ ಕಾಡುತ್ತಿದೆ. ಸಿದ್ಧ ಮಾದರಿಯ ಮಾಸ್ ಸಿನಿಮಾಗಳಿಂದ ಕಂಟೆಂಟ್ ಓರಿಯೆಂಟೆಡ್ ಸಿನಿಮಾಗಳತ್ತ ಹೊರಳುವ ಸಮಯದಲ್ಲಿಯೇ ಪುನೀತ್ ಅಗಲಿಬಿಟ್ಟರು. ಅವರು ದ್ವಿತ್ವ (Dvitva) ಸಿನಿಮಾವನ್ನು ಒಪ್ಪಿಕೊಂಡಾಗ ಸಿನಿಮಾ ಪ್ರೇಮಿಗಳು ಹಾಗೂ ಅಪ್ಪು ಅಭಿಮಾನಿಗಳಿಬ್ಬರೂ ಖುಷಿ ವ್ಯಕ್ತಪಡಿಸಿದ್ದರು. ಆದರೆ ಆ ಸಿನಿಮಾ ಸೆಟ್ಟೇರುವ ಮುನ್ನವೇ ಅಪ್ಪು ಹೋಗಿಬಿಟ್ಟರು. ಈಗ ಆ ಸಿನಿಮಾ ಏನಾಗಿದೆ? ಮತ್ತೆ ಯಾವಾಗ ಶುರುವಾಗುತ್ತದೆ? ನಿರ್ದೇಶಕ ಪವನ್ (Pawan Kumar) ಆ ಬಗ್ಗೆ ಮಾತನಾಡಿದ್ದಾರೆ.
ತಮ್ಮ ಹೊಸ ಸಿನಿಮಾ ಧೂಮಂನ ಕುರಿತಾದ ಸುದ್ದಿಗೋಷ್ಠಿಯಲ್ಲಿ ಪುನೀತ್ ರಾಜ್ಕುಮಾರ್ ಜೊತೆಗೆ ಮಾಡಬೇಕಿದ್ದ ದ್ವಿತ್ವ ಸಿನಿಮಾ ಬಗ್ಗೆ ಮಾತನಾಡಿದ ಪವನ್, ”ದ್ವಿತ್ವ ಸಿನಿಮಾವನ್ನು ಹತ್ತಿರದಲ್ಲಿ ಕೈಗೆತ್ತಿಕೊಳ್ಳುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ತಾವೇಕೆ ಈಗ ದ್ವಿತ್ವ ಸಿನಿಮಾ ಮಾಡುತ್ತಿಲ್ಲ ಎಂಬುದಕ್ಕೆ ಎರಡು ಕಾರಣಗಳನ್ನು ಪವನ್ ಕುಮಾರ್ ನೀಡಿದ್ದಾರೆ.
”ದ್ವಿತ್ವ ಸಿನಿಮಾ ಬಗ್ಗೆ ನಾನು ಯೋಚಿಸಿದಾಗೆಲ್ಲ ನನಗೆ ಪುನೀತ್ ರಾಜ್ಕುಮಾರ್ ಅವರೇ ಕಣ್ಣ ಮುಂದೆ ಬರುತ್ತಾರೆ. ನಾನು ಆ ಕತೆಯನ್ನು ಕಲ್ಪಿಸಿಕೊಂಡಿದ್ದೇ ಪುನೀತ್ ರಾಜ್ಕುಮಾರ್ ಅವರ ಮೂಲಕ ಹಾಗಾಗಿ ನನಗೆ ಆ ನೆನಪಿನಿಂದ ಹೊರಗೆ ಬರಲು ಇನ್ನೂ ಆಗಿಲ್ಲ. ಆ ಪಾತ್ರಕ್ಕೆ ಬೇರೆಯವರನ್ನು ಕಲ್ಪಿಸಿಕೊಳ್ಳಲು ಸಹ ಸಾಧ್ಯವಾಗುತ್ತಿಲ್ಲ. ಆ ನೆನಪುಗಳಿಂದ ಹೊರಬರಲೆಂದು ಆ ಸಿನಿಮಾವನ್ನು ಸದ್ಯಕ್ಕೆ ಪಕ್ಕಕ್ಕೆ ಇಟ್ಟಿದ್ದೀವಿ” ಎಂದಿದ್ದಾರೆ.
”ಆ ದುರ್ಘಟನೆ ನಡೆದಾಗ ಚಿತ್ರೀಕರಣದಿಂದ ಕೇವಲ ಎರಡು ವಾರ ನಾವು ದೂರವಿದ್ದೆವು. ಎಲ್ಲ ತಯಾರಿಯೂ ಆಗಿಬಿಟ್ಟಿತ್ತು. ಘಟನೆ ನಡೆದ ಕೆಲವು ದಿನಗಳ ಬಳಿಕ ಹೊಂಬಾಳೆಯವರು ಸಹ ಆ ಸಿನಿಮಾವನ್ನು ಸದ್ಯಕ್ಕೆ ಪಕ್ಕಕ್ಕಿಡೋಣ ಎಂದರು. ನನಗೂ ಸಹ ಹಾಗೆಯೇ ಅನ್ನಿಸುತ್ತಿದ್ದು, ಆ ಪಾತ್ರಕ್ಕೆ ಬೇರೆಯವರನ್ನು ಕಲ್ಪಿಸಿಕೊಳ್ಳಲು ಸಾಧ್ಯವವಾಗುವವರೆಗೆ ಆ ಸಿನಿಮಾವನ್ನು ಕೈಗೆತ್ತಿಕೊಳ್ಳುವುದು ಕಷ್ಟ” ಎಂದಿದ್ದಾರೆ ಪವನ್.
”ಅಲ್ಲದೆ, ಈಗ ಸತತವಾಗಿ ಥ್ರಿಲ್ಲರ್ ಅಂಶಗಳಿರುವ ಸಿನಿಮಾಗಳನ್ನೆ ಮಾಡುತ್ತಾ ಬಂದಿದ್ದೇನೆ. ಲೂಸಿಯಾ ಬಳಿಕ ಯೂ-ಟರ್ನ್ ಇದೀಗ ಧೂಮಂ ಎಲ್ಲವೂ ಥ್ರಿಲ್ಲರ್ ಅಂಶಗಳುಳ್ಳ ಸಿನಿಮಾಗಳೇ ಆಗಿವೆ. ದ್ವಿತ್ವ ಸಹ ಸ್ವಲ್ಪ ಅದೇ ಜಾನರ್ಗೆ ಸೇರಿದ ಸಿನಿಮಾ. ಹಾಗಾಗಿ ಒಂದರ ಹಿಂದೊಂದು ಥ್ರಿಲ್ಲರ್ ಬೇಡ ಅನಿಸುತ್ತಿದೆ. ಫೀಲ್ ಗುಡ್ ಮಾದರಿಯ ಅಥವಾ ನಿಜ ಜೀವನದಿಂದ ಇನ್ಸ್ಪೈರ್ ಆಗಿರುವ ಪ್ರೇಮಕತೆ ಅಥವಾ ಬೇರೆ ರೀತಿಯ ಕತೆಯನ್ನು ಸಿನಿಮಾ ಮಾಡುವ ಆಲೋಚನೆಯೂ ಇದೆ. ಹಾಗಾಗಿ ಈ ಸದ್ಯಕ್ಕೆ ದ್ವಿತ್ವ ಸಿನಿಮಾವನ್ನು ಕೈಗೆತ್ತಿಕೊಳ್ಳುವುದಿಲ್ಲ” ಎಂದಿದ್ದಾರೆ ಪವನ್ ಕುಮಾರ್.